ಹೊಸದುರ್ಗ: ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಆಮಿಷಗಳಿಗೆ ಬಲಿಯಾಗದೆ ಬಿಜೆಪಿಗೆ ನಿಷ್ಠನಾಗಿದ್ದೇನೆ. ತಾಲೂಕಿನ ಅಭಿವೃದ್ಧಿಗಾಗಿ ಸಚಿವ ಸ್ಥಾನ ಕೇಳಿದ್ದು ತಪ್ಪೇ ಎಂದು ಶಾಸಕ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಪ್ರಶ್ನಿಸಿದರು.
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈತ್ರಿ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ಅಗತ್ಯವಿದ್ದ ಅನುದಾನ ಕೇಳಲು ಹೋಗುವುದನ್ನೇ ತಪ್ಪಾಗಿ ಅರ್ಥೈಸಿಕೊಂಡು, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುತ್ತಾರೆಂದು ಸುದ್ದಿಯಾಯಿತು. ಈ ಸಮಯದಲ್ಲಿ ಬಿಜೆಪಿ ಸಹ ನನ್ನ ಮೇಲೆ ಅನುಮಾನದ ನಡೆ ಅನುಸರಿಸಿತು. ಯಡಿಯೂರಪ್ಪ ಅವರ ಬಳಿ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ದೂರು ಹೇಳುತ್ತಿದ್ದಾರೆ. ನಾನು ಚುನಾವಣೆ ಹಾಗೂ ಪಕ್ಷ ಸಂಘಟನೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ನನಗೆ ಸಾಕಷ್ಟು ಆಫರ್ ಬಂದರೂ ಅದನ್ನೆಲ್ಲ ತಿರಸ್ಕರಿಸಿದೆ. ಅವಮಾನಗಳಿಂದ ನೊಂದಿದ್ದರೂ ಕ್ಷೇತ್ರದ ಜನತೆಗಾಗಿ ಸಹಿಸಿಕೊಂಡಿರುವೆ ಎಂದರು.
ಸಚಿವರನ್ನಾಗಿಸಿ ಎಂದಿದ್ದು ತಪ್ಪೇ?: ಬಿಜೆಪಿ ಮತ್ತು ಸರ್ಕಾರ ನನ್ನನ್ನು ಈಗಲೂ ಅನುಮಾನದಿಂದ ನೋಡುತ್ತಿವೆ. ಅವಕಾಶವಿದ್ದಲ್ಲಿ ನನ್ನನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕೇಳುವುದೇ ತಪ್ಪೇ ಎಂದು ಪುನರುಚ್ಚರಿಸಿದ ಗೂಳಿಹಟ್ಟಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ನನ್ನ ತೀರ್ಮಾನಗಳಿಗೆ ಬೆಂಬಲ ನೀಡುವುದರ ಜತೆಗೆ ಕ್ಷೇತ್ರದ ಜನತೆ ಕೇಳುವ ಪ್ರಶ್ನೆಗಳಿಗೆ ನನ್ನ ಪರವಾಗಿ ಸಮರ್ಥನೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.
ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಮೇಲಿನ ಹಂತದಲ್ಲಿ ನನಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಪಕ್ಷ ಮತ್ತು ಸರ್ಕಾರದ ಹಂತದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದ್ದು, ಅನಿವಾರ್ಯ ಸಂದರ್ಭದಲ್ಲಿ ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬದ್ಧರಾಗಿರಬೇಕು ಎಂದು ಮನವಿ ಮಾಡಿದರು.
ಪಿಎಸ್‌ಐ ನೇಮಕಕ್ಕೂ ಸ್ವಾತಂತ್ರ್ಯ ಇರಲಿಲ್ಲ: ಹಿಂದಿನ ಸರ್ಕಾರ ಇದ್ದಾಗ ಹೊಸದುರ್ಗಕ್ಕೆ ಇಂಥವರನ್ನೇ ಪಿಎಸ್‌ಐ ಆಗಿ ನಿಯೋಜನೆ ಮಾಡಿ ಎಂದು ಮುಖ್ಯಮಂತ್ರಿ ಕಚೇರಿಯಿಂದ ದಾವಣಗೆರೆ ಡಿಐಜಿಗೆ ಶಿಫಾರಸ್ಸು ಮಾಡಲಾಗುತ್ತದೆ. ಕಾಂಗ್ರೆಸ್ ಮತು ್ತಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಯಾವುದೇ ಕಡತಗಳಿಗೂ ಮಾನ್ಯತೆ ಸಿಗುತ್ತಿರಲಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಹೊಸದುರ್ಗ ಕ್ಷೇತ್ರಕ್ಕೆ ನಯಾಪೈಸೆ ಅನುದಾನ ನೀಡದೆ ತಾರತಮ್ಯ ಮಾಡಲಾಗಿದೆ. ಅಲ್ಲದೆ ನಮ್ಮ ಕಾರ್ಯಕರ್ತರೂ ಸಂಕಷ್ಟ ಅನುಭವಿಸಿದರು. ಇದಕ್ಕೆಲ್ಲಾ ಮೈತ್ರಿ ಸರ್ಕಾರದ ಆಡಳಿತವೇ ಕಾರಣ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದರು.
ನಾನು ಸೇರಿದಂತೆ ಅಭಿಮಾನಿಗಳು ಬಿಜೆಪಿಗೆ ಇನ್ನೂ ಹೊಂದಿಕೊಂಡಿಲ್ಲ. ನನಗೆ ಯಾವ ಪಕ್ಷವೂ ಆಗಿ ಬರೋದಿಲ್ಲ. ಬಿಜೆಪಿಯವರು ನನಗಾಗಿ ತ್ಯಾಗ ಮಾಡಿ ಟಿಕೆಟ್ ನೀಡಿದ್ದಾರೆ. ಅವರಿಗೆ ಅನ್ಯಾಯ ಮಾಡುವುದಿಲ್ಲ. ಪಕ್ಷ ಅಧಿಕಾರಕ್ಕೂ ಬಂದಿದ್ದು, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗಿಂತಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಘೋಷಿಸಿದರು.