ಕಾಡಿನ ಪಕ್ಕದ ಬಯಲಿನಲ್ಲಿ ಕುದುರೆಯೊಂದು ಮೇಯುತ್ತಿತ್ತು. ಅಕ್ಕಪಕ್ಕದಲ್ಲಿ ಯಾವ ಪ್ರಾಣಿಯೂ ಇರಲಿಲ್ಲ. ಹುಲುಸಾಗಿ ಹುಲ್ಲು ಬೆಳೆದಿತ್ತು. ಹಸಿದಿದ್ದ ಕುದುರೆ ಹುಲ್ಲು ತಿನ್ನುವುದರಲ್ಲಿ ಮಗ್ನವಾಗಿತ್ತು. ಸ್ವಲ್ಪ ಸಮಯದ ನಂತರ ಆ ಮಾರ್ಗವಾಗಿ ತೋಳವೊಂದು ಬಂದಿತು. ಕೊಬ್ಬಿದ ಆ ಕುದುರೆಯನ್ನು ಕಂಡು ಅದರ ಬಾಯಲ್ಲಿ ನೀರೂರಿತು. “ಕುದುರೆಗಳು ಬಹಳ ಬಲಿಷ್ಠವಾಗಿರುತ್ತವೆ ಎಂದು ಯೋಚಿಸಿದ ತೋಳ ಅದನ್ನು ತಿನ್ನುವ ಉಪಾಯವನ್ನು ಚಿಂತಿಸುತ್ತಾ ಮೆಲ್ಲಗೆ ಹೋಗುತ್ತಿತ್ತು.
ಇಂತಹ ಕ್ರೂರ ತೋಳನಿಗೇ ವರ್ಷಗಳ ಹಿಂದೆ ನನ್ನ ತಾತ ಬಲಿಯಾದ ಬಗ್ಗೆ ಅಜ್ಜಿಯು ನೆನೆಯುತ್ತಾ ಪ್ರತಿದಿನ ಕಣ್ಣೀರು ಸುರಿಸುವುದನ್ನು ನೆನೆಸಿಕೊಂಡು ಆ ಕುದುರೆ ಕ್ಷಣಕಾಲ ಕಂಪಿಸಿತು. ನಂತರ ಧೈರ್ಯ ತಂದುಕೊಂಡು ಅದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಯೋಚಿಸಿ ಕುಂಟತೊಡಗಿತು. ಗಟ್ಟಿಮುಟ್ಟಾದ ಕುದುರೆ ಕುಂಟುವುದನ್ನು ಕಂಡ ತೋಳ ಸ್ವಲ್ಪ ಧೈರ್ಯ ತಂದುಕೊಂಡು ಅದರ ಬಳಿಗೆ ಹೋಗಿ ಕುದುರೆಯನ್ನು ಏತಕ್ಕೆ ಕುಂಟುತ್ತಿರುವೆ? ಎಂದು ಪ್ರಶ್ನಿಸಿತು.
ನನ್ನ ಬಲಗಾಲಿನ ಗೊರಸಿನಲ್ಲಿ ಮುಳ್ಳಿದೆ. ಅದಕ್ಕೇ ನೋವಿನಿಂದ ಕುಂಟುತ್ತಿರುವೆ… ಎಂದು ಉತ್ತರಿಸಿತು ಆ ಕುದುರೆ. ಈ ಮಾತು ಕೇಳಿ ತೋಷಕ್ಕೆ ಖುಷಿಯಾಯಿತು. ಮುಳ್ಳು ತೆಗೆಯುವ ನೆಪದಲ್ಲಿ ಕುದುರೆಯನ್ನೂ ನಯವಾದ ಮಾತುಗಳಿಂದ ಮರುಳು ಮಾಡಬೇಕು. ಆನಂತರ, ಅದನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡಬೇಕು. ಹೇಗಿದ್ದರೂ ಕಾಲಿಗೆ ಗಾಯವಾಗಿರುವುದರಿಂದ ಅದು ವೇಗವಾಗಿ ಓಡಲು ಸಾಧ್ಯವಿಲ್ಲ. ಅಂತೂ ಇವತ್ತು ನನಗೆ ರುಚಿರುಚಿಯಾದ ಭೋಜನ ಸಿಗುತ್ತದೆ ಎಂದೆಲ್ಲಾ ಲೆಕ್ಕಾಚಾರ ಮಾಡಿಕೊಂಡಿತು ತೋಳ.
ಇದೇನನ್ನೂ ಹೊರನೋಟಕ್ಕೆ ತೋರ್ಪಡಿಸದೆ, ಅನುಕಂಪದ ದನಿಯಲ್ಲಿ “ಹೌದಾ…? ಹಾಗಾದರೆ ಆ ಮುಳ್ಳನ್ನು ನಾನು ತೆಗೆಯುವೆ’ ಎಂದು, ಅದರ ಹಿಂಗಾಲಿನ ಗೊರಸನ್ನು ಹತ್ತಿರದಿಂದ ಬಗ್ಗಿ ನೋಡಿತು. ಅದೇ ಸಮಯವನ್ನು ಕಾಯುತ್ತಿದ್ದ ಆ ಕುದುರೆ, ತನ್ನೆರಡು ಕಾಲುಗಳಿಂದ ಬಲವಾಗಿ ತೋಳಕ್ಕೆ ಒದೆಯಿತು. ಇಂಥದ್ದೊಂದು ಅನಿರೀಕ್ಷಿತ ಹೊಡೆತವನ್ನು ಕನಸಿನಲ್ಲೂ ನಿರೀಕ್ಷಿಸಿರದ ತೋಳ ಗಾಳಿಯಲ್ಲಿ ಹಾರುತ್ತ, ಮಾರುದೂರ ಎಗರಿ ಹೋಗಿ ಕೆಳಕ್ಕೆ ದೊಪ್ಪೆಂದು ಬಿದ್ದಿತು. ಆ ಏಟಿಗೆ ಗಾಯಗೊಂಡ ಅದು ಹಿಂದಿರುಗಿ ನೋಡದೇ ಓಟಕಿತ್ತಿತು.
* ಪ್ರೊ. ಎಚ್. ಗವಿಸಿದ್ದಯ್ಯ