ಹೊಸಪೇಟೆ: ಬಳ್ಳಾರಿ ರಸ್ತೆಯ ಬಾರ್‌ವೊಂದರಲ್ಲಿ ಮಾ. 29ರಂದು ಸಂಜೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಘಟನೆ ನಡೆದ 12 ಗಂಟೆಯೊಳಗೆ ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪಿನಾಯಕನಹಳ್ಳಿಯ ಯರಿಸ್ವಾಮಿ (32) ಮತ್ತು ಮಧುಸೂದನ್ (22) ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಲೆಯಾದ ವ್ಯಕ್ತಿ ಮತ್ತು ಆರೋಪಿಗಳು ಸಂಬಂಧಿಕರಾಗಿದ್ದು ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದ ನಂತರ ಆರೋಪಿಗಳ ಪತ್ತೆಯಾಗಿದೆ ಎಂದು ಎಸ್ಪಿ ಡಾ| ಕೆ.ಅರುಣ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಯರಿಸ್ವಾಮಿ ಮತ್ತು ಮೃತ ಗಂಗಾಧರ ಬಾರ್‌ನಲ್ಲಿ ಮದ್ಯ ಸೇವಿಸುವ ವೇಳೆ ಮಾತಿನ ಮಧ್ಯೆ ಯರಿಸ್ವಾಮಿ ಪತ್ನಿ ಬಗ್ಗೆ ಗಂಗಾಧರ್ ತಪ್ಪಾಗಿ ಮಾತಾಡಿದ್ದಾನೆ. ಆಗ ತನ್ನ ಪತ್ನಿಯನ್ನು ಮತ್ತು ಮಧುಸೂದನ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಯರಿಸ್ವಾಮಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಗಂಗಾಧರ್‌ನ ಎದೆಯ ಎಡಭಾಗದಲ್ಲಿ ಎರಡು ಸಲ ಇರಿದಿದ್ದು, ತೀವ್ರ ರಕ್ತಸ್ರಾವವಾದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಮೃತ ಗಂಗಾಧರ ಗೋವಾ ಕ್ಯಾಸಿನೊದಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಊರಿಗೆ ಬಂದು ಹೋಗುತ್ತಿದ್ದ. ಆರೋಪಿ ಯರಿಸ್ವಾಮಿ ಫೈನಾನ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು ಎರಡು ಮದುವೆಯಾಗಿದ್ದಾರೆ. ಮಧುಸೂದನ್ ಲಾಡ್ಜ್ ಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದರು.
ಠಾಣೆಯ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಪಿಐ ಶ್ರೀನಿವಾಸ್, ಪಿಎಸ್‌ಐ ಕುಮಾರ್, ಎಎಸ್‌ಐ ಕೋದಂಡಪಾಣಿ, ಪೇದೆಗಳಾದ ಗಾಳೆಪ್ಪ, ತಿಮ್ಮಣ್ಣ ಅವರು ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.