ಹೊಸಪೇಟೆ: ತುಂಗಭದ್ರಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಒಮ್ಮೆಲೆ ಕುಸಿದಿದೆ. ಪ್ರವಾಹ ತಗ್ಗಿದ್ದರೂ ಸಹ ಪ್ರವಾಸಿಗರು ಹಂಪಿಗೆ ಬರಲು ಹಿಂದೇಟು ಹಾಕುತ್ತಿದ್ದು, ಶೇ. 65 ರಷ್ಟು ಮಂದಿ ಪ್ರವಾಸ ರದ್ದುಗೊಳಿಸಿದ್ದಾರೆ.
Advertisement
ಮಲೆನಾಡಿನಲ್ಲಿ ಆದ ಅತಿವೃಷ್ಟಿಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗಿತ್ತು. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಐತಿಹಾಸಿಕ ಹಂಪಿಯ 60 ಕ್ಕೂ ಹೆಚ್ಚು ಸ್ಮಾರಕಗಳು ನೀರಿನಲ್ಲಿ ಮುಳುಗಿದ್ದವು. ಅಲ್ಲದೆ ಕೆಲವೆಡೆ ತೆಪ್ಪ ಬಳಸಿ ಪ್ರವಾಸಿಗರನ್ನು ರಕ್ಷಿಸಲಾಗಿತ್ತು. ಹಂಪಿ ಪಕ್ಕದ ವಿರೂಪಾಪುರಗಡ್ಡೆಯ ಹೋಟೆಲ್ ಹಾಗೂ ಲಾಡ್ಜ್ನಲ್ಲಿ ವ್ಯಾಸ್ತವ್ಯ ಹೂಡಿದ್ದ 300ಕ್ಕೂ ಹೆಚ್ಚು ಜನ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಎಲ್ಲರನ್ನು ರಕ್ಷಿಸಲಾಗಿದ್ದರೂ ಪ್ರವಾಸಿಗರಲ್ಲಿ ಆತಂಕ ದೂರವಾಗಿಲ್ಲ. ಅಲ್ಲದೆ ಪ್ರವಾಸಿಗರು ತಾತ್ಕಾಲಿಕ ವಾಗಿ ಹಂಪಿಗೆ ಬರದಂತೆ ಸೂಚನೆ ನೀಡಲಾಗಿತ್ತು. ಸದ್ಯ ಹಂಪಿಯಲ್ಲಿ ಪ್ರವಾಹ ಇಳಿದಿದ್ದರೂ ಪ್ರವಾಸಿಗರೇ ಕಾಣುತ್ತಿಲ್ಲ.
Related Articles
Advertisement
ಶ್ರಾವಣ ಮಾಸ: ರಾಜ್ಯದ ದೂರದ ಜಿಲ್ಲೆ ಹಾಗೂ ಹೊರರಾಜ್ಯದ ಪ್ರವಾಸಿಗರು ಹಂಪಿ ಪ್ರವಾಸವನ್ನು ಮೊಟಕುಗೊಳಿಸಿದ್ದರೆ, ಮತ್ತೂಂದಡೆ ಶ್ರಾವಣ ಮಾಸದ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ ಶನಿವಾರದಿಂದ ಸೋಮವಾರದ ಮೂರು ದಿನಗಳ ಸಾಲು ರಜೆ ಒಂದೆಡೆ, ಶ್ರಾವಣಮಾಸದ ವಿಶೇಷ ಪೂಜೆ- ದರ್ಶನಕ್ಕಾಗಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆ ಸೇರಿದಂತೆ ನೆರೆ ಆಂಧ್ರದಿಂದ ಹಂಪಿಗೆ ಭಕ್ತರು ಆಗಮಿಸಿದ್ದಾರೆ.