Advertisement

Hosapete: ಸರ್ಕಾರಿ ಶಾಲೆಗೆ ಬೀಗ; 90 ಮಕ್ಕಳು ಬೀದಿಗೆ

08:40 AM Oct 17, 2023 | Team Udayavani |

ಹೊಸಪೇಟೆ: ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಕೋಟಿ, ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಬಡವರ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುತ್ತಿದ್ದೇವೆ ಎಂದು ಆಳುವ ಸರ್ಕಾರಗಳು ಹೇಳಿಕೊಳ್ಳುತ್ತವೆ. ಆದರೆ, ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ಧೋರಣೆಗೆ ಸರ್ಕಾರಿ ಶಾಲೆಯ 90 ಮಕ್ಕಳು ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.

Advertisement

ನಗರದ ಹೃದಯ ಭಾಗದಲ್ಲಿರುವ ರವೀಂದ್ರನಾಥ್‌ ಠ್ಯಾಗೋರ್‌ ಸರ್ಕಾರಿ ಶಾಲೆಯ ಬಾಗಿಲು ಮುಚ್ಚಲಾಗಿದೆ. ಇದರಿಂದ ಶಾಲಾ ಮಕ್ಕಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಪಾಲಕರಲ್ಲಿ ಆತಂಕ ಮನೆ ಮಾಡಿದೆ. ನನ್ನಜ್ಜ, ಅಪ್ಪ, ಅಣ್ಣ ವ್ಯಾಸಂಗ ಮಾಡಿರುವ ಶಾಲೆಯನ್ನು ಮುಚ್ಚಬೇಡಿ ಎಂದು ಜನರು ಗೋಗರೆಯುತ್ತಿದ್ದಾರೆ.

ಏನಿದು ಪ್ರಕರಣ ?:

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿತ್ರಕೆರೆಯ 32 ನೇ ವಾರ್ಡ್‌ ನಲ್ಲಿರುವ ಸರ್ಕಾರಿ ರವೀಂದ್ರನಾಥ ಠ್ಯಾಗೋರ್‌ ಶಾಲೆ 1925 ರಲ್ಲಿ ಆರಂಭಗೊಂಡಿದ್ದು, ನವೆಂಬರ್‌ ತಿಂಗಳಿಗೆ ಸರ್ಕಾರಿ ಶಾಲೆ ಪ್ರಾರಂಭವಾಗಿ ನೂರು ವರ್ಷ ಆಗಲಿದೆ. ನೂರು ವರ್ಷದ ಹಿಂದೆ ಶಾಲೆಗಾಗಿ ದೇಸಾಯಿ ಕುಟುಂಬದವರು ದಾನ ನೀಡಿದ್ದಾರೆ.

ದಾನದ ಪತ್ರ ಇಲಾಖೆ ಬಳಿ ಇಲ್ಲದೇ ಇರುವುದಕ್ಕೆ, ಮಾಲಿಕರು ಸ್ಥಳೀಯ ಕೋರ್ಟ್‌ಗೆ ಹೋಗಿದ್ದರು. ನ್ಯಾಯಾಲಯದಲ್ಲಿ ತೀರ್ಪು ಮೂಲ ಮಾಲೀಕರ ಪರ ಬಂದಿದ್ದು, ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಶಾಲೆಗೆ ಬೀಗ ಜಡಿಯಲಾಗಿದೆ. ಶತಮಾನದ ಹೊಸ್ತಿಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ದುಸ್ಥಿತಿ ಬಂದಿದ್ದು, 90 ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ಈ ಶಾಲೆಯ ಹಳೇ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ.

Advertisement

50 ಹೆಣ್ಣು ಮಕ್ಕಳು, 40 ಗಂಡು ಮಕ್ಕಳಿರುವ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ತರಗತಿಗಳು ನಡೆಯುತ್ತವೆ. ಸರ್ಕಾರಿ ಶಾಲೆ ಬಂದ್‌ ಆಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಜಾಗ ನಮ್ಮದು ಎಂದ್ಹೇಳಿ, ಏಕಾಏಕಿ ಶಾಲೆಗೆ ಬೀಗ ಹಾಕಿದ್ದಾರೆ. ಈ ಮೂಲಕ ಮಕ್ಕಳನ್ನ ಬೀದಿಗೆ ತಳ್ಳಿದ್ದಾರೆ. ಶಾಲೆಯನ್ನು ತೆರೆದು ಎಂದಿನಂತೆ ಮಕ್ಕಳಿಗೆ ಪಾಠ-ಪ್ರವಚನ ಮಾಡದೇ ಹೋದರೆ, ಶಾಲೆ ಮತ್ತು ಶಿಕ್ಷಣ ಇಲಾಖೆ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ರವೀಂದ್ರನಾಥ ಠ್ಯಾಗೂರ್‌ ಶಾಲೆಯ ಜಾಗ ವಿಚಾರವಾಗಿ ಕಳೆದ 2015ರಿಂದಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಶಾಲೆಯ ಜಾಗವನ್ನು ದೇಸಾಯಿ ಕುಟುಂಬದ ಸ್ವಾಧೀನಕ್ಕೆ ನೀಡುವಂತೆ ನ್ಯಾಯಾಲಯ ಅ.11 ರಂದು ತೀರ್ಪು ಪ್ರಕಟಿಸಿದೆ. ಈ ಪ್ರಕರಣ ಕುರಿತಂತೆ ಹೈಕೋರ್ಟ್‌ ತಾತ್ಕಾಲಿಕ ಅ.13 ರಂದು ತಡೆಯಾಜ್ಞೆ ನೀಡಿದ್ದು, ಶಿಕ್ಷಣ ಇಲಾಖೆ ಸ್ವಾಧೀನಕ್ಕೆ ಪಡೆಯಲು ಸೂಚಿಸಿದೆ. –ಚೆನ್ನಬಸಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಪೇಟೆ.

ನಗರದ ಸರ್ಕಾರಿ ರವೀಂದ್ರನಾಥ ಠ್ಯಾಗೂರ್‌ ಶಾಲೆ ಶತಮಾನೋತ್ಸವ ಹೊಸ್ತಿನಲ್ಲಿದೆ. ಈ ಶಾಲೆಯಲ್ಲಿ ಬಡ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಈ ಹಿಂದೆ ಶಾಲೆ ಜಾಗವನ್ನು ದಾನ ನೀಡಲಾಗಿತ್ತು ಎಂಬ ಮಾಹಿತಿ ಇದೆ. ದಸರಾ ರಜೆ ಮುಗಿದ ಮೇಲೆ ಶಾಲೆ ಆರಂಭವಾಗಲಿದೆ. ಆದರೆ, ಮಕ್ಕಳನ್ನು ಎಲ್ಲಿ ಕೂಡಿಸುವುದು. ಏನು ಮಾಡುವುದು ತಿಳಿಯದಾಗಿದೆ. –ಕಿಚಿಡಿ ಕ್ರಿಷ್ಣಮೂರ್ತಿ, ಚಿತ್ರಕೇರಿ ನಿವಾಸಿ, ಹೊಸಪೇಟ

„ಪಿ.ಸತ್ಯನಾರಾಯಣ

 

Advertisement

Udayavani is now on Telegram. Click here to join our channel and stay updated with the latest news.

Next