Advertisement

ಜಲಾಶಯದಿಂದ ನೀರು ಹೊರಕ್ಕೆ

03:38 PM Sep 06, 2019 | Naveen |

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಗುರುವಾರ ಜಲಾಶಯದ 22 ಕ್ರಸ್ಟ್‌ ಗೇಟ್ ತೆರೆದು 67 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಬಿಡಲಾಗಿದೆ.

Advertisement

ತುಂಗಭದ್ರಾ ಜಲಾನಯನ ಪ್ರದೇಶಗಳಾದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ತುಂಗಾ, ಭದ್ರಾ ಹಾಗೂ ವರದಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಶಯದ ನೀರಿನ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗಿದೆ. ಆಗಸ್ಟ್‌ ಎರಡನೇ ವಾರದಲ್ಲಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಜಲಾಶಯ ತುಂಬಿ ಒಮ್ಮೆ ನೀರನ್ನು ಹೊರಬಿಡಲಾಗಿತ್ತು. ನಂತರ ನೀರಿನ ಒಳಹರಿವು ಹೆಚ್ಚಾದಂತೆ ಒಂದು, ನಾಲ್ಕು ಗೇಟ್‌ಗಳನ್ನು ತೆರೆದು ಆಗಾಗ ನೀರು ನದಿಗೆ ಹರಿಸಲಾಗಿತ್ತು. ಆದರೆ ಬುಧವಾರ ಒಮ್ಮೆಲೆ ಒಳಹರಿವು ಹೆಚ್ಚಿದ್ದರಿಂದ ರಾತ್ರಿ 12 ಗೇಟ್ ತೆರೆಯಲಾಗಿತ್ತು. ಗುರುವಾರ ಬೆಳಗ್ಗೆ 22 ಗೇಟ್‌ಗಳನ್ನು ತೆರೆದು ನಿರಂತರವಾಗಿ ನದಿಗೆ ನೀರು ಹರಿಸಲಾಗುತ್ತಿದೆ.

ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮದ ಜನ-ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುಂಗಭದ್ರಾ ಜಲಮಂಡಳಿ ಅಧಿಕಾರಿಗಳು ಸೂಚಿಸಿದ್ದಾರೆ.

ಜುಲೈನಲ್ಲಿ ಭರ್ತಿಯಾಗಲಿಲ್ಲ ಜಲಾಶಯ: ಪ್ರತಿವರ್ಷ ಜುಲೈ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಭರ್ತಿಯಾಗಬೇಕಿದ್ದ ಜಲಾಶಯ ಈ ಬಾರಿ ಭರ್ತಿಯಾಗದೇ ಈ ಭಾಗದ ರೈತಾಪಿ ಜನರು ಆತಂಕದಲ್ಲಿದ್ದರು. ಕೊನೆಗೂ ಆಗಸ್ಟ್‌ ಎರಡನೇ ವಾರದ ಆರಂಭದಲ್ಲಿ ಜಲಾನಯನ ಪ್ರದೇಶದಲ್ಲಿ ಆಧಿಕ ಮಳೆಯಾಗಿ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಕೇವಲ ಎರಡು ಮೂರು ದಿನದಲ್ಲಿ ಜಲಾಶಯ ಭರ್ತಿಯಾಯಿತು. ಜಲಾಶಯ ಭರ್ತಿಯಾಗುತ್ತಿದಂತೇ ತುಂಗಭದ್ರಾ ಮಂಡಳಿ ಹೆಚ್ಚುವರಿ ನೀರನ್ನು ಆ. 10ರಂದು ನದಿಗೆ ಹರಿಸಿತು.

ಅಂದಿನಿಂದ ಜಲಾಶಯ ನೀರಿನ ಮಟ್ಟದಲ್ಲಿ ಏರಿಳಿತವಿತ್ತು. ಇದೀಗ ಜಲಾಶಯಕ್ಕೆ ಹರಿದು ಬರುವ ಒಳಹರಿವು ಏರಿಕೆ ಕಂಡಿದ್ದು, 60 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಈಗಷ್ಟೇ ನದಿ ನೀರಿನ ಮಟ್ಟ ತಗ್ಗಿದ ಹಿನ್ನೆಲೆಯಲ್ಲಿ ರೈತಾಪಿ ಜನರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದು, ದೈನಂದಿನ ಬದುಕಿಗೆ ಹೊಂದಿಕೊಂಡಿದ್ದರು. ಇದೀಗ ಮತ್ತೂಮ್ಮೆ ನದಿಗೆ ಹೆಚ್ಚು ನೀರು ಹರಿಬಿಟ್ಟಿರುವುದರಿಂದ ಅನಿವಾರ್ಯವಾಗಿ ನದಿ ಪಾತ್ರದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದ್ದು, ದಿಕ್ಕು ತೋಚದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next