ವಿಜಯಪುರ: ಬರದ ನಾಡು ವಿಜಯಪುರ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕೆ ಜಿಲ್ಲೆಯ ರೈತರು ಕೃತಜ್ಞತೆ ಸಲ್ಲಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲೆಯ ನೀರಾವರಿ ಹೋರಾಟಗಾರ ಹಾಗೂ ಭಾರತೀಯ ಕಿಸಾನ್ ಸಂಘದ ರಾಜ್ಯ ಮುಖಂಡ ಗುರುನಾಥ ಬಗಲಿ, ಅಣ್ಣಪ್ಪ ಖೈನೂರ, ಸದರಿ ನೀರಾವರಿ ಯೋಜನೆ ಅನುಷ್ಠಾನದ ವಿಷಯದಲ್ಲಿ ತಾವು ಹಾಗೂ ತಮ್ಮೊಂದಿಗೆ ಹಲವು ರೈತ ಮುಖಂಡರು ನೀಡಿದ ಸಹಕಾರ ಹಾಗೂ ಹೋರಾಟವನ್ನು ವಿವರಿಸಿದರು.
ಕುಡಿಯುವ ನೀರಿಗೂ ತತ್ವಾರ ಇರುವ ನಮ್ಮ ಪ್ರದೇಶಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನೀರಾವರಿ ಕಲ್ಪಿಸಬೇಕಿತ್ತು. ಇದಕ್ಕಾಗಿ ಏತ ನೀರಾವರಿ ಯೋಜನೆ ರೂಪಿಸಿ ಎಂದು ಮೂರು ದಶಕಗಳಿಂದ ಹೋರಾಡುತ್ತಲೇ ಬಂದಿದ್ದೇವೆ. 2007ರಲ್ಲಿ ಹೊರ್ತಿ ಗ್ರಾಮದಲ್ಲಿ ಅಹರ್ನಿಸಿ ಹೋರಾಟ ನಡೆಸಿದ್ದೆವು ಎಂದು ವಿವರಿಸಿದರು.
ಇದೀಗ ನಮ್ಮ ಭಾವನೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮೂರು ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿ ಮೊದಲ ಹಂತದ ಯೋಜನೆಗೆ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಸಚಿವ ಸಂಪುಟ ಎಲ್ಲ ಸಚಿವರು ಹಾಗೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸದರಿ ನೀರಾವರಿ ಯೋಜನೆ ಹೋರಾಟಗಾರರು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ನಮ್ಮ ಹೋರಾಟದ ಫಲವಾಗಿ ಇದೀಗ ಜಿಲ್ಲೆಯ ಇಂಡಿ, ವಿಜಯಪುರ, ಚಡಚಣ ತಾಲೂಕುಗಳ 55 ಹಳ್ಳಿಗಳ ನೀರಾವರಿ ಸೌಲಭ್ಯ ಪಡೆಯುವ ಅವಕಾಶ ಬಂದಿದೆ. 2638 ಕೋಟಿ ರೂ. ವೆಚ್ಚದ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಕಲ್ಪಿಸುವ ಮೂಲಕ ಬಂಜರು ನೆಲವನ್ನು ನಂದನವನ ಮಾಡುವ ಕನಸು ನನಸಾಗುತ್ತಿರುವುದು ಸಂತಸ ಮೂಡಿಸಿದೆ ಎಂದರು.
30 ವರ್ಷಗಳಿಂದ ನಮ್ಮ ಭಾಗದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಇದೀಗ ಸ್ಪಂದಿಸುವ ಮೂಲಕ ತಮ್ಮ ತವರು ಜಿಲ್ಲೆಗೆ ಮಹತ್ವಾಕಾಂಕ್ಷೆಯ ಏತ ನೀರಾವರಿ ಯೋಜನೆಗೆ ಕೊಡುಗೆ ನೀಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದು ನಮ್ಮ ಆದ್ಯ ಕರ್ತವ್ಯವೂ ಹೌದು ಎಂದರು.
ನಮ್ಮ ಭಾಗದಲ್ಲಿ ಸಾವಿರಾರು ಅಡಿ ಆಳ ಕೊಳವೆ ಬಾವಿ ಕೊರೆದರೂ ಬೊಗಸೆ ನೀರು ಸಿಗುತ್ತಿರಲಿಲ್ಲ. ಪ್ರತಿ ರೈತರೂ ನೀರಿಗಾಗಿ ಹಪಾಹಪಿಸಿ ಹತ್ತಾರು ಕೊಳವೆ ಬಾವಿ ಕೊರೆಸಿ, ಲಕ್ಷ ಲಕ್ಷ ರೂ. ಸಾಲಗಾರರಾಗಿದ್ದರು. ಇದೀಗ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ನೀರಿನ ತತ್ವಾರದ ದುಸ್ಥಿತಿಗೆ ತೆರೆ ಬೀಳಲಿದೆ ಎಂದರು.
ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ, ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಇದ್ದರು.