ಹೊಸನಗರ: ಕೃಷಿ ಇಲಾಖೆ ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತರಿಗೆ ಸಬ್ಸಿಡಿಯಲ್ಲಿ ಪೈಪ್ ಮತ್ತು ಜೆಟ್‌ಗಳನ್ನು ವಿತರಿಸುತ್ತಿದೆ. ಆದರೆ ಈ ಯೋಜನೆಯಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ಮಾತ್ರ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕೃಷಿ ಇಲಾಖೆಯಿಂದ ಭತ್ತದ ಕೃಷಿಗೆ ಬಳಸಿಕೊಳ್ಳಲು ರೈತರಿಗೆ 30 ಪೈಪ್ ಮತ್ತು 5 ಜೆಟ್‌ಗಳನ್ನು ರಿಯಾಯಿತಿ ದರದಲ್ಲಿ ರೂ.1900ಕ್ಕೆ ನೀಡಲಾಗುತ್ತಿದೆ. ಆದರೆ ಇದನ್ನು ಪಡೆಯಲು ರೈತ ಒಂದು ಎಕರೆ ಒಂದು ಗುಂಟೆ ಭತ್ತದ ಗದ್ದೆ ಹೊಂದಿರಬೇಕು. ಅಂತಹ ರೈತರನ್ನು ಗುರುತಿಸಿ ಸಹಾಯಧನದ ಅಡಿಯಲ್ಲಿ ಕೃಷಿ ಪರಿಕರವನ್ನು ವಿತರಿಸಲಾಗುತ್ತಿದೆ.
ಸಣ್ಣ ರೈತರಿಗೆ ಪ್ರಯೋಜನವಿಲ್ಲ: ಆದರೆ ಸರ್ಕಾರದ ಈ ಯೋಜನೆಯಿಂದ ಸಣ್ಣ ರೈತರಿಗೆ ಪ್ರಯೋಜನ ಇಲ್ಲದಂತಾಗಿದೆ. ಒಂದು ಎಕರೆಗಿಂತ ಕಡಿಮೆ ಭತ್ತದ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಯೋಜನೆಯಡಿ ಸೌಲಭ್ಯ ಸಿಗುತ್ತಿಲ್ಲ. ಮಲೆನಾಡು ಭಾಗದಲ್ಲಿ ಹಿಂದೆ ಕಂಡು ಬಂದ ಅತಿವೃಷ್ಟಿಯಿಂದಾಗಿ ಸಣ್ಣ ರೈತರು ಜರ್ಜರಿತರಾಗಿದ್ದು, ಈಗ ಯೋಜನೆಯ ಲಾಭವೂ ಇಲ್ಲದಂತಾಗಿದೆ.
ಭತ್ತದ ಬೆಳೆ ನಮೂದಾಗಿದ್ದರಷ್ಟೇ ಸೌಲಭ್ಯ: ಆರ್‌ಟಿಸಿಯಲ್ಲಿ ಭತ್ತದ ಬೆಳೆ ನಮೂದಾಗಿದ್ದರೆ ಮಾತ್ರ ಸಹಾಯಧನದಡಿ ಪೈಪ್ ಹಾಗೂ ಜೆಟ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ಕಂಪ್ಯೂಟರ್ ದೋಷದಿಂದ ಬೆಳೆ ಕಾಲಂ ನಮೂದಾಗಿಲ್ಲ. ಈ ಕಾರಣದಿಂದಲೂ ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಲೆನಾಡು ಭಾಗದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೆಚ್ಚಿದ್ದು, ಸರ್ಕಾರದ ಸಹಾಯಧನ ಯೋಜನೆಯಿಂದ ವಂಚಿತರಾಗುವಂತೆ ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ಸಣ್ಣ ರೈತರಿಗೂ ವಿಸ್ತರಿಸುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೆ ಪಹಣಿಯಲ್ಲಿ ಬೆಳೆ ನಮೂದಾಗಿರದಿದ್ದರೆ ಅದು ರೈತರ ತಪ್ಪಲ್ಲ. ಬೆಳೆ ಕಾಲಂನ್ನು ತುಂಬಿಕೊಂಡು ಯೋಜನೆ ವ್ಯಾಪ್ತಿಗೆ ಸೇರಿಸುವಂತೆ ಕೂಡ ಒತ್ತಾಯ ಕೇಳಿ ಬಂದಿದೆ.
ಸಣ್ಣ ರೈತರೇ ಹೆಚ್ಚು
ಮಲೆನಾಡು ಭಾಗದಲ್ಲಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ. ಒಂದು ಎಕರೆಗಿಂತ ಕಡಿಮೆ ಭತ್ತದ ಭೂಮಿ ಹೊಂದಿದ್ದರೆ ಅವರಿಗೆ ಇರುವ ಯೋಜನೆಯನ್ನು ಅರ್ಧದಷ್ಟು ಕಡಿಮೆ ಮಾಡಿ ಒದಗಿಸಲಿ. ಸಣ್ಣರೈತರಿಗೂ ನೀರಿನ ಸರಬರಾಜಿಗೆ ಪೈಪ್‌ಲೈನ್ ಅಗತ್ಯವಿದೆ.
ಚಂದ್ರಪ್ಪ ಕೊಡಸೆ,
ರೈತ ಹೆಬ್ಬುರುಳಿ.
ಸಡಿಲಿಕೆಗೆ ಪ್ರಸ್ತಾಪ
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಈ ಸಮಸ್ಯೆಯಿದ್ದು, ಸಡಿಲಿಕೆ ನೀಡುವಂತೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಈಗಾಗಲೇ ನಡೆದಿರುವ ಸಭೆಗಳಲ್ಲೂ ಕೂಡ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ ಸದ್ಯ ಇರುವ ಗೈಡ್‌ಲೈನ್ ಆಧಾರದ ಮೇಲೆ ಪೈಪ್ ಮತ್ತು ಜೆಟ್ ವಿತರಿಸಲಾಗುತ್ತಿದೆ.
ಡಾ.ಎಂ.ಕಿರಣಕುಮಾರ್, ಜಂಟಿ ಕೃಷಿ
ನಿರ್ದೇಶಕರು, ಶಿವಮೊಗ್ಗ
ಕುಮುದ ನಗರ