ಕನ್ನಡದಲ್ಲಿ ಹೊಸಬರ ಆಗಮನ ಹೊಸದೇನಲ್ಲ. ಆ ಸಾಲಿಗೆ “ವರ್ಣಮಯ’ ಚಿತ್ರವೂ ಸೇರಿದೆ. ಈ ಹಿಂದೆ “ವರ್ಣಮಯ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಸುದ್ದಿಯಾಗಿತ್ತು. ಈಗ ಅದರ ವಿಶೇಷವೆಂದರೆ, ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಚಿತ್ರತಂಡ ಸಂತಸದಲ್ಲಿದೆ. ಅಂದಹಾಗೆ, “ವರ್ಣಮಯ’ ಒಂದು ಹಾರರ್ ಚಿತ್ರ. ಕನ್ನಡ ಚಿತ್ರರಂಗದ ಬಾಗಿಲು ತಟ್ಟುವವರಿಗೆ ಹಾರರ್ ಚಿತ್ರಗಳು ಒಂದು ರೀತಿ ಫೇವರೇಟ್ ಎಂದೇ ಹೇಳಬಹುದು.
ಈ ಹಿಂದೆ “ಪುಟಾಣಿ ಸಫಾರಿ’ ಎನ್ನುವ ಮಕ್ಕಳ ಚಿತ್ರ ನಿರ್ದೇಶಿಸಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾರರ್ ಚಿತ್ರವೆಂದಮೇಲೆ ಒಂದೇ ರೀತಿಯ ಸಿದ್ಧಸೂತ್ರ ಕಾಣಸಿಗುತ್ತದೆ. ಅಂದರೆ, ಒಂದು ಬಂಗಲೆ ಅಥವಾ ನಿಗೂಢ ಜಾಗಕ್ಕೆ ಯುವಕರು ಹೋಗುವುದು ಅಲ್ಲಿ ಭೂತ, ಪಿಶಾಚಿ ಕಾಟ ಶುರುವಾಗಿ, ನೋಡುಗರನ್ನು ಬೆಚ್ಚಿಬೀಳಿಸುವುದು ಸಹಜ.
ಆದರೆ ಇದನ್ನು ಹೊರತುಪಡಿಸಿ, ವೈಜ್ಞಾನಿಕವಾಗಿ ಪ್ಯಾರಾನಾರ್ಮಲ್ ಘಟನೆಗಳನ್ನು ಆಧರಿಸಿ “ವರ್ಣಮಯ’ ಚಿತ್ರ ತೆರೆಗೆ ಬರುತ್ತಿದೆ. ಹಾರರ್ ಚಿತ್ರ ಅಂದರೆ, ಅಲ್ಲಿ ಗ್ರಾಫಿಕ್ಸ್ ಇರಲೇಬೇಕು. ಅದು ಇಲ್ಲೂ ಮುಂದುವರೆದಿದೆ. ಹಾಗಂತ ಇಲ್ಲಿ, ದೆವ್ವ ವಿಕಾರವಾಗಿಯಂತೂ ಇರುವುದಿಲ್ಲವಂತೆ. ಮಾಟ, ಮಂತ್ರ, ಮಂತ್ರವಾದಿಗಳ ಸುಳಿವೂ ಇಲ್ಲಿಲ್ಲ. ಹಾಗಾಗಿ ಇದೊಂದು ಬೇರೆ ರೀತಿಯ ಹಾರರ್ ಚಿತ್ರ ಎಂಬುದು ಚಿತ್ರತಂಡದ ಮಾತು.
ಚಿತ್ರಕ್ಕೆ ಶ್ರೀಗುರು ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಹಾಡುಗಳಿಗೆ ಸುಧಾಂಶು-ವಿನೋದ್ ರಾಗ ಸಂಯೋಜಿಸಿದ್ದಾರೆ. ಜೀವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ರಾಜ್ “ವರ್ಣಮಯ’ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಶಕ್ತಿ ಎಸ್. ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸುನೀತಾ ಮರಿಯಾ ಪಿಂಟೋ, ಆರಾಧ್ಯ ಅಟ್ಟಾವರ ಅಭಿನಯಿಸುತ್ತಿದ್ದಾರೆ. ದೀಪ್ತಿ ದಾಮೋದರ್ ನಿರ್ಮಾಪಕರು.