Advertisement

ಅಂತರ್ಜಲ ವೃದ್ಧಿ ಅಭಿಯಾನ

12:57 PM Jul 21, 2019 | Team Udayavani |

ಹೊಸಪೇಟೆ: ಸ್ಥಳೀಯ ರೋಟರಿ ಕ್ಲಬ್‌ನಿಂದ ಸ್ವಚ್ಛತಾ ಭಾರತ ಅಭಿಯಾನದಂತೆ ನಗರದಲ್ಲಿ ಅಂತರ್ಜಲ ವೃದ್ಧಿ ಅಭಿಯಾನ ಮಾಡುವ ಮೂಲಕ ಜೀವಜಲದ ಮಹತ್ವ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ರೋಟರಿ ಕ್ಲಬ್‌ ನೂತನ ಅಧ್ಯಕ್ಷ ವಿಶ್ವನಾಥ ಗೊಗ್ಗ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ಜಲ ವೃದ್ಧಿಗೆ ಸಂಬಂಧಿಸಿದ ತಜ್ಞರನ್ನು ಕರೆದುಕೊಂಡು ತರಬೇತಿ ಕೊಡಿಸಲಾಗುವುದು. ಆಗಸ್ಟ್‌ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಮಳೆಯ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿಸುವ ಸಂಬಂಧ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ತಾಲೂಕಿನ ಸರ್ಕಾರಿ 25 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಗೃಹ ನಿರ್ಮಾಣ, ಕುಡಿವ ನೀರು ಸೇರಿ ಅಗತ್ಯ ಸೌಲಭ್ಯವನ್ನು ರೋಟರಿ ಕ್ಲಬ್‌ನಿಂದ ಒದಗಿಸಲಾಗುವುದು. ಹಸಿರಿಗಾಗಿ ನಮ್ಮ ಹೆಜ್ಜೆ ಎನ್ನುವ ಕಾರ್ಯಕ್ರಮದ ಮೂಲಕ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆ ಮತ್ತು ನಗರಸಭೆ ಸಹಕಾರದೊಂದಿಗೆ ಮಾಡಲಾಗುವುದು ಎಂದು ಹೇಳಿದರು.

ಕ್ಲಬ್‌ನಿಂದ 10 ಸಾವಿರಕ್ಕೂ ಅಧಿಕ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಅಲ್ಲದೇ, ಕನ್ನಡಕವನ್ನು ಉಚಿತವಾಗಿ ನೀಡಲಾಗಿದೆ. 2,658 ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿದ್ದು, ಆ ಪೈಕಿ ತಾಲೂಕಿನ 92 ವಿದ್ಯಾರ್ಥಿಗಳಲ್ಲಿ ಕಣ್ಣಿನ ತೊಂದರೆ ಇರುವುದು ಪತ್ತೆಯಾಗಿದೆ. ಅವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಲಾಗುವುದು ಎಂದು ತಿಳಿಸಿದರು. ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಮುನಿವಾಸುದೇವ ರೆಡ್ಡಿ ಮಾತನಾಡಿ, ರೋಟರಿ ಸಂಸ್ಥೆಯಿಂದ ರೋಟರಿ ಯೂತ್‌ ಲೀಡರ್‌ ಶಿಫ್ ಅವಾರ್ಡ್‌ (ರೈಲಾ) ಯೋಜನೆ ಮೂಲಕ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಐದು ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಿಕ್ತಿ ವೃದ್ಧಿಗಾಗಿ ಸ್ವರ್ಣಬಿಂದು ಪ್ರಾಶನ, ಅಂತರ್‌ಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ಇಂಟರ್‌ ಕ್ಲಬ್‌ಗಳಿಂದ ಕ್ರೀಡಾ ಚಟುವಟಿಕೆ ಆಯೋಜನೆಗೆ ಆಧ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ರೋಟರಿ ನಾಮನಿರ್ದೇಶಿತ ಜಿಲ್ಲಾ ಗೌವರ್ನರ್‌ ತಿರುಪತಿ ನಾಯ್ಡು, ಶ್ರಿಪತಿ ರಾವ್‌, ರೋಟರಿ ತಾಲ್ಲೂಕು ಖಜಾಂಚಿ ಅಬ್ದುಲ್ ಹಕ್‌, ಸಾರ್ವಜನಿಕ ಸಂಪರ್ಕ ನಿರ್ದೇಶಕ ಸತ್ಯನಾರಾಯಣ ಕ್ಲಬ್‌ ತರಬೇತುದಾರ ವೈ. ಶ್ರೀನಿವಾಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next