Advertisement

ತೋಟಗಾರಿಕೆ ವಿವಿ; ಅನುಷಾಗೆ ಎಂಎಸ್ಸಿಯಲ್ಲಿ ಆರು ಚಿನ್ನದ ಪದಕ

12:55 AM Jul 02, 2023 | Team Udayavani |

ಬಾಗಲಕೋಟೆ : ಆಕೆ ಪ್ರತಿಭಾವಂತೆ. ವ್ಯಾಸಂಗಕ್ಕೆ ತಂದೆ-ತಾಯಿಯ ಪೂರ್ಣ ಸಹಕಾರ. ಆದರೆ, ಕೃಷಿ ಬಗ್ಗೆ ಹೆಚ್ಚಿನ ಒಲವು. ಹೊಲದಲ್ಲಿ ದೊಡ್ಡಪ್ಪಂದಿರು ಬೆವರು ಸುರಿಸಿ ದುಡಿಯುತ್ತಿದ್ದ ತೋಟಗಾರಿಕೆ ಕೃಷಿಗೆ ಮನಸೋತವಳು. ರೈತರಿಗೆ ಕಡಿಮೆ ದುಡಿಮೆಯಲ್ಲಿ ಹೆಚ್ಚು ಆದಾಯ ಬರಬೇಕೆಂಬ ಕನಸು ಕಂಡವಳು. ದೊಡ್ಡಪ್ಪಂದಿರ ಪ್ರೇರಣೆಯಿಂದ ಆ ಜಾಣ್ಮೆ ಹುಡುಗಿ ತೋಟಗಾರಿಕೆ ಕೃಷಿಗೆ ಹೆಚ್ಚು ಒತ್ತು ಕೊಟ್ಟಳು. ಅದರಲ್ಲೇ ಪದವಿಯನ್ನೂ ಪಡೆದಳು. ಅವಳ ತೋಟಗಾರಿಕೆ ಕೃಷಿ ವ್ಯಾಸಂಗದ ಶ್ರಮಕ್ಕೆ ಈಗ ಬರೋಬ್ಬರಿ ಆರು ಚಿನ್ನದ ಪದಕಗಳ ಗರಿ.

Advertisement

ಹೌದು, ಇದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಅನುಷಾ ಅಮಯೋಗಿ ಕುರುಬರ ಎಂಬ ವಿದ್ಯಾರ್ಥಿನಿಯ ಸಾಧನೆಯ ಝಲಕ. ತಂದೆ ಡಾ|ಅಮಯೋಗಿ ಕುರುಬರ, ರಾಯಚೂರು ಕೃಷಿ ವಿವಿಯ ತೋಟಗಾರಿಕೆ ವಿಭಾಗದಲ್ಲಿ ಪ್ರಾಧ್ಯಾಪಕ. ತಾಯಿ ಸುರೇಖಾ (ಕುರುಬರ) ದೇವರಗುಡ್ಡ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಿರಿಯ ಮೇಲ್ವಿಚಾರಕಿ.

ದೊಡ್ಡಪ್ಪಂದಿರ ಪ್ರೇರಣೆ
ಡಾ|ಕುರುಬರ ಅವರು, ಮಕ್ಕಳ ಕಲಿಕೆಗೆ ಎಲ್ಲ ರೀತಿಯ ಸ್ವತಂತ್ರ ನೀಡಿದವರು. ತಂದೆ, ವಿವಿಯೊಂದರ ಪ್ರಾಧ್ಯಾಪಕ, ತಾಯಿ ಸರ್ಕಾರಿ ನೌಕರಳು. ಹೀಗಾಗಿ ಎಂಜಿನಿಯರಿಂಗ್ , ವೈದ್ಯಕೀಯ ಪದವಿಗೆ ಹೆಚ್ಚಿನ ಆಸೆ ಪಡುವವರೇ ಹೆಚ್ಚು. ಆದರೆ, ಅನುಷಾ, ತೋಟಗಾರಿಕೆ ಕೃಷಿ ಪದವಿ ಮಾಡಲು, ಅವರ ದೊಡ್ಡಪ್ಪಂದಿರಾದ ಬುದ್ದಪ್ಪ ಮತ್ತು ಚಂದ್ರಾಮ ಕುರುಬರ ಅವರೇ ಪ್ರೇರಣೆಯಂತೆ. ಅಥರ್ಗಾದಲ್ಲಿ ಇವರಿಗೆ 12 ಎಕರೆ ಹೊಲವಿದ್ದು, ಅಲ್ಲಿ ಲಿಂಬೆ ಕೃಷಿ ಮಾಡಿಕೊಂಡಿದ್ದಾರೆ. ಲಿಂಬೆ ಕೃಷಿಯಲ್ಲಿ ಹೊಸತನ ತರುವ ಹಾಗೂ ದೊಡ್ಡಪ್ಪಂದಿರರಿಗೆ ನೆರವಾಗಲು ತನುಷಾ, ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ಆಯ್ಕೆ ಮಾಡಿಕೊಂಡಿದ್ದರು.

ಹಣ್ಣು ವಿಜ್ಞಾನದಲ್ಲಿ ಸಂಶೋಧನೆ
ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಹಣ್ಣಿನ ಕೃಷಿ ಹೆಚ್ಚು. ಚಿಕ್ಕವಳಿದ್ದಾಗಿನಿಂದಲೂ ಲಿಂಬೆ ಕೃಷಿ ನೋಡುತ್ತ ಬಂದಿರುವ ಅನುಷಾ, ಬೆಂಗಳೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಜೆಆರ್ಎಫ್ ಪ್ರವೇಶ ಪರೀಕ್ಷೆಯಲ್ಲಿ 76ನೇ ರ್ಯಾಂಕ್ ನೊಂದಿಗೆ, ಎಂಎಸ್ಸಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಎಂಎಸ್ಸಿ ಪ್ರವೇಶ ಪರೀಕ್ಷೆಯಲ್ಲೂ ರಾಜ್ಯಕ್ಕೆ 11ನೇ ರ್ಯಾಂಕ್, ರಾಷ್ಟ್ರೀಯ ಎಸ್ಆರ್ಎಫ್ ಪ್ರವೇಶ ಪರೀಕ್ಷೆಯಲ್ಲಿ 10ನೇ ರ್ಯಾಂಕ್, ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದು, ಎಂಎಸ್ಸಿ ಹಣ್ಣು ವಿಜ್ಞಾನದಲ್ಲಿ ಇಡೀ ತೋಟಗಾರಿಕೆ ವಿವಿಗೆ ಮೊದಲ ಸ್ಥಾನ ಪಡೆದು, 6 ಚಿನ್ನದ ಪಡೆದ ಮುಡಿಗೇರಿಸಿಕೊಂಡಿದ್ದಾರೆ.

ಸಧ್ಯ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಅನುಷಾ, ಹಣ್ಣು ಬೆಳೆಗಾರರ ಬೆನ್ನೆಲುಬಾಗಿ ನಿಲ್ಲುವ ಗುರಿ ಹೊಂದಿದ್ದಾರೆ.

Advertisement

ನಮ್ಮದು ವಿಜಯಪುರ ಜಿಲ್ಲೆಯ ಅಥರ್ಗಾ. ತಂದೆ-ತಾಯಿ ರಾಯಚೂರಿನಲ್ಲಿದ್ದಾರೆ. ನಾನೂ ಪ್ರಾಥಮಿಕ, ಪ್ರೌಢ, ಪಿಯುಸಿ ವ್ಯಾಸಂಗ ಅಲ್ಲಿಯೇ ಮಾಡಿದ್ದೇನೆ. ರಜೆಗೆ ಊರಿಗೆ ಬಂದಾಗ ದೊಡ್ಡಪ್ಪಂದಿರು ಲಿಂಬೆ ಕೃಷಿ ಮಾಡುವುದನ್ನು ನೋಡಿ, ನಾನೂ ಭಾಗಿಯಾಗುತ್ತಿದ್ದೆ. ಹಣ್ಣು ಬೆಳೆಗಾರ ರೈತರಿಗೆ ನಾನು ನೆರವಾಗಬೇಕು, ಅದರಲ್ಲೂ ಲಿಂಬೆ ಕೃಷಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು ಎಂಬ ಕನಸಿದೆ. ಅದಕ್ಕಾಗಿ ಹಣ್ಣು ವಿಜ್ಞಾನದಲ್ಲಿ ಪಿಎಚ್ಡಿ ಮಾಡುತ್ತಿದ್ದೇನೆ. ಸಧ್ಯ ಎಂಎಸ್ಸಿಯಲ್ಲಿ ಆರು ಚಿನ್ನದ ಪದಕ ಬಂದಿದ್ದು, ಇದಕ್ಕೆ ನನ್ನ ತಂದೆ-ತಾಯಿ ಸಹಕಾರ ಹಾಗೂ ನನ್ನ ಇಬ್ಬರು ದೊಡ್ಡಪ್ಪಂದಿರು ಪ್ರೇರಣೆ.
-ಅನುಷಾ ಎ. ಕುರುಬರ,

Advertisement

Udayavani is now on Telegram. Click here to join our channel and stay updated with the latest news.

Next