Advertisement

ತೋಟಗಾರಿಕೆ ಇಲಾಖೆ ನರ್ಸರಿ: ನಿರ್ವಹಣೆ ಕೊರತೆ

10:04 PM Oct 10, 2020 | mahesh |

ಮಹಾನಗರ: ಅಡ್ಡಾದಿಡ್ಡಿ ಯಾಗಿ ಬಿದ್ದಿರುವ ಹೂ ಕುಂಡಗಳಲ್ಲಿ ನೀರು ತುಂಬಿ ಸೊಳ್ಳೆ ಉತ್ಪಾದನ ಕೇಂದ್ರಗಳಾಗುತ್ತಿವೆ. ನರ್ಸರಿಯಲ್ಲಿ ಇರಬೇಕಾದ ಗಿಡಗಳಿಗಿಂತ ಕಳೆಗಳೇ ಹೆಚ್ಚಿವೆ. ಗಿಡ ನೆಟ್ಟಿರುವ ಪ್ಲಾಸ್ಟಿಕ್‌ಗಳು ಗಿಡ, ಮಣ್ಣು ಸಮೇತ ನೆಲಕ್ಕುರುಳಿವೆ!

Advertisement

ಇದು ಬೆಂದೂರ್‌ವೆಲ್‌ನಲ್ಲಿರುವ ತೋಟಗಾರಿಕೆ ಇಲಾಖೆಯ ನರ್ಸರಿಯ ದುಃಸ್ಥಿತಿ. ಸಾಮಾನ್ಯವಾಗಿ ನರ್ಸರಿ ಅಂದರೆ ಆಲಂಕಾರಿಕ, ಔಷಧೀಯ, ತರಕಾರಿ, ಹಣ್ಣು ಸಹಿತ ಇತರ ತೋಟ ಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಗಿಡ, ಬೀಜಗಳಿಂದ ತುಂಬಿರುತ್ತವೆ. ಆದರೆ ಬೆಂದೂರ್‌ವೆಲ್‌ನಲ್ಲಿರುವ ತೋಟಗಾರಿಕೆ ಇಲಾಖೆಯ ನರ್ಸರಿ ಇದಕ್ಕೆ ವ್ಯತಿರಿಕ್ತ ವಾಗಿದೆ. ಇಲ್ಲಿ ಬಳಕೆಗೆ ಯೋಗ್ಯವಾದ ಗಿಡಗಳಿಗಿಂತ ಹೆಚ್ಚು ಬೇಡವಾದ ಕಳೆ ಗಿಡಗಳೇ ತುಂಬಿ ಹೋಗಿದ್ದು, ನರ್ಸರಿ ಇದೆಯೇ ಎಂಬ ಬಗ್ಗೆ ಸಂಶಯ ಉಂಟು ಮಾಡುವಂತಿದೆ.

ಸೊಳ್ಳೆ ಉತ್ಪತ್ತಿಗೂ ಪೂರಕ ಗಿಡಗಳನ್ನು ನೆಡಲೆಂದು ನರ್ಸರಿಯಲ್ಲಿ ಇಟ್ಟಿರುವ ಕುಂಡಗಳು ಅಡ್ಡಾದಿಡ್ಡಿಯಾಗಿ ಬಿದ್ದುಕೊಂಡಿವೆ. ಮಳೆಯಿಂದಾಗಿ ಈ ಕುಂಡಗಳಲ್ಲಿ ನೀರು ತುಂಬಿದ್ದು, ಸೊಳ್ಳೆ ಉತ್ಪತ್ತಿಗೂ ಪೂರಕವಾಗಿದೆ. ಕೆಲವು ಕುಂಡಗಳು ಕೆಳಭಾಗದಲ್ಲಿ ಒಡೆದು ಹೋಗಿದ್ದು, ಅವುಗಳನ್ನು ನರ್ಸರಿಯಲ್ಲೇ ಬಿಸಾಡಲಾಗಿದೆಯೇ ಹೊರತು ಸೂಕ್ತ ವಿಲೇವಾರಿ ಮಾಡಿಲ್ಲ. ಇದರಿಂದ ನಳನಳಿಸಬೇಕಾದ ನರ್ಸರಿ ಕಳೆಗುಂದಿದೆ. ಕಪ್ಪು ಬಣ್ಣದ ಪ್ಲಾಸ್ಟಿಕ್‌ಗಳಲ್ಲಿ ನೆಟ್ಟಿರುವ ಗಿಡಗಳು ಪ್ಲಾಸ್ಟಿಕ್‌, ಮಣ್ಣು ಸಮೇತ ನೆಲಕ್ಕುರುಳಿವೆ.

