Advertisement

ಪ್ರಾಕೃತಿಕ- ಧಾರ್ಮಿಕ ಶ್ರೀಮಂತಿಕೆಯ ಚಂಡಿಕೇಶ್ವರಿ

01:26 PM Feb 05, 2020 | Naveen |

ಹೊಸನಗರ: ಒಂದೆಡೆ ಹಚ್ಚ ಹಸಿರು.. ಮತ್ತೊಂದೆಡೆ ಭೋರ್ಗರೆಯುವ ಜಲಪಾತ.. ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ಭಕ್ತರನ್ನು ಕೈಬೀಸಿ ಕರೆಯುವ ಕ್ಷೇತ್ರ ಬಾಳೆಬರೆ. ಶ್ರೀ ಕ್ಷೇತ್ರ ಬಾಳೆಬರೆಯ ಚಂಡಿಕಾವನದಲ್ಲಿ ನೆಲೆಸಿರುವ ಶ್ರೀ ಚಂಡಿಕಾಂಬಾ ದೇವಿ ಭಕ್ತರನ್ನು ಹರಸುವ ಶಕ್ತಿಯಾಗಿ ಪ್ರಸಿದ್ಧಿ ಪಡೆದಿದ್ದಾಳೆ.

Advertisement

ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಕಿರೀಟಪ್ರಾಯವಾಗಿರುವ ಶ್ರೀ ಕ್ಷೇತ್ರ ಚಂಡಿಕಾವನದಲ್ಲಿ ಈಗ ಉತ್ಸವದ ಸಂಭ್ರಮ. ಸುಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಪೂರ್ಣ ಶಿಲಾಮಯ ನೂತನ ದೇಗುಲದಲ್ಲಿ ಶ್ರೀದೇವಿ ಪುನರ್‌ ಪ್ರತಿಷ್ಠಾಪನೆಗೊಳ್ಳಲಿದ್ದು 6 ದಿನಗಳ ಕಾಲ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸನ್ನಿಧಿ ಸಾಕ್ಷಿಯಾಗಲಿದೆ.

ದೇಗುಲದ ಹಿನ್ನೆಲೆ: ಸುಮಾರು 7 ದಶಕದ ಹಿಂದೆ ಕೇರಳ ಮೂಲದ ನಂಬಿಯಾರ್‌ ಕುಟುಂಬದ ಹಿರಿಯ ಚಾಲಕ ವೃತ್ತಿಯ ದಿ| ಕೃಷ್ಣ ನಂಬಿಯಾರ್‌ ಹುಲಿಕಲ್‌ ಮಾರ್ಗದಲ್ಲಿ ಸಂಚರಿಸುವಾಗ ಆಯಾಸಗೊಂಡು ಲಾರಿಯನ್ನು ಅಲ್ಲೇ ನಿಲ್ಲಿಸಿ ಸ್ವಲ್ಪ ಹೊತ್ತು ನಿದ್ದೆಗೆ ಜಾರಿದ್ದರು. ಆ ವೇಳೆ ಕನಸಿನಲ್ಲಿ ಪ್ರತ್ಯಕ್ಷಗೊಂಡ ದೇವಿ ಈ ಸ್ಥಳದಲ್ಲೇ ತನ್ನನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸೂಚನೆ ಇತ್ತಳಂತೆ.

ಕೃಷ್ಣ ನಂಬಿಯಾರ್‌ ಬಡವರಾಗಿದ್ದರೂ ಕನಸಿನಲ್ಲಿ ಕೇಳಿದ ಮಾತನ್ನು ಆಜ್ಞೆ ಎಂಬಂತೆ ಪಾಲಿಸಿದ ಪರಿಣಾಮವೇ ಮೈದಳೆದದ್ದು ಈ ಚಂಡಿಕೇಶ್ವರಿ ದೇವಿ ಆಲಯ. ಭಕ್ತರಿಂದಲೇ ಪ್ರಸಿದ್ಧಿ: ಹುಲಿಕಲ್‌ ಘಾಟ್‌ನ ರಮಣೀಯ ಪ್ರಕೃತಿ ಸೌಂದರ್ಯದ ನಡುವೆ ಮೈದಳೆದ ಶ್ರೀ ಚಂಡಿಕೇಶ್ವರಿ ದೇವಾಲಯ ಭಕ್ತರಿಂದಲೇ ಪ್ರಸಿದ್ಧಿ ಪಡೆದಿದೆ.

