ಶಿಡ್ಲಘಟ್ಟ: ಜಿಲ್ಲೆಯಲ್ಲಿ ಅತ್ಯಧಿಕ ಹೆರಿಗೆಗಳು ನಡೆದ ಆಸ್ಪತ್ರೆವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭದ್ರತೆ ಒದಗಿಸಲು ಆರಂಭಿಸಿದ ಕಾಂಪೌಂಡ್ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಚಿಕಿತ್ಸೆಗೆಂದು ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು ಪರದಾಡುವಂತಾಗಿದೆ.
ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿ.ಮುನಿಯಪ್ಪ ತಾಲೂಕಿನ ಜಂಗಮಕೋಟೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರಲ್ಲದೆ 30 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ಕಾಂಪೌಂಡ್ ಕಾಮಗಾರಿಗೆ ಚಾಲನೆ ನೀಡಿದ್ದರು.
ಅಪಾಯಕ್ಕೆ ಆಹ್ವಾನ: ಕಾಮಗಾರಿಯ ಗುತ್ತಿಗೆ ಪಡೆದ ಲೇಪಾಕ್ಷಿ ಕನ್ಸಟ್ರಕ್ಷನ್ ಕಂಪನಿಯ ಗುತ್ತಿಗೆದಾರರು ಕೇವಲ ಆಸ್ಪತ್ರೆಯ ಮುಂದೆ ಗುಣಿಗಳು ಅಗೆದು ಮೌನಕ್ಕೆ ಶರಣಾಗಿದ್ದು, ರೋಗಿಗಳು ಮತ್ತು ಸಂಬಂಧಿಕರು ಆಸ್ಪತ್ರೆಗೆ ಹೋಗಿ ಬರಲು ಹರಸಾಹಸ ಪಡುವಂತಾಗಿದೆ. ಆಸ್ಪತ್ರೆಗೆ ತುರ್ತು ವಾಹನ ಮಾತ್ರ ಸಂಚರಿಸಲು ಜಾಗ ಬಿಟ್ಟು ಅದರ ಸುತ್ತಲು ಗುಣಿಗಳು ಅಗೆದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಯಾಮಾರಿದರೆ ಗುಣಿಯೊಳಗೆ: ಹೋಬಳಿ ಕೇಂದ್ರವಾಗಿರುವ ಜಂಗಮಕೋಟೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಈ ಆಸ್ಪತ್ರೆ ಆಶ್ರಯಿಸಿಕೊಂಡು ಬರುತ್ತಾರೆ. ಆದರೆ ಆಸ್ಪತ್ರೆ ಸುತ್ತಲೂ ಗುಣಿಗಳು ಅಗೆದಿರುವುದರಿಂದ ವಯಸ್ಸಾದವರು ಮತ್ತು ಮಹಿಳೆಯರು ಗುಣಿ ದಾಟಿ ಆಸ್ಪತ್ರಗೆ ಬರುವಂತಾಗಿದೆ. ಸ್ವಲ್ಪ ಯಾಮಾರಿದರೆ ಗುಣಿಯೊಳಗೆ ಬೀಳುವುದು ನಿಶ್ಚಿತ.
ರೋಗಿಗಳಿಗೆ ಇನ್ಫೆಕ್ಷನ್: ಈ ಕುರಿತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಂಬಿಕಾ ಅವರನ್ನು ಸಂಪರ್ಕಿಸಿದಾಗ ಆಸ್ಪತ್ರೆಯ ಕಾಂಪೌಂಡ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ. ಕಾಮಗಾರಿಗಳ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು, ಸಂಬಂಧಿಕರಿಗೆ ತೊಂದರೆಯಾಗಿದೆ.
ಜೊತೆಗೆ ಧೂಳು ಆಸ್ಪತ್ರೆಯೊಳಗೆ ಸೇರುತ್ತಿರುವುದರಿಂದ ರೋಗಿಗಳಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಲೋಕಸಭಾ ಚುನಾವಣೆ ವೇಳೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಿಧಾನಗತಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ನೀಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತಗಮನ ಹರಿಸಿ ಸ್ಥಗಿತಗೊಂಡಿರುವ ಆಸ್ಪತ್ರೆಯ ಕಾಂಪೌಂಡ್ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕಾಗಿದೆ.