Advertisement
ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಸೇತುವೆಯ ಇಕ್ಕೆಲಗಳ ಸಂಪರ್ಕ ರಸ್ತೆಯ ಕಾಮಗಾರಿಯೂ ಪೂರ್ತಿಯಾಗಿ ಎರಡು ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ಮುಳುಗಡೆಯ ಭೀತಿ ಇಲ್ಲದೆ ಹೊಸ ಸೇತುವೆಯ ಮೇಲೆ ವಾಹನಗಳು ಸಂಚರಿಸಬಹುದಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಜನರ ಅಸಹಕಾರ ಪ್ರವೃತ್ತಿಯ ಕಾರಣದಿಂದಾಗಿ ಸೇತುವೆಯ ಉಪಯೋಗಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಈ ಮಳೆಗಾಲದಲ್ಲಿಯೂ ಹೊಸಮಠ ಮುಳುಗು ಸೇತುವೆಯ ಭೀತಿ ತಪ್ಪಿಲ್ಲ. ಸಂಪರ್ಕ ರಸ್ತೆಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕುಂಟಾದ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 45 ಸೆಂಟ್ಸ್ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಈ ಹಿಂದೆ ಗುರುತಿಸಲಾಗಿತ್ತು. ಇದೀಗ ಅದನ್ನು ಕಡಿತಗೊಳಿಸಿ ಕಡಬ ದಿಕ್ಕಿನಲ್ಲಿ ಸುಕೇಶ್ ಹೆಬ್ಟಾರ್ (2 ಸೆಂಟ್ಸ್) ಹಾಗೂ ಗಿರಿಯಪ್ಪ ಗೌಡ (16 ಸೆಂಟ್ಸ್ ) ಅವರಿಗೆ ಸೇರಿದ ಒಟ್ಟು 18 ಸೆಂಟ್ಸ್ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಉಪ್ಪಿನಂಗಡಿ ಭಾಗದಲ್ಲಿ ಸಂಪರ್ಕ ರಸ್ತೆಯ ಕಾಮಗಾರಿಗೆ ತೊಡಕಾಗಿರುವ ಎಚ್‌ಟಿ ಲೈನ್‌ನ ವಿದ್ಯುತ್ ಕಂಬವನ್ನು ಮೆಸ್ಕಾಂನವರು ತೆರವುಗೊಳಿಸಿಕೊಡಬೇಕಿದೆ. ಕಡಬ ಭಾಗದಲ್ಲಿ ಸಂಪರ್ಕ ರಸ್ತೆ ನಿರ್ಮಿಸಬೇಕಾದ ಜಾಗದ ಪಕ್ಕದಲ್ಲಿರುವ ನೀರು ಹರಿಯುವ ತೋಡಿಗೆ ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿದೆ. 7.50 ಕೋಟಿ ರೂ. ಅನುದಾನ
ಹೊಸಮಠದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ 7.50 ಕೋಟಿ ರೂ. ಬಿಡುಗಡೆಯಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಅಡಿಯಲ್ಲಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ನಡೆಯುತ್ತಿದೆ. ಈಗ ಇರುವ ಸೇತುವೆಗಿಂತ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 125 ಮೀ. ಉದ್ದ ಹಾಗೂ 12 ಮೀ. ಅಗಲದಲ್ಲಿ ತಡೆಬೇಲಿಯನ್ನು ಒಳಗೊಂಡ 6 ಪಿಲ್ಲರ್‌ಗಳ ಸುಂದರ ಸೇತುವೆ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಳ್ಳಲಿದೆ. ಪ್ರಸ್ತುತ ಇರುವ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ.
Related Articles
ಸಂಪರ್ಕ ರಸ್ತೆಗೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತಡವಾದುದರಿಂದ ಕಾಮಗಾರಿಗೆ ತಡೆಯುಂಟಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದೆ. ಸರಕಾರವು ಸದ್ರಿ ಭೂಮಿಯನ್ನು ಭೂ ಮಾಲಕರಿಗೆ ಭೂಮಿಯ ಮೌಲ್ಯ ನೀಡಿ ಖರೀದಿ ಮಾಡಿದೆ. ಮಳೆಗಾಲ ಆರಂಭವಾಗುವ ಮೊದಲು ಸಂಪರ್ಕ ರಸ್ತೆಯ ಕಾಮಗಾರಿ ಪೂರ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಪ್ರಯತ್ನದಲ್ಲಿದ್ದೇವೆ.
– ಪುಟ್ಟಸ್ವಾಮಿ ಎಇಇ, ಕೆಆರ್‌ಡಿಸಿಎಲ್, ಹಾಸನ
Advertisement
ನಾಗರಾಜ್ ಎನ್.ಕೆ.