Advertisement

ಕುಣಿಗಲ್ ಸ್ಟಡ್ ಫಾರ್ಮ್ ನಲ್ಲಿ ಹೆಜ್ಜೇನು ದಾಳಿ: ಕೋಟ್ಯಂತರ ರೂ ಬೆಲೆಯ 2 ಕುದುರೆ ಮೃತ್ಯು

07:16 PM Jan 06, 2023 | Team Udayavani |

ಕುಣಿಗಲ್ : ಹೆಜ್ಜೇನು ದಾಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಐರ್ಲ್ಯಾಂಡ್ ಹಾಗೂ ಅಮೆರಿಕದ ಎರಡು ಗಂಡು ತಳಿ ಕುದುರೆ ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಕುಣಿಗಲ್ ಸ್ಟಡ್ ಫಾರಂನಲ್ಲಿ ನಡೆದಿದೆ.

Advertisement

ಐರ್ಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಹಾಗೂ ಅಮೆರಿಕದ 15 ವರ್ಷದ ಏರ್ ಸಫೋರ್ಟ್ ದಾಳಿಗೆ ಸಿಲುಕಿದ ಗಂಡು ತಳಿಯ ಕುದುರೆಗಳಾಗಿವೆ.

ಎಂದಿನಂತೆ ಬುಧವಾರ ಏರ್ ಸಫೋರ್ಟ್, ಸನಸ್ ಪರ್ ಅಕ್ಚಮ್ ಈ ಎರಡು ಕುದುರೆಗಳನ್ನು ಸ್ಟಾಲಿನ್ ಪ್ಯಾಡಕ್‌ಗೆ ಮೇಯಲು ಬಿಡಲಾಗಿತ್ತು, ಆದರೆ ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯದಲ್ಲಿ ದಿಢೀರನೇ ಸಾವಿರಾರು ಹೆಜ್ಜೇನುಗಳು ಎರಡು ಕುದುರೆಗಳ ಮೇಲೆ ಏಕಾ ಏಕಿ ದಾಳಿ ಮಾಡಿದವು, ಜೇನು ಹುಳುಗಳ ದಾಳಿಗೆ ಎರಡು ಕುದುರೆಗಳು ಕಿರಿಚಿಕೊಂಡು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವು ಇದನ್ನು ಗಮನಸಿದ ಇಲ್ಲಿನ ಕಾರ್ಮಿಕರು ವೈದ್ಯರಿಗೆ ಮಾಹಿತಿ ನೀಡಿದರು. ತತ್ ಕ್ಷಣ ಘಟನೆ ಸ್ಥಳಕ್ಕೆ ತೆರಳಿದ ವೈದ್ಯರ ತಂಡ ದಾಳಿಯಲ್ಲಿ ಗಾಯಗೊಂಡ ಕುದುರೆಗಳಿಗೆ ಸ್ಟಡ್ ಫಾರಂ ನಲ್ಲಿ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಸನಸ್ ಪರ್ ಅಕ್ಚಮ್ ಕೊನೆಯುಸಿರೆಳೆದರೆ ಏರ್ ಸಫೋರ್ಟ್ ಕುದುರೇ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ.

ಕುದುರೆಗಳ ಸಾಧನೆ

ಅಮೆರಿಕದ ಏರ್ ಸಫೋರ್ಟ್ ಕುದುರೆಯು ವರ್ಜಿನಿಯಾ ಡರ್ಬಿಯಲ್ಲಿ ಭಾಗಿಯಾಗಿದೆ, ಪಿಲ್ಗ್ರಮಾ ಸ್ಟೇಕ್ಸ್, ಟ್ರಾನ್ಸ್ಲೇನಿಯಾ ಸ್ಟೇಕ್ಸ್, ಎರಡನೇ ಯುನೈಟೆಡ್ ನೇಷನ್ಸ್ ಸ್ಟೇಕ್ಸ್, ಮೂರನೇ ಅಮೇರಿಕನ್ ಟರ್ಫ್ ಸ್ಟೇಕ್ಸ್, ಎರಡನೇ ಹಿಲ್ ಪ್ರಿನ್ಸ್ ಸ್ಟೇಕ್ಸ್ ರೇಸಿನಲ್ಲಿ ಜಯಗಳಿಸಿ ಕೋಟ್ಯಾಂತರೂ ಸಂಪಾದಿಸಿದೆ ಎನ್ನಲಾಗಿದೆ, ಐರಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಐದು ಸ್ಟಾರ್ ಕುದುರೇ ರೇಸ್‌ನಲ್ಲಿ ಮೂರು ಭಾರಿ ಜಯಭೇರಿ ಭಾರಿಸಿ ಲಾಭ ತಂದು ಕೊಟ್ಟಿದೆ.

