Advertisement

ಕೊಠಡಿ, ಶಿಕ್ಷಕರು ದೊರೆತರೆ ಶತಮಾನ ಸಂಭ್ರಮ ಇಮ್ಮಡಿ

08:17 PM Sep 20, 2021 | Team Udayavani |

ಕಾರ್ಕಳ: ಶತಮಾನೋತ್ಸವದ ಹೊಸ್ತಿಲಿಗೆ ಬಂದು ತಲುಪಿರುವ ಹೊಸ್ಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ

Advertisement

ಸೇರ್ಪಡೆಗೊಂಡು ಮೇಲ್ದರ್ಜೆಗೇರಿದೆ. ಇದು  ಶಾಲೆಯ ಹಿರಿಮೆ ಹೆಚ್ಚಿಸಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ತಕ್ಕಂತೆ ಕೊಠಡಿ, ಶಿಕ್ಷಕರ ಕೊರತೆ  ಇದೆ. ಇದು   ನಿವಾರಣೆಯಾದರೆ  2023ರಲ್ಲಿ  ನಡೆಯುವ ಶತಮಾನೋತ್ಸವದ ಸಂಭ್ರಮ  ಇಮ್ಮಡಿಯಾಗಲಿದೆ.

1923ರಲ್ಲಿ ಪ್ರಾರಂಭಗೊಂಡ  ಈ ಶಾಲೆಗೆ  ಇನ್ನೆರಡು  ವರ್ಷ  ಕಳೆದರೆ  ಶತಮಾನೋತ್ಸವದ ಸಂಭ್ರಮ. ಆ ವೇಳೆಗೆ   ಶಾಲೆಯ  ಕೊಠಡಿ ಮತ್ತು  ಶಿಕ್ಷಕರ ಕೊರತೆ  ನಿವಾರಣೆಯಾಗಬೇಕು ಎನ್ನುವ ತವಕ   ಶಿಕ್ಷಕರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘಗಳವರದು. ಈ ನಿಟ್ಟಿನಲ್ಲಿ ಕೊರತೆ ನೀಗಿಸುವ ಪ್ರಯತ್ನ ಆರಂಭವಾಗಿದೆ.

ಎಲ್‌ಕೆಜಿ, ಯುಕೆಜಿಯೂ ಇದೆ:

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 282 ಮಕ್ಕಳು ಕಲಿಯುತ್ತಿದ್ದಾರೆ.  ಕಳೆದ ಸಾಲಿನಲ್ಲಿ 272 ಮಕ್ಕಳಿದ್ದರು. ಕಳೆದ ವರ್ಷಕ್ಕಿಂತ 10 ಮಂದಿಯಷ್ಟೇ ವಿದ್ಯಾರ್ಥಿಗಳು ಹೆಚ್ಚಾ ದರೂ  ಶಾಲೆಯಲ್ಲಿ  ಮಕ್ಕಳ ಕೊರತೆಯಿಲ್ಲ. 1ನೇ ತರಗತಿ ಯಲ್ಲಿ 47, 2ನೇ ತರಗತಿಯಲ್ಲಿ 50, 3ನೇ ತರಗತಿಯಲ್ಲಿ 39, 4ನೇ ತರಗತಿಯಲ್ಲಿ 27, 5ನೇ ತರಗತಿಯಲ್ಲಿ 39, 6ನೇ ತರಗತಿಯಲ್ಲಿ 30, 7ನೇ ತರಗತಿಯಲ್ಲಿ  50  ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಎಲ್‌ಕೆಜಿ, ಯುಕೆಜಿಯೂ ಕೂಡ  ಶಾಲೆಯಲ್ಲಿವೆ.

Advertisement

2021ನೇ ಸಾಲಿನ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಖ್ಯಮಂತ್ರಿಗಳ  ಅಮೃತ ಶಾಲಾ ಸೌಲಭ್ಯ ಯೋಜನೆಯಡಿ  ಶಾಲೆಯನ್ನು  ಆಯ್ಕೆ ಮಾಡಲು ಅವಕಾಶವಿರುತ್ತದೆ. ಹೀಗಾಗಿಯಾದರೂ ಇಲ್ಲಿನ ಮೂಲಸೌಕರ್ಯ ಹೆಚ್ಚಳವಾಗಬಹುದೆಂದು ಸಚಿವರಿಗೆ  ಶಾಲಾ ಕಡೆಯಿಂದ  ಮನವಿ ಮಾಡಿಕೊಂಡಿದ್ದಾರೆ.

ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಉತ್ತಮ ಬೋಧನ ವ್ಯವಸ್ಥೆಯಿದೆ. ಖಾಸಗಿ, ನಗರ ಕೇಂದ್ರಿತವಾಗಿ ಮಕ್ಕಳು  ಸರಕಾರಿ ಶಾಲೆ ಬಿಟ್ಟು ಹೋಗದಂತೆ ಕೆಪಿಎಸ್‌ ಸ್ಕೂಲ್‌ ಆಗುವ  6 ವರ್ಷಗಳ ಹಿಂದೆಯೇ  6 ಮತ್ತು 7ನೇ ತರಗತಿ ಮಕ್ಕಳಿಗೆ  ಆಂಗ್ಲ ಪಾಠವನ್ನು  ಆರಂಭಿಸಲಾಗಿತ್ತು.  ಅತಿಥಿ  ಶಿಕ್ಷಕರನ್ನು ಬಳಸಿಕೊಂಡು  ಶಿಕ್ಷಣ ನೀಡಲಾಗಿತ್ತು. ಮಕ್ಕಳು ಸರಕಾರಿ ಶಾಲೆ ಬಿಟ್ಟು  ಹೋಗದಂತೆ  ಮುಂಚಿತವಾಗಿಯೇ  ಯೋಜನೆ ರೂಪಿಸಿ ರುವುದರಿಂದ ವಿದ್ಯಾರ್ಥಿಗಳ ಕೊರತೆ ಕಾಡಲಿಲ್ಲ.

ಮಹಿಳಾ ಶಿಕ್ಷಕರೇ ಇಲ್ಲಿರುವುದು:

ಇಲ್ಲಿ 4 ಮಂದಿ ಶಿಕ್ಷಕರಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಮಹಿಳಾ ಶಿಕ್ಷಕರೇ ಆಗಿರುವುದು.  ಅದು ಕೂಡ 50 ವರ್ಷ ವಯಸ್ಸಿನವ‌ರು.

ಸಚಿವರ ಮೇಲೆ ನಿರೀಕ್ಷೆ:

ಅಮೃತಮಹೋತ್ಸವ ಯೋಜನೆಯಡಿ ಶಾಲೆಯನ್ನು ಸೇರಿಸಲು,  4 ಸುಸಜ್ಜಿತ  ಶಾಲಾ ಕೊಠಡಿ ನಿರ್ಮಿಸಿ ಕೊಡಲು  ಸಚಿವರಿಗೆ  ಶಿಕ್ಷಕರು, ಎಸ್‌ಡಿಎಂಸಿಯವರು, ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ  ಇತ್ತೀಚೆಗಷ್ಟೆ  ಮನವಿ ಸಲ್ಲಿಸಿದ್ದರು. ಸಚಿವರು ಕೂಡ  ಸ್ಪಂದಿಸಿದ್ದು, ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ  ಶಿಕ್ಷಕರು, ಮಕ್ಕಳು ಎಲ್ಲರೂ  ಸುಸಜ್ಜಿತ ಕೊಠಡಿ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚುವರಿ ಕೊಠಡಿ ಅಗತ್ಯ:

ಶಾಲೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ  10 ತರಗತಿ ಕೊಠಡಿಗಳ ಅಗತ್ಯವಿದೆ. ಪ್ರಸ್ತುತ  ನಾಲ್ಕು ಕೊಠಡಿಗಳು ಮಾತ್ರ  ಲಭ್ಯವಿದೆ. ಉಳಿದ ಕೊಠಡಿಗಳು  ಶಿಥಿಲಾವಸ್ಥೆಯಲ್ಲಿದೆ.  ಕಚೇರಿ ಸೇರಿ  4  ಹೆಚ್ಚುವರಿ  ಕೊಠಡಿಗಳು ಬೇಕಿವೆ.

ಸಚಿವರಿಂದ ಸ್ಪಂದನೆ:

ಶಿಕ್ಷಕರು, ಹೆಚ್ಚುವರಿ ಕೊಠಡಿ ಅಗತ್ಯವಿದೆ. ಮತ್ತೇನೂ ಸಮಸ್ಯೆ ಇಲ್ಲ. ಸಚಿವರು ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ  ಅದು ಈಡೇರುವ  ಆಶಯ  ನಮ್ಮೆಲ್ಲರಲ್ಲಿದೆ.  –ಪ್ರಭಾವತಿ, ಮುಖ್ಯ ಶಿಕ್ಷಕಿ

-ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next