ಬೆಂಗಳೂರು: “ಬಿಸಿಯೂಟ ಮತ್ತು ಇಂದಿರಾ ಕ್ಯಾಂಟೀನ್‌ನಲ್ಲೂ ಸಿರಿಧಾನ್ಯಗಳ ಆಹಾರ ಪೂರೈಕೆಗೆ ಚಿಂತನೆ ನಡೆದಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಅರಮನೆಮೈದಾನದತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡ ಮೂರು ದಿನಗಳ “ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2019’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದೆ. ಹಾಗಾಗಿ, ಬಿಸಿಯೂಟ ಹಾಗೂ ಇಂದಿರಾ ಕ್ಯಾಂಟೀನ್‌ನಲ್ಲಿ ಪೂರೈಕೆಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
“ಸಾಲಮನ್ನಾವೊಂದೇ ಸಮಸ್ಯೆಗಳಿಗೆ ಪರಿಹಾರ ಆಗದು. ರೈತರು ಯಾವತ್ತೂ ಸಾಲದ ಸುಳಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ’. ಸಾಲಮನ್ನಾ ಮಾಡುವುದರಿಂದ ರೈತರು ಸಮಸ್ಯೆಗಳಿಂದ ಮುಕ್ತರಾಗಿ, ನೆಮ್ಮದಿಯಿಂದ ಬದುಕುತ್ತಾರೆಂಬ ನಂಬಿಕೆಯಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮತ್ತೆ ಸಾಲದ ಸುಳಿಗೆ ಸಿಲುಕದಂತೆ ನೋಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಇಸ್ರೇಲ್ ಮಾದರಿ ಕೃಷಿಗೆ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಕಳೆದ 20 ವರ್ಷಗಳಲ್ಲಿ ಸುರಿದ ಮಳೆ ಪ್ರಮಾಣವನ್ನು ಆಧರಿಸಿ, ಯಾವ ಪ್ರದೇಶದಲ್ಲಿ ಯಾವ ಬೆಳೆ ಸೂಕ್ತ ಎಂಬುದನ್ನು ಕಂಡುಕೊಳ್ಳ ಲಾಗುವುದು. ಅದರಂತೆ ಬೆಳೆಗಳ ವಿಧಾನ ರೂಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, 21ನೇ ಶತಮಾನದ ಸ್ಮಾರ್ಟ್ ಫುಡ್ ಸಿರಿಧಾನ್ಯವಾಗಿದೆ.
ಇದನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಕರ್ನಾಟಕ ಮಾಡಿದೆ. ನಾವು ಹಾಕಿಕೊಟ್ಟ ಮಾದರಿಯನ್ನು ಇಂದು ಇಡೀ ದೇಶ ಅನುಸರಿಸುತ್ತಿದೆ. ಸುಸ್ಥಿರ ಅಭಿವೃದ್ಧಿಗೆ ಮಣ್ಣು ಮತ್ತು ಪರಿಸರ ಎರಡರ ಸಂರಕ್ಷಣೆಯೂ ಮುಖ್ಯ. ಇದಕ್ಕೆ ಪರಿಹಾರ ಸಿರಿಧಾನ್ಯ ಎಂದು ಹೇಳಿದರು. ಕೇಂದ್ರ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಶೋಕ ದಳವಾಯಿ ಮಾತನಾಡಿ, ಈ ಮೊದಲು ಕರ್ನಾಟಕವು ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿತ್ತು. ಈಗ ಸಿರಿಧಾನ್ಯದಲ್ಲೂ ಪ್ರಸಿದ್ಧಿ ಗಳಿಸುತ್ತಿದೆ ಎಂದರು
2023 ವಿಶ್ವ ಸಿರಿಧಾನ್ಯ ವರ್ಷ?
ಜಾಗತಿಕ ಮಟ್ಟದಲ್ಲಿ ಸಿರಿಧಾನ್ಯಗಳು ಮಹತ್ವ ಪಡೆದುಕೊಳ್ಳುತ್ತಿದ್ದು, 2023ಕ್ಕೆ ವಿಶ್ವ ಸಿರಿಧಾನ್ಯ ವರ್ಷವಾಗಿ ಘೋಷಿಸಲು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಉದ್ದೇಶಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಈಗಾಗಲೇ 2018 ಅನ್ನು ಸಿರಿಧಾನ್ಯಗಳ ವರ್ಷ ವನ್ನಾಗಿ ಆಚರಿಸಲಾಗಿದೆ. ಬರುವ ಸೆಪ್ಟೆಂಬರ್ ನಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಸಭೆ ನಡೆಯಲಿದ್ದು, ಅದರಲ್ಲಿ 2023 ಅನ್ನು ಸಿರಿಧಾನ್ಯ ವರ್ಷಾಚರಣೆಗೆ ಮಾನ್ಯತೆ ಸಿಗುವ ಸಾಧ್ಯತೆ ಇದೆ ಎಂದು ಹೆಚ್ಚುವರಿ ಕಾರ್ಯ ದರ್ಶಿ ಅಶೋಕ್ ದಳವಾಯಿ ತಿಳಿಸಿದರು.