ಹುಲಿಕಲ್‌ ಮಾರ್ಗದಲ್ಲಿ ಸಾಗುವ ಬಸ್ಸು, ಲಾರಿ ಸೇರಿದಂತೆ ಎಲ್ಲಾ ವಾಹನಗಳ ಚಾಲಕರು ಇಲ್ಲಿ ತಮ್ಮ ವಾಹನ ನಿಲ್ಲಿಸಿ ದೇವಿ ದರ್ಶನ ಪಡೆಯುತ್ತಿದ್ದರು. ಕಾಲ ಕ್ರಮೇಣ ದೇವಿಯ ಅಗಾಧ ಶಕ್ತಿ ಹಬ್ಬತೊಡಗಿತು. ಹೀಗಾಗಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತು. ಕೃಷ್ಣ ನಂಬಿಯಾರರ ನಿಧನಾನಂತರ ಅವರ ಪುತ್ರ ರವೀಂದ್ರ ನಂಬಿಯಾರ್‌ ದೇವಸ್ಥಾನದಲ್ಲಿ ನಿತ್ಯ ಸಕಲ ಧಾರ್ಮಿಕ ವಿಧಿ-  ವಿಧಾನದೊಂದಿಗೆ ಪೂಜೆಗಳನ್ನು ನೆರವೇರಿಸಿಕೊಂಡು ಬಂದರು.

Advertisement

ಭಕ್ತರ ನಡುವೆ ಉತ್ತಮ ಸಂಬಂಧ ಸಾಧಿಸಿ ದೇವಾಲಯ ಪ್ರಸಿದ್ಧಿಗೆ ತಮ್ಮದೇ ಮೌಲ್ಯಯುತ ಕೊಡುಗೆ ನೀಡಿದರು. ಅವರ ನಿಧನಾನಂತರ ನಂಬಿಯಾರ್‌ ಕುಟುಂಬದವರೇ ಇಲ್ಲಿ ಪೂಜೆ ಮುಂದುವರಿಸಿಕೊಂಡು ಬಂದಿದ್ದಾರೆ.

ನಿತ್ಯ ಅನ್ನಸಂತರ್ಪಣೆ: ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ದೇವಾಲಯಗಳು ಇವೆ. ಆದರೆ ಜಿಲ್ಲೆಯಲ್ಲಿ ನಿತ್ಯ ಅನ್ನಸಂತರ್ಪಣೆ ಸೇವೆ ಸಾಕಾರಗೊಂಡಿದ್ದು ಇಲ್ಲೆ ಮೊದಲು. ಅಲ್ಲದೆ ಪ್ರತಿನಿತ್ಯ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಕೂಡ ದೇವಿ ಸನ್ನಿಧಿ ಹೊಂದಿದೆ.

ಮೂರು ಕೋಟಿ ವೆಚ್ಚದ ಶಿಲಾಮಯ ದೇಗುಲ: ಹೆದ್ದಾರಿಗೆ ತಾಗಿಕೊಂಡಂತಿರುವ ಚಂಡಿಕೇಶ್ವರಿ ದೇಗುಲದಲ್ಲಿ ಬಹುದೊಡ್ಡ ಸಮಸ್ಯೆ ಎಂದರೆ ಜಾಗದ ಸಮಸ್ಯೆ. ಆದರೂ ಇರುವ ಜಾಗದಲ್ಲೇ ಭಕ್ತರ ಮನೋಭಿಲಾಷೆಯಂತೆ ಸುಮಾರು ಮೂರು ಕೋಟಿ ವೆಚ್ಚದ ಸಂಪೂರ್ಣ ಶಿಲಾಮಯ ದೇಗುಲವನ್ನು ನಿರ್ಮಿಸಿ ದೇವಿಯ ಪುನರ್‌ ಪ್ರತಿಷ್ಠಾಪನೆಗೆ ಶ್ರೀ ಚಂಡಿಕೇಶ್ವರಿ ದೇಗುಲ ಜೀರ್ಣೋದ್ಧಾರ ಸಮಿತಿ ಮುಂದಾಗಿದೆ. ಮಾತ್ರವಲ್ಲ ಯಶಸ್ವಿ ಕೂಡ ಆಗಿದೆ. ಇದಕ್ಕೆ ಹೆಗಲು ಕೊಟ್ಟಿದ್ದು ಖೈರಗುಂದ(ಮಾಸ್ತಿಕಟ್ಟೆ) ಗ್ರಾಪಂ ಜನರು.

