ಇತ್ತೀಚೆಗೆ ಕನ್ನಡದಲ್ಲಿ ಹಾರರ್ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಅನೇಕರು ಹಾರರ್ ಚಿತ್ರಗಳತ್ತ ಆಸಕ್ತರಾಗುತ್ತಿದ್ದು, ಒಂದರ ಹಿಂದೊಂದು ಹಾರರ್ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಈಗ ಅದೇ ಸಾಲಿಗೆ “ಆರ್.ಹೆಚ್ 100′ ಎನ್ನುವ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. “ನಿಜವಾದ ಘಟನೆಗಳಿಂದ ಪ್ರೇರಿತವಾಗಿದ್ದು’ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಈ ಚಿತ್ರದ ಕಥೆಯಲ್ಲಿ ಆರು ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾಡಿನಲ್ಲಿ ಏನೋ ನಡೆಯುತ್ತಿದೆ ಎಂದು ಸಂಶೋಧನೆ ಮಾಡಲು ಹೋಗಿ ಏನೇನು ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.
ಬಾಗೇಪಲ್ಲಿಯ ಎಂ.ಸಿ.ಮಹೇಶ್ ಇಬ್ಬರು ನಿರ್ದೇಶಕರೊಂದಿಗೆ ಸೇರಿಕೊಂಡು, ಒಂದಷ್ಟು ಸಾಮಾಜಿಕ ಅಂಶಗಳ ಕುರಿತಂತೆ ರಿಸರ್ಚ್ ಮಾಡಿ ಕಥೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಪತ್ರಿಕೋದ್ಯಮ ವಿದ್ಯಾರ್ಥಿಗಳು ದಟ್ಟ ಕಾನನಕ್ಕೆ ಹೋದಾಗ ಆದಂಥ ಅನುಭವಗಳು ಯಾವ ರೀತಿ ಇರುತ್ತದೆ ಅನ್ನೋದನ್ನ ಪ್ರೇಕ್ಷಕರಿಗೆ ಚಿತ್ರ ತೋರಿಸಲಿದೆ. ನೋಡುಗನಿಗೆ ಪ್ರತಿ ದೃಶ್ಯವು ಭಯ ಹುಟ್ಟುವಂತೆ ಮಾಡಿಸುತ್ತದೆ.
ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳು ಇರಲಿದೆ. ಹಿಂದಿನ ಚಿತ್ರಗಳು ಭಯಪಡಿಸಲಿಕ್ಕೆ ಅಂತಲೇ ಸನ್ನಿವೇಶಗಳನ್ನು ಸೃಷ್ಟಿಸಿದ್ದರು. ಇದರಲ್ಲಿ ಆ ರೀತಿ ಮಾಡದೆ ನಿಜವಾದ ಹಾರರ್ ಸ್ಪರ್ಶವನ್ನು ಕೊಡಲಾಗಿದೆ. ಶೀರ್ಷಿಕೆ ವಿವರ ಹೇಳಿದರೆ ಕತೆಯ ಸಾರಾಂಶ ಗೊತ್ತಾಗುವ ಕಾರಣ ತಂಡವು ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎನ್ನುತ್ತದೆ. ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮತ್ತು ವಕೀಲ ಹರೀಶ್ ಕುಮಾರ್. ಎಲ್ ಚಿತ್ರಕ್ಕೆ ಬಣ್ಣ ಹಚ್ಚುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ.
ತಾರಗಣದಲ್ಲಿ ಸಂಡೂರಿನ ಕಾವ್ಯತಳವಾರ್, ಕೊಡಗಿನ ಚಿತ್ರಾ, ಗಣೇಶ್, ಸೋಮಶೇಖರ್ ಮತ್ತು ಸುನಿತ್ ನಟಿಸಿದ್ದಾರೆ. ಕೊಡಚಾದ್ರಿ ಬೆಟ್ಟಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳಿಗೆ ಮೆಲ್ವಿನ್ ಮೈಕಲ್ ಸಂಗೀತವಿದೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಮುಂಬರುವ 2020 ಜನವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ.