“ಲವ್ ಮಾಕ್ಟೇಲ್’ ಚಿತ್ರದ ನಂತರ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸಿರುವ ಚಿತ್ರ “ಓ’. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನ.11ರಂದು ತೆರೆಗೆ ಬರಲಿದೆ. ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಈ ಚಿತ್ರ ತಯಾರಾಗಿದೆ. ಮಹೇಶ್ ಸಿ.ಅಮ್ಮಳ್ಳಿದೊಡ್ಡಿ ಅವರ ಚಿತ್ರಕಥೆ ಹಾಗೂ ನಿರ್ದೇಶನ ಚಿತ್ರಕ್ಕಿದೆ. ಕಿರಣ್ ತಲಕಾಡು ಚಿತ್ರದ ಕಥೆ ಬರೆಯುವುದ ಜೊತೆಗೆ “ಏಕಾಕ್ಷರ ಫಿಲಂಸ್’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕೋವಿಡ್‌ಗೂ ಮುನ್ನವೇ ಪ್ರಾರಂಭವಾಗಿದ್ದ ಈ ಚಿತ್ರ ಎಲ್ಲಾ ಅಡೆತಡೆಗಳನ್ನು ದಾಟಿ ಈಗ ಬಿಡುಗಡೆಯ ಹಂತ ತಲುಪಿದೆ. ನಿರ್ದೇಶಕ ಮಹೇಶ್