ಜಿಲ್ಲೆಯಲ್ಲಿ 9 ನರ್ಸರಿ
ದ.ಕ. ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಡಿ ಒಟ್ಟು 14 ನರ್ಸರಿಗಳಿದ್ದು, ಪ್ರಸ್ತುತ 9 ನರ್ಸರಿಗಳು ಕೆಲಸ ನಿರ್ವಹಿ ಸುತ್ತಿವೆ. ಮಂಗಳೂರಿನಲ್ಲಿ ಬೆಂದೂರ್‌ವೆಲ್‌ನಲ್ಲಿರುವ ತೋಟಗಾರಿಕೆ ಇಲಾಖೆ ಎದುರುಗಡೆ ಒಂದು ನರ್ಸರಿ ಹಾಗೂ ಇನ್ನೊಂದು ಪಡೀಲಿನಲ್ಲಿದೆ. ಇಲಾಖೆ ಮುಂಭಾಗದಲ್ಲೇ ಇರುವ ಪಡೀಲಿನ ನರ್ಸರಿಯಲ್ಲಿಯೂ ನಿರ್ವಹಣೆ ಸಮಸ್ಯೆ ತೋರಿ ಬರುತ್ತಿದೆ.

ಲಾರ್ವಾ ಉತ್ಪತ್ತಿ ಭೀತಿ!
ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಲಾರ್ವಾ ಉತ್ಪತ್ತಿಯಾಗುವ ಆತಂಕವಿರುವುದರಿಂದ ಹೂ ಕುಂಡಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಅದನ್ನು ಮಗುಚಿ ಹಾಕಬೇಕು ಎಂಬುದಾಗಿ ಆರೋಗ್ಯ ಇಲಾಖೆ ಎಚ್ಚರಿಸುತ್ತಲೇ ಬರುತ್ತಿದೆ. ಆದರೆ ಸರಕಾರಿ ವ್ಯವಸ್ಥೆಯಲ್ಲೇ ಇರುವ ತೋಟಗಾರಿಕೆ ಇಲಾಖೆ ಮುಂಭಾಗದಲ್ಲೇ ಇರುವ ನರ್ಸರಿಯಲ್ಲಿ ಕುಂಡಗಳನ್ನು ಎಸೆದಿದ್ದು, ನೀರು ನಿಲ್ಲುತ್ತಿರುವುದು ಪ್ರತಿದಿನ ಅಧಿಕಾರಿಗಳಿಗೆ ಕಾಣು ವಂತಿದ್ದರೂ ನಿರ್ಲಕ್ಷé ವಹಿಸಲಾಗುತ್ತಿದೆ. ಪ್ರಸ್ತುತ ಬಿಸಿಲು-ಮಳೆ ಬರುತ್ತಿರುವುದ ರಿಂದ ಇಂತಹ ಕುಂಡಗಳು ಇನ್ನಷ್ಟು ಅಪಾಯಕಾರಿಯಾಗಿವೆ.

Advertisement

ಮಳೆ ಮುಗಿದ ತತ್‌ಕ್ಷಣ ನಿರ್ವಹಣೆ
ತೋಟಗಾರಿಕೆ ಇಲಾಖೆಯ ನರ್ಸರಿಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆಲಂಕಾರಿಕ ಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿ ನರ್ಸರಿಯಲ್ಲಿವೆ. ಪ್ರಸ್ತುತ ಮಳೆಗಾಲವಾದ್ದರಿಂದ ಗಿಡಗಂಟಿಗಳು ಬೆಳೆದಿವೆ. ಮಳೆ ಮುಗಿದ ತತ್‌ಕ್ಷಣ ಕಳೆ ಗಿಡಗಳನ್ನು ಕಿತ್ತು ನರ್ಸರಿಯನ್ನು ಸುಸ್ಥಿತಿಯಲ್ಲಿಡಲಾಗುವುದು.
-ಜಾನಕಿ, ಹಿರಿಯ ಸಹಾಯಕ ನಿರ್ದೇಶಕರು, ದ.ಕ. ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next