Advertisement

ಕುದುರೆ ತಳಿ ಉತ್ಪಾದನೆ
ಕುದುರೆ ರೇಸಿನಲ್ಲಿ ಉತ್ತಮ ಸಾಧನೆ ಮಾಡಿರುವ ಈ ಎರಡು ಕುದುರೆಗಳನ್ನು ಅಮೆರಿಕ ಹಾಗೂ ಐರ್ಲ್ಯಾಂಡ್ ದೇಶಗಳಿಂದ ಕಳೆದ ಆರು ವರ್ಷದ ಹಿಂದೆ ಯುಆರ್‌ಬಿಬಿ ತಲಾ ಒಂದು ಕೋಟಿ ರೂಗಳಂತೆ ಎರಡು ಕೋಟಿ ರೂಗಳಿಗೆ ಖರೀದಿಸಿ ಈ ಬೀಜದ ತಳಿಯ ಕುದುರೆಗಳಿಂದ ಕುದುರೆ ಮರಿ ತಳಿಗಳನ್ನು ಉತ್ಪಾದಿಸಲಾಗುತ್ತಿತು ಎನ್ನಲಾಗಿದೆ.

ಈ ಕುದುರೆಗಳು ನೂರಾರು ಕುದುರೆ ಮರಿಗಳಿಗೆ ಜನ್ಮ ನೀಡಿವೆ, ಈ ಕುದುರೆ ಮರಿಗಳನ್ನು ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಂದ  ಬಂದು ಲಕ್ಷಾಂತರ ರೂಗೆ ಖರೀದಿ ಮಾಡಿ ರೇಸ್‌ಗೆ ಬಳಸಿಕೊಳ್ಳುತ್ತಿದ್ದಾರೆ.

ಸ್ಟಡ್‌ಫಾರಂಗೆ ಅಘಾತ
ಸರ್ಕಾರವು 30 ವರ್ಷಗಳ ಅವಧಿಗೆ ಯುಆರ್‌ಬಿಬಿಗೆ ಗುತ್ತಿಗೆ ನೀಡಿತ್ತು ಈ ಗುತ್ತಿಗೆ ಅವಧಿ ಕಳೆದ ಸೆಪ್ಟಂಬರ್‌ಗೆ ಮುಗಿದಿತ್ತಾದರೂ ಮತ್ತೆ ಯುಆರ್‌ಬಿಬಿ ಸ್ವಲ್ಪ ದಿವಸ ಕಾಲವಕಾಶ ತೆಗೆದುಕೊಂಡಿತ್ತು ಇದೇ ವೇಳೆ ಎರಡು ಬೀಜದ ತಳಿ ಕುದುರೆಗಳು ಹೆಜ್ಜೇನು ದಾಳಿಗೆ ತುತ್ತಾಗಿದ್ದು ಸ್ಟಡ್ ಫಾರಂಗೆ ಏಕ ಕಾಲದಲ್ಲಿ ಎರಡು ಅಘಾತಗಳು ಉಂಟಾಗಿದೆ.

ಇದೇ ಮೊದಲ ಘಟನೆ
ಟಿಪ್ಪು ಸುಲ್ತಾನ್ ಸುಮಾರು 260 ವರ್ಷಗಳ ಹಿಂದೆ ತನ್ನ ಕುದುರೆ ಸೈನ್ಯಕ್ಕೆ ಹುಲಿಯೂರುದುರ್ಗ, ಸಾವನದುರ್ಗ ಮತ್ತು ದೇವರಾಯನದುರ್ಗ ಈ ಮೂರು ಪ್ರದೇಶಗಳಿಗೆ ಕುಣಿಗಲ್ ಅನ್ನು ಪ್ರಮುಖ ಕೇಂದ್ರವಾಗಿಸಿಕೊಂಡು ಸೈನಿಕರಿಗೆ ಯುದ್ದದ ತರಬೇತಿ ಕುದುರೆ ಸಾಕಾಣಿಕೆ ಮತ್ತು ವಂಶಾಭಿವೃದ್ದಿಗಾಗಿ ಸ್ಟಡ್ ಫಾರಂ(ಕುದುರೆ ಗಾವಲ್) ಅನ್ನು ಇಲ್ಲಿ ಸ್ಥಾಪಿಸಿದ್ದ ಎನ್ನಲಾಗಿದ್ದು ಅಲ್ಲಿಂದ ಇಲ್ಲಿವರೆಗೂ ಯಾವುದೇ ತರಹ ಇಂತಹ ಘಟನೆಯಿಂದ ಕುದುರೆಗಳು ಮೃಪಟ್ಟಿರಲಿಲ್ಲ. ಇದೇ ಪ್ರಥಮ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next