Advertisement

ರಸ್ತೆ ದುರವಸ್ಥೆ; ನದಿಯ ಬದಿ ಇದ್ದೂ ನೀರಿಗೆ ಬರ

08:20 PM Sep 15, 2021 | Team Udayavani |

ಹೊಸಬೆಟ್ಟು ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಆರಂಭಿಸುವುದು ಅಗತ್ಯ ಬೇಡಿಕೆ. ಗ್ರಾಮದಲ್ಲಿ ಹಕ್ಕುಪತ್ರ ವಿತರಣೆ ಸಮರ್ಪಕವಾಗಿ ನಡೆಯಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರ’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಮೂಡುಬಿದಿರೆ: ಗುಡ್ಡ, ಕಾಡು, ನದಿ ಎಲ್ಲವೂ ಇರುವ ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮದಲ್ಲಿ ರಸ್ತೆ, ನೀರಿನ ಸಮಸ್ಯೆ ಎದ್ದು ಕಾಣಿಸುತ್ತಿದೆ.

ಟೆಲ್ಲಿಸ್‌ ನಗರ ಮೂಲಕ ಪುಚ್ಚಮೊಗರು ಗ್ರಾಮದತ್ತ ಸಾಗುವ ರಸ್ತೆ ಆರಂಭದಲ್ಲಿ ಕಾಂಕ್ರೀಟ್‌ ಹೊದ್ದುಕೊಂಡಿದ್ದು, ಮುಂದೆ ಕೃಷಿ -ವಸತಿ ವಲಯದ ಮೂಲಕ ಸಾಗುವ ರಸ್ತೆ ತೀರಾ ಇಕ್ಕಟ್ಟಾಗಿದೆ. ಎಂದೋ ಹಾಕಿದ ಡಾಮರು ಕಿತ್ತುಹೋಗಿದೆ. ಈ ರಸ್ತೆ ಅಗಲವಾಗಿ ಅಭಿವೃದ್ಧಿ ಹೊಂದಬೇಕಿದೆ.

ನದಿ ಇದೆ, ನೀರಿಲ್ಲ:

ಹತ್ತಿರದಲ್ಲಿರುವ ಪುಚ್ಚಮೊಗರು ಫಲ್ಗುಣಿ ನದಿಯಿಂದ ಮೂಡುಬಿದಿರೆ ಪುರಸಭೆಗೆ ದಿನದ 24 ತಾಸೂ ನೀರು ಸರಬರಾಜು ಆಗುತ್ತಿದೆ. ಆದರೆ ಪುರಸಭೆ, ಪುಚ್ಚಮೊಗರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೊಸಬೆಟ್ಟು ಗ್ರಾಮಕ್ಕೆ ಈ ಸೌಲಭ್ಯವಿಲ್ಲ.

Advertisement

ಡೀಮ್ಡ್ ಫಾರೆಸ್ಟ್‌ ಸಮಸ್ಯೆ:

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹೊಸಬೆಟ್ಟು ಗ್ರಾ.ಪಂ.ಗೆ ಸ್ವಂತದ್ದಾದ 5 ಎಕ್ರೆ ಜಾಗವಿದ್ದರೂ ಕಟ್ಟಡ ನಿರ್ಮಿಸಲಾಗದ ಸ್ಥಿತಿ ಇದೆ. ಮೂಡುಬಿದಿರೆ ಪುರಸಭೆಯ ಸರಹದ್ದಿನಲ್ಲೇ ಇದ್ದ ಪುಟ್ಟ ಪಂಚಾಯತ್‌ ಕಟ್ಟಡದಲ್ಲಿ ಸಭೆ ನಡೆಸಲು ಕಷ್ಟಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಯಿತು. ಆದರೆ ಇನ್ನೂ ಹೊಸ ಕಟ್ಟಡ ಮೈದಳೆದಿಲ್ಲ. ಜನಸಾಮಾನ್ಯರಿಗೆ ತಮ್ಮದೇ ಆಗಿರುವ ಭೂಮಿಯಲ್ಲಿ ಸ್ವಂತಕ್ಕೆ ಮನೆ ಕಟ್ಟಿಕೊಳ್ಳಲಾಗದ ಪರಿಸ್ಥಿತಿ ಇದೆ. ತಮ್ಮ ಮಕ್ಕಳಿಗೆ ಭೂಮಿಯನ್ನು ಪಾಲುಮಾಡಿಕೊಡಲಾರದ ದುಃಸ್ಥಿತಿ ಇದೆ.

