Advertisement

ತೋಟಗಾರಿಕೆ ವಿವಿ; ಕಿರಾಣಿ ವರ್ತಕನ ಪುತ್ರಿಗೆ 16 ಚಿನ್ನದ ಪದಕ !

10:42 PM Jul 01, 2023 | Team Udayavani |

ಬಾಗಲಕೋಟೆ : ಆ ಯುವತಿ ಪಟಪಟನೆ ವೇದಿಕೆ ಹತ್ತಿ ಬರುತ್ತಿದ್ದರೆ, ಮುಂಭಾಗ ಕುಳಿತ ಸಾವಿರಾರು ವಿದ್ಯಾರ್ಥಿಗಳಿಂದ ಚಪ್ಪಾಳೆಯ ಕರಡಾತನ. ಬಡತನದಲ್ಲೂ ಕಠೀಣ ಪರಿಶ್ರಮದೊಂದಿಗೆ ಓದಿ, ಬರೋಬ್ಬರಿ 16 ಚಿನ್ನದ ಪದಕಗಳಿಗೆ ಕೊರಳೊಡ್ಡಿದಾಗ, ಹೆತ್ತವರ ಕಣ್ಣಲ್ಲಿ ಆನಂದ ಭಾಸ್ಪ…
ಹೌದು, ಇಂತಹ ಅಪರೂಪದ ಪ್ರಸಂಗ ಕಂಡಿದ್ದು ಶನಿವಾರ ತೋಟಗಾರಿಕೆ ವಿವಿಯ 12ನೇ ಘಟಿಕೋತ್ಸವದಲ್ಲಿ. ತೋಟಗಾರಿಕೆ ಬಿಎಸ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದು, ಬಾಗಲಕೋಟೆಯ ತೋಟಗಾರಿಕೆ ವಿವಿಗೇ ಮೊದಲ ರ್ಯಾಂಕ್ ಪಡೆದ ಕೋಲಾರ ತಾಲೂಕಿನ ಸುಗಟೂರ ಗ್ರಾಮದ ಕಿರಾಣಿ ಅಂಗಡಿ ವರ್ತಕ ನಾಗೇಂದ್ರ ಶೆಟ್ಟಿ ಟಿಎನ್ ಮತ್ತು ಸವಿತಾ ಎನ್ ಶೆಟ್ಟಿ ಅವರ ಪುತ್ರಿ ಧರಣಿ ಎನ್ ಶೆಟ್ಟಿಗೆ ಬರೋಬ್ಬರಿ 16 ಚಿನ್ನದ ಪದಕ ನೀಡಿ ಗೌರವಿಸಲಾಯಿತು.

Advertisement

ತೋಟಗಾರಿಕೆ ವಿವಿಯ ಗೋಲ್ಡನ್ ಗರ್ಲ್
ಓದು, ಆಟ-ಬರಹದಲ್ಲೂ ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡಿರುವ ಧರಣಿ, ಸಧ್ಯ ಬೆಂಗಳೂರಿನ ವಾಸವಿ ಕೋಚಿಂಗ್ ಸೆಂಟರ್ನಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಕೋಲಾರ ತಾಲೂಕಿನ ಸುಗಟೂರ ಗ್ರಾಮದಲ್ಲಿ ಪುಟ್ಟ ಕಿರಾಣಿ ಅಂಗಡಿ ನಡೆಸುತ್ತಿರುವ, ನಾಗೇಂದ್ರ ಶೆಟ್ಟಿ ಟಿ.ಎಸ್ ಅವರಿಗೆ ಒಟ್ಟು ಮೂವರು ಮಕ್ಕಳು, ಧರಣಿಯೇ ಹಿರಿಯ ಸುಪುತ್ರಿ.

ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯನ್ನು ಶೇ.97ರಷ್ಟು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗವನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಶೇ.95ಷ್ಟು ಅಂಕದೊಂದಿಗೆ ಪಾಸು ಮಾಡಿದ್ದಾರೆ. ಪಿಯುಸಿ ಬಳಿಕ ವೈದ್ಯಕೀಯ ರಂಗಕ್ಕೆ ಪ್ರವೇಶ ಬಯಸಿದ್ದರು. ಅವರಿಗೆ ದಂತ ವೈದ್ಯಕೀಯದಲ್ಲಿ ಸೀಟು ಸಿಕ್ಕಾಗ ಅದಕ್ಕೆ ಪ್ರವೇಶ ಪಡೆಯದೇ, ತೋಟಗಾರಿಕೆ ವಿಜ್ಞಾನದಲ್ಲಿ ಸೀಟು ಸಿಕ್ಕಿತ್ತು. ಹೀಗಾಗಿ ಮುನಿರಾಬಾದ್ ತೋಟಗಾರಿಕೆ ಕಾಲೇಜಿನಲ್ಲಿ ತೋಟಗಾರಿಕೆ ಬಿಎಸ್ಸಿ ಪದವಿಗೆ ಸೇರಿಕೊಂಡು, ಇಡೀ ತೋಟಗಾರಿಕೆ ವಿವಿಗೇ ಗೋಲ್ಡನ್ ಗರ್ಲ ಆಗಿ ಹೊರ ಹೊಮ್ಮಿದ್ದಾರೆ.

