ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಉಪ ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವುದು ಅದಕ್ಕೆ ಅನಿವಾರ್ಯ. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಕಷ್ಟಕರ. ಹೀಗಾಗಿ ಯಡಿಯೂರಪ್ಪ ಗೊಂದಲಕ್ಕೀಡಾಗಿದ್ದಾರೆ ಎಂದರು.
ಒಂದು ವೇಳೆ ಬಿಜೆಪಿ ಎಂಟು ಸ್ಥಾನ ಗೆಲ್ಲದಿದ್ದರೆ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ನನಗೆ ಗೊತ್ತಿದೆ. ನಾವೇನು ಜೆಡಿಎಸ್ ನವರೊಂದಿಗೆ ಮಾತನಾಡಿಲ್ಲ. ನಾನು ಜೆಡಿಎಸ್ ನಲ್ಲಿ ಇದ್ದು ಬಂದವ. ಅಲ್ಲಿನ ಪರಿಸ್ಥಿತಿ ಅರಿವು ಇದೆ. ಉಪ ಚುನಾವಣೆ ನಂತರ ಬಿಜೆಪಿ ವಿಶ್ವಾಸ ಮತ ಯಾಚಿಸುವ ಪ್ರಶ್ನೆಯೇ ಇಲ್ಲ. ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಾನೇನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಪ್ರಜಾಪ್ರಭುತ್ವದ ಅಣುಕು. ಶಿವಸೇನೆ ಹಿಂದುತ್ವದಿಂದ ಹೊರಗೆ ಬರುವುದಾಗಿ ಹೇಳಿದ್ದರಿಂದ ಕಾಂಗ್ರೆಸ್ ಬೆಂಬಲ ನೀಡಿತು. ಶಿವಸೇನೆಯ ಸಂಸದರು ಕೇಂದ್ರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ಎನ್ ಡಿಎ ದಿಂದ ಹೊರಕ್ಕೆ ಬಂದಿದ್ದಾರೆ ಎಂದರು.