ಬೆಂಗಳೂರು: ರಾಜ್ಯದ 350 ತೋಟಗಾರಿಕೆ ಫಾರ್ಮ್ಗಳಲ್ಲಿ 160 ಫಾರ್ಮ್ಗಳನ್ನು ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಡಾ.ಎಂ.ಎಚ್.ಮರಿಗೌಡ ಹಾರಿrಕಲ್ಚರಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಫೌಂಡೇಷನ್ ಮತ್ತು ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಡಾ.ಎಂ.ಎಚ್.ಮರಿಗೌಡರ ಜನ್ಮ ಶತಮಾನೋತ್ಸವದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಕಾರ್ಪೊರೇಟ್ ಏಜೆಂಟ್‌ನಂತೆ ವರ್ತಿಸುತ್ತಿದೆ. ತೋಟಗಾರಿಕೆ ಇಲಾಖೆ ಅಭಿವೃದ್ಧಿ ಪಡಿಸಿರುವ ಫಾರ್ಮ್ಗಳ ಕುರಿತು ನಿರ್ಲಕ್ಷ್ಯ ತೋರುತ್ತಿದೆ. ಅಗತ್ಯ ಮೂಲಸೌಕರ್ಯವಿಲ್ಲದೆ ಸುಮಾರು 400ಕ್ಕೂ ಹೆಚ್ಚು ಫಾರ್ಮ್ಗಳು ದುಸ್ಥಿತಿಯಲ್ಲಿವೆ. ಇವುಗಳ ಕುರಿತು ಮುತುವರ್ಜಿ ವಹಿಸಿ, ಮತ್ತಷ್ಟು ಅಭಿವೃದ್ಧಿ ಪಡಿಸಬೇಕೇ ವಿನಃ ಖಾಸಗಿ ಅವರಿಗೆ ವಹಿಸಬಾರದು ಎಂದು ಒತ್ತಾಯಿಸಿದರು.
ರೈತರ ಭೂಮಿ ರಿಯಲ್ ಎಸ್ಟೇಟ್ ಮಂದಿಯ ಪಾಲಾಗುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ಭೂಮಿ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಭೂಮಿಯನ್ನು ಭೂದಂಧೆಕೋರರಿಗೆ ಕೊಡಬಾರದು. ತೋಟಗಾರಿಕೆ ಇಲಾಖೆಯೊಂದಿಗೆ ನಿಕಟ ಸಂಪರ್ಕ ಸಾಧಿಸಿ ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ಪಡೆಯುವಂತಹ ಆಧುನಿಕ ಕೃಷಿ ಪದ್ಧತಿ ಬಳಕೆ ಮಾಡಿಕೊಳ್ಳಬೇಕು.
ಈ ಉದ್ದೇಶದಿಂದಲೇ ಎಂ.ಎಚ್.ಮರಿಗೌಡ ಅವರು ಅನೇಕ ಯೋಜನೆಗಳನ್ನು ಬಹಳ ಹಿಂದೆಯೇ ಜಾರಿಗೆ ತಂದಿದ್ದರು. ಅವರ ದೂರದೃಷ್ಟಿಯಿಂದ ಇಂದು ತೋಟಗಾರಿಕೆ ಉತ್ತಂಗಕ್ಕೇರಿದೆ ಎಂದರು. ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಮಾತನಾಡಿ, ತೋಟಗಾರಿಕೆ ಇಲಾಖೆ ಪಿತಾಮಹ ಎಂ.ಎಚ್.ಮರಿಗೌಡರ ಪರಿಶ್ರಮದಿಂದ ಇಂದು ತೋಟಗಾರಿಕೆ ಉತ್ತಮ ಸ್ಥಾನ ಪಡೆದಿದೆ.
ಉಳ್ಳವರು ಮಾಡುವ ಕಸುಬು ಸಾಮಾನ್ಯ ಜನರಿಗೂ ಅದರ ಫಲ ಮುಟ್ಟಲಿ ಎಂಬ ಆಶಾಭಾವನೆ ಹೊಂದಿದ್ದರು. ಇಲಾಖೆಯಲ್ಲಿ ಸತತ 30 ವರ್ಷಗಳ ಸೇವೆ ಮಾಡಿದ್ದ ಅವರು, ರಾಜ್ಯ ತೋಟಗಾರಿಕೆಯನ್ನು ದೇಶಕ್ಕೆ ಮಾದರಿಯಾಗುವಂತೆ ಮಾಡಿದ್ದಾರೆ. ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಬರಪೀಡಿತ ಪ್ರದೇಶಗಳಲ್ಲೂ ಕೂಡ ತೋಟಗಾರಿಕೆ ಬೆಳೆ ಬೆಳೆಯುವುದನ್ನು ತಿಳಿಸಿಕೊಟ್ಟ ಮಹಾನ್ ಸಾಧಕ ಎಂದರು.
ಡಾ.ಎಂ.ಎಚ್.ಮರಿಗೌಡ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆಯನ್ನು ಮೈಸೂರು ಮಹಾರಾಜ ಎಚ್.ಎಚ್.ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಹಾರಾಣಿ ಎಚ್.ಎಚ್.ತ್ರಿಷಿಕಾ ಕುಮಾರಿ ಒಡೆಯರ್, ಬರೋಡದ ಹಿಮ್ಮತ್ ಬಹದ್ದೂರ್ ಜಿತೇಂದ್ರ ಸಿಂಗ್ ಜಿ.ಗಾಯಕ್ವಾಡ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲಾಲ್‌ಬಾಗ್ ವಿನ್ಯಾಸಕಾರ ಜಿ.ಎಚ್.ಕೃಂಬಿಗಲ್ ಅವರ ಮರಿಮಗಳು ಆಲಿಯಾಫೆಲ್ಪ್ ಗಾರ್ಡಿನಿರ್ ಕೃಂಬಿಗಲ್, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಇದ್ದರು.