ಹೊಸನಗರ: ಮುಂಬೈನಿಂದ ಆಗಮಿಸಿದ್ದ ನಗರದ ಚಿಕ್ಕಪೇಟೆ ನಿವಾಸಿ ಯುವಕನೊಬ್ಬನನ್ನು ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿರುವ ಘಟನೆ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಈ ಯುವಕ ಶುಕ್ರವಾರ ಬೆಳಿಗ್ಗೆ ಬೈಕ್‌ನಲ್ಲಿ ನಗರಕ್ಕೆ ಆಗಮಿಸುತ್ತಿದ್ದಂತೆ ಸಂಪರ್ಕ ಸಾಧಿಸಿದ ನಗರ ಠಾಣೆ ಪೊಲೀಸರು, ಮೂಡುಗೊಪ್ಪ ಗ್ರಾಪಂ ಪಿಡಿಒ ವಿಶ್ವನಾಥ್ ಅವರಿಗೆ ಮಾಹಿತಿ ನೀಡಿದರು. ನಂತರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆತನನ್ನು ಕ್ವಾರಂಟೈನ್ ಮಾಡಲಾಯಿತು.
ಹೊಸನಗರಕ್ಕೆ ರವಾನೆ: ಮುಂಬೈನಿಂದ ಆಗಮಿಸಿರುವ ಕಾರಣ ಹೆಚ್ಚು ಸಮಸ್ಯೆಗೆ ಆಸ್ಪದ ನೀಡದಂತೆ ತಾಲೂಕು ಕೇಂದ್ರದ ವಿದ್ಯಾರ್ಥಿನಿಲಯದಲ್ಲಿ ಕ್ವಾರಂಟೈನ್ ಮಾಡುವಂತೆ ತಾಲೂಕು ಆಡಳಿತ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಯುವಕನನ್ನು ನಗರದಿಂದ ಹೊಸನಗರಕ್ಕೆ ಕರೆತಂದು ಕ್ವಾರಂಟೈನ್ ಮಾಡಲಾಗಿದೆ.
ಟ್ರಾವೆಲ್ ಹಿಸ್ಟರಿ: ಮುಂಬೈನ ಠಾಣೆ ಜಿಲ್ಲೆಯ ಶಾಂತಿನಗರದ ನಿತ್ಯ ರೆಸಿಡೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಸ್ನೇಹಿತರ ಜೊತೆ ಕಾರಿನಲ್ಲಿ ಕುಂದಾಪುರಕ್ಕೆ ಬಂದಿದ್ದಾನೆ. ನಂತರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಸ್ತಿಕಟ್ಟೆಗೆ ತೆರಳಿದ್ದಾನೆ. ಅಲ್ಲಿಂದ ತನ್ನ ಸಂಬಂ ಧಿಕರ ಬೈಕ್‌ನಲ್ಲಿ ಒಬ್ಬನೇ ನಗರದ ಕಡೆ ಆಗಮಿಸಿದ್ದಾನೆ. ಈ ಮಾಹಿತಿ ತಿಳಿದ ನಗರ ಠಾಣೆ ಪೊಲೀಸರು ಕೂಡಲೇ ಕ್ವಾರೆಂಟೈನ್‌ಗೆ ಒಳಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಮುಂಬೈನಿಂದ ನಗರಕ್ಕೆ ಆಗಮಿಸಿದ ಯುವಕನನ್ನು ನಗರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಹೊಸನಗರ ವಿದ್ಯಾರ್ಥಿನಿಲಯವೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಟ್ರಾವೆಲ್ ಹಿಸ್ಟರಿ ಮತ್ತು ಇತರ ಮಾಹಿತಿ ಕಲೆಹಾಕಲಾಗುತ್ತಿದೆ.
ವಿ.ಎಸ್.ರಾಜೀವ್, ತಹಶೀಲ್ದಾರ್,
ಹೊಸನಗರ