Advertisement

ಕೇಂದ್ರದಿಂದ ತನಿಖಾ ಸಂಸ್ಥೆ ದುರ್ಬಳಕೆ

07:05 PM Sep 06, 2019 | Team Udayavani |

ಹೊಸದುರ್ಗ: ಕೇಂದ್ರ ಸರ್ಕಾರ ವಿರೋಧ ಪಕ್ಷದವರನ್ನು ರಾಜಕೀಯವಾಗಿ ಹತ್ತಿಕ್ಕುವ ಸಲುವಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಇಡಿ ಮೂಲಕ ಬಂಧಿಸಿದೆ ಎಂದು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಆರೋಪಿಸಿದರು.

Advertisement

ಡಿ.ಕೆ. ಶಿವಕುಮಾರ್‌ ಬಂಧನ ಖಂಡಿಸಿ ಗುರುವಾರ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್‌ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸಿದೆ. ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಮೂಲಕ ಬಂಧಿಸಿದೆ. ಕಾಂಗ್ರೆಸ್‌ ಹೈಕಮಾಂಡ್‌ನ‌ ಆದೇಶದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಗುಜರಾತ್‌ ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸಿ ಆಹ್ಮದ್‌ ಪಟೇಲ್ ಗೆಲುವಿಗೆ ಕಾರಣರಾಗಿದ್ದರು. ಇದನ್ನು ಸಹಿಸದ ಬಿಜೆಪಿಯವರು ಡಿಕೆಶಿ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಕುತಂತ್ರ ಮಾಡುತ್ತಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ಕೇಂದ್ರದ ಬಿಜೆಪಿ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಷಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳು ಹಾಗೂ ಯೋಜನೆಗಳಿಂದ ಇಂದು ರಾಷ್ಟ್ರ ಆರ್ಥಿಕ ಕುಸಿತಕ್ಕೆ ಒಳಗಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆಯಿಂದ ದೇಶ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಕೈಗಾರಿಕೆ, ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ. ಸುಮಾರು 2 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್‌ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಉದಾಸೀನ ಮನೋಭಾವ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಇಸ್ಮಾಯಿಲ್, ಕಾರ್ಯದರ್ಶಿ ಪಿ.ಎ. ಮಂಜುನಾಥ್‌, ಕೆಪಿಸಿಸಿ ಮಾಜಿ ಸದಸ್ಯ ಎಂ.ಪಿ. ಶಂಕರ್‌, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್‌, ಮುಖಂಡರಾದ ಆಗ್ರೋ ಶಿವಣ್ಣ, ಕಾರೇಹಳ್ಳಿ ಬಸವರಾಜ್‌, ಅಲ್ತಾಫ್‌, ಕೆ.ಟಿ. ಮಂಜುನಾಥ್‌, ನಾಯಿಗೆರೆ ಚಂದ್ರಶೇಖರ್‌, ಅರಳಿಹಳ್ಳಿ ಲೋಕಣ್ಣ, ಗೊಲ್ಲರಹಟ್ಟಿ ಕೃಷ್ಣಪ್ಪ, ಮಧುರೆ ನಟರಾಜ್‌, ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ, ಜಿಪಂ ಸದಸ್ಯೆ ಮಮತಾ, ಚೇತನಾ, ಪುರಸಭೆ ಸದಸ್ಯರಾದ ಜಾಫರ್‌, ಶಂಕರ್‌ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next