ಇತರ ಸಮಸ್ಯೆಗಳೇನು?

  • ಮನೆ ನಿವೇಶನ ರಹಿತರ ಸಹಸ್ರಾರು ಅರ್ಜಿಗಳು ರಾಶಿ ಬಿದ್ದಿವೆ. ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದಾಗಿ ಈ ಅರ್ಜಿಗಳು ವಿಲೇ ಆಗುತ್ತಿಲ್ಲ. ಮಂಜೂರು ಮಾಡಿದ ಹಕ್ಕುಪತ್ರಗಳಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ.
  • ಗ್ರಾಮಕರಣಿಕರನ್ನು ಭೇಟಿಯಾಗಲು ಅವರ ಕಚೇರಿಗೆ ಹೋಗಲು ಏಳೆಂಟು ಕಿ.ಮೀ. ದೂರ ಸಾಗಬೇಕಿದೆ. ಆ ಕಚೇರಿಗೂ ಸ್ವಂತ ನೆಲೆ ಇಲ್ಲ; ಬಾಡಿಗೆ ಕಟ್ಟಡದಲ್ಲಿದೆ.
  • ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಲ್ಲ. ಸದ್ಯ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವೇ ಗತಿ.
  • ಹೊಸಬೆಟ್ಟು-ಪುಚ್ಚಮೊಗರು ಗ್ರಾಮಗಳನ್ನು ಜೋಡಿಸುವ ಸಂಪರ್ಕ ರಸ್ತೆ ಇಲ್ಲ.
  • ಕೃಷಿ ಪ್ರಧಾನವಾಗಿರುವ ಹೊಸಬೆಟ್ಟು ಗ್ರಾಮದ ಸೂಕ್ತ ತಾಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಬೇಕಾಗಿದೆ.
  • ಎಪಿಎಲ್‌, ಬಿಪಿಎಲ್‌ ಕಾರ್ಡ್‌ಗಳ ಗೊಂದಲ ನಿವಾರಿಸಬೇಕಿದೆ.
  • ಇಂಟರ್‌ನೆಟ್‌ ಸಮಸ್ಯೆ ಇದೆ; ಕೊರೊನಾ ಸಂದರ್ಭ ಅನಿವಾರ್ಯವಾಗಿರುವ ಆನ್‌ಲೈನ್‌ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ.
  • ಪುಚ್ಚಮೊಗರು, ತೋಡಾರು, ಇರುವೈಲು ಗ್ರಾಮಗಳ ನಡುವೆ ಇರುವ ಹೊಸಬೆಟ್ಟು ಗ್ರಾಮಕ್ಕೆ ಸರಕಾರಿ ಪ.ಪೂ. ಕಾಲೇಜು ಅಗತ್ಯವಾಗಿದೆ. ಇದರೊಂದಿಗೆ ವೃತ್ತಿಪರ ಕೌಶಲಾಭಿವೃದ್ಧಿಯ ಶಿಕ್ಷಣ, ಕೃಷಿ ಆಧಾರಿತ ಪುಟ್ಟ ಕೈಗಾರಿಕೆ, ಆಹಾರ ವಸ್ತು ಸಂಸ್ಕರಣ, ಮೌಲ್ಯವರ್ಧನ, ಸಂಗ್ರಹ ಇವುಗಳಿಗಿರುವ ಅವಕಾಶವನ್ನು ಶೋಧಿಸಿ, ಜನರಿಗೆ ಒದಗಿಸಬೇಕಾಗಿದೆ.
  • ಬಸ್‌ಗಳ ಸಂಖ್ಯೆ ಸಾಲದು; ಇನ್ನಷ್ಟು ಬೇಕಾಗಿವೆ.
  • ಹೊಸಬೆಟ್ಟು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಇದೆ; ಸರಕಾರಿ ಪ್ರಾಥಮಿಕ ಶಾಲೆ ಇಲ್ಲ.

 

-ಧನಂಜಯ ಮೂಡುಬಿದಿರೆ

 

Advertisement

Udayavani is now on Telegram. Click here to join our channel and stay updated with the latest news.

Next