ಐಎಎಸ್ ಮಾಡುವಾಸೆ
ಕೋಲಾರದ ಸುಗಟೂರಿನಲ್ಲಿ 1 ಎಕರೆ ಭೂಮಿ ಹೊಂದಿರುವ, ನಾಗೇಂದ್ರ ಅದನ್ನು ಲಾವಣಿಗೆ ಕೊಟ್ಟಿದ್ದಾರೆ. ಮೊದಲ ಮಗಳು ಧರಣಿ, ದ್ವಿತೀಯ ಸುಪುತ್ರಿ ಸುಷಾರಾ (ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಸ್ಥಾನ) ಬಿ.ಕಾಂ ಓದುತ್ತಿದ್ದು, ಕೊನೆಯ ಪುತ್ರ ರಾಮಚಂದ್ರ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತೋಟಗಾರಿಕೆ ವಿವಿಯಿಂದ 16 ಚಿನ್ನದ ಪದಕ ಪಡೆದ ಧರಣಿಗೆ ಐಎಎಸ್ ಮಾಡುವಾಸೆ. ಅದಕ್ಕಾಗಿ ತಯಾರಿ ನಡೆಸಿದ್ದು, ತಂದೆ-ತಾಯಿ, ಗೆಳತಿಯರು ಅವರ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ತೋಟಗಾರಿಕೆ ವಿವಿಯ ಕುಲಾಧಿಪತಿ-ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಹಕುಲಾಧಿಪತಿ ಆಗಿರುವ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು, ಕಿರಾಣಿ ಅಂಗಡಿ ವರ್ತಕನ ಪುತ್ರಿಯ ಕೊರಳಿಗೆ 16 ಚಿನ್ನದ ಪದಕ ಹಾಕಿ, ಬೆನ್ನುತಟ್ಟಿದರು.

Advertisement

16 ಚಿನ್ನದ ಪದಕ ಪಡೆದ ನನಗೆ ತುಂಬಾ ಖುಷಿಯಾಗುತ್ತಿದೆ. ನಮ್ಮ ತಂದೆ-ತಾಯಿ, ಇಂತಹ ಸಾಧನೆಯನ್ನು ಬೇರೆ ಮಕ್ಕಳಲ್ಲಿ ನೋಡುತ್ತಿದ್ದರು. ಈಗ ನನ್ನಿಂದ ಅವರಿಗೆ ಖುಷಿಯಾಗಿದೆ ಎಂಬದು ಭಾವಿಸಿದ್ದೇನೆ. ನನ್ನ ಕಲಿಕೆಗೆ ಹೆತ್ತವರ ಸಹಕಾರ-ಸಹಾಯ ಬಹಳವಿದೆ. ಯುಪಿಎಸ್ಸಿ ಪರೀಕ್ಷೆ ಬರೆದು, ಆಡಳಿತ ಸೇವೆಯ ಜತೆಗೆ ರೈತರಿಗೆ ನನ್ನಿಂದಾಗುವ ನೆರವು ನೀಡಬೇಕು ಎಂಬುದು ನನ್ನ ಗುರಿ.
-ಧರಣಿ ಎನ್. ಶೆಟ್ಟಿ,

ಮಗಳ ಸಾಧನೆ ಕಂಡು ಮಾತೇ ಬರಲಿಲ್ಲ. ನಾನು ಭಾವುಕನಾದೆ. ಅವರ ಪ್ರತಿಯೊಂದು ಹೆಜ್ಜೆಗೂ ನಮ್ಮ ಬೆಂಬಲ ಸದಾ ಇದೆ. ತೋಟಗಾರಿಕೆ ಪದವಿ ಮಾಡುತ್ತೇನೆ ಎಂದಾಗ ನಾವೆಲ್ಲ ಖುಷಿಯಿಂದ ಸಹಕಾರ ಕೊಟ್ಟೇವು. ಆ ಖುಷಿ ಇಷ್ಟೊಂದು ಇಮ್ಮಡಿಯಾಗುತ್ತದೆ ಎಂದು ಭಾವಿಸಿರಲಿಲ್ಲ. ರೈತ ಇಂದು ಎಲ್ಲ ರಂಗದಲ್ಲೂ ಮೋಸ ಹೋಗುತ್ತಿದ್ದಾನೆ. ದುಡಿಮೆ ಹೆಚ್ಚು, ಆದಾಯ ಕಡಿಮೆ ಇದೆ. ಆದಾಯ ಹೆಚ್ಚು ಬರಬೇಕು. ಆ ನಿಟ್ಟಿನಲ್ಲಿ ನನ್ನ ಮಗಳ ಪ್ರಯತ್ನ ಇರಲಿ ಎಂಬುದು ನಮ್ಮ ಸಲಹೆ. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ. ಮಕ್ಕಳ ಸಾಧನೆಯಲ್ಲಿ ನಾವು ಖುಷಿ ಪಡುತ್ತಿದ್ದೇವೆ.
-ನಾಗೇಂದ್ರ ಶೆಟ್ಟಿ ಟಿ.ಎಸ್, ಧರಣಿಯ ತಂದೆ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next