ಹೊಸಂಗಡಿ: ಉಡುಪಿ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಹೊಂಸಗಡಿ ಪೇಟೆಯ ತಿರುವಿನಲ್ಲಿರುವ ಸೇತುವೆ ಕಾಮಗಾರಿ ಅಸಮರ್ಪಕವಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೇತುವೆಯಿಂದ ರಸ್ತೆಗೆ ಸಂಪರ್ಕಿಸುವವರೆಗೆ ಡಾಮರೀಕರಣವಾಗದೇ ಇರುವುದರಿಂದ ರಾಡಿಯೆದ್ದು, ಕೆಸರುಮಯವಾಗಿದೆ.
ಕುಂದಾಪುರ, ಸಿದ್ದಾಪುರದಿಂದ ಬಾಳೆಬರೆ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸಂಗಡಿ ತಿರುವಿನಲ್ಲಿ ಕೆಲ ತಿಂಗಳ ಹಿಂದೆ ಸೇತುವೆ ಕಾಮಗಾರಿ ನಡೆದಿದೆ. ಆದರೆ ಅದನ್ನು ಪೂರ್ಣಪ್ರಮಾಣದಲ್ಲಿ ಮಾಡದೇ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
50 ಲಕ್ಷ ರೂ. ವೆಚ್ಚ
ಈ ಸೇತುವೆಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ನಿರ್ದೇಶನದಡಿ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡು, ಮೇ ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಆಗ ಸೇತುವೆ ಅವ್ಯವಸ್ಥೆಯಿಂದಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬಳಿಕ ಸ್ಥಳೀಯ ಜಿ.ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ, ದುರಸ್ತಿಗೆ ಅವರ ಮೂಲಕ ಒತ್ತಾಯಿಸಲಾಗಿತ್ತು. ಮತ್ತೆ ದುರಸ್ತಿ ಮಾಡಲಾಗಿ, ಈಗ 15-20 ದಿನಗಳ ಹಿಂದಷ್ಟೇ ಈ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಆದರೆ ಇನ್ನೂ ಕೂಡ ಈ ಸೇತುವೆಗೆ ಪ್ರೊಟೆಕ್ಷನ್ ವಾಲ್, ಡಾಮರೀಕರಣ ಇತ್ಯಾದಿ ಕಾಮಗಾರಿ ಆಗಿಲ್ಲ. ಸೇತುವೆ ಕೆಲಸ ಮುಗಿದಿದ್ದರೂ, ರಸ್ತೆಯವರೆಗೆ ಕಾಂಕ್ರೀಟೀಕರಣವಾಗದೇ ಮಣ್ಣಿನ ರಸ್ತೆಯಿಡೀ ಕೆಸರುಮಯವಾಗಿದೆ.
ಅಪಾಯಕಾರಿ ತಿರುವು
ಹೊಸಂಗಡಿ ಪೇಟೆಯಲ್ಲಿರುವ ಈ ಸೇತುವೆ ಸಮೀಪದ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ಸೇತುವೆ ಕಾಮಗಾರಿಯು ಅಪೂರ್ಣವಾಗಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದಲೇ ಸಂಚರಿಸಬೇಕಾಗಿದೆ. ಘನ ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿ ಇದಾಗಿರುವುದರಿಂದ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.
– ಪ್ರಶಾಂತ್ ಪಾದೆ