ಪುಣ್ಯ ಕ್ಷೇತ್ರ ಶ್ರೀ ಚಂಡಿಕೇಶ್ವರಿ ದೇಗುಲದಲ್ಲಿ ಆರ್ಥಿಕ ಕೊರತೆ ಸಾಕಷ್ಟಿದೆ. ಆದರೆ ದೇವಿಯ ಇಚ್ಛೆ ಮತ್ತು ಭಕ್ತರ ಅಪೇಕ್ಷೆ ಮತ್ತು ವಿವಿಧ ರೀತಿಯ ಕೊಡುಗೆಯಿಂದ ವಿಶೇಷ ವಿನ್ಯಾಸ ಇರುವ ಸುಮಾರು ಮೂರು ಕೋಟಿ ವೆಚ್ಚದ ದೇವಿಯ ನೂತನ ಆಲಯ ನಿರ್ಮಾಣಗೊಳ್ಳಲು ಕಾರಣವಾಗಿದೆ. ಅಲ್ಲದೆ ದೇವಿಗೆ ಸುವರ್ಣದ ಮುಖವಾಡವನ್ನು ಸಿದ್ದಪಡಿಸಲಾಗಿದೆ. ಭಕ್ತರಿಂದಲೇ ಅಭಿವೃದ್ಧಿ ಮಾಡಿಸಿಕೊಂಡ ದೇವಿಯ ಸೇವೆಗೆ ಭಕ್ತರು ವಿಶೇಷವಾಗಿ ಸ್ಪಂದಿಸಿರುವುದು ಆನೆಬಲ ಬಂದಂತಾಗಿದೆ.
ಮನೋಜ್‌ ನಂಬಿಯಾರ್‌,
ವ್ಯವಸ್ಥಾಪಕರು, ಶ್ರೀ ಚಂಡಿಕಾಂಬಾ
ದೇವಸ್ಥಾನ ಬಾಳೆಬರೆ

ಬಾಳೆಬರೆ ಚಂಡಿಕೇಶ್ವರಿ ದೇವಿ ಇಡೀ ಖೈರಗುಂದ(ಮಾಸ್ತಿಕಟ್ಟೆ) ಗ್ರಾಪಂ ವ್ಯಾಪ್ತಿಯ ಅಧಿದೇವತೆ. ಇಲ್ಲಿಯ ಜನರು ದೇವಿಗೆ ವಿಶೇಷವಾಗಿ ನಡೆದುಕೊಳ್ಳುತ್ತಾರೆ. ದೇವಿಯ ನೂತನ ಶಿಲಾಮಯ ದೇಗುಲ ನಿರ್ಮಾಣ ಮತ್ತು ಉತ್ಸವದ ಯಶಸ್ಸಿಗೆ ಗ್ರಾಪಂನಿಂದ ಮಾತ್ರವಲ್ಲ ಇಡೀ ಊರಿನ ಜನತೆ ಟೊಂಕ ಕಟ್ಟಿ ನಿಂತಿದೆ. ಫೆ.4ರಿಂದ 9ರವರೆಗೆ ನಡೆಯುವ ಉತ್ಸವಕ್ಕೆ ಸಕಲ ಸಿದ್ಧತೆಯನ್ನು ದೇಗುಲ ಸಮಿತಿ ಅಡಿಯಲ್ಲಿ ಮಾಡಿಕೊಳ್ಳಲಾಗಿದೆ. ಅನಿಲ್‌ ಗೌಡ, ಅಧ್ಯಕ್ಷರು,
ಖೈರಗುಂದ (ಮಾಸ್ತಿಕಟ್ಟೆ) ಗ್ರಾಪಂ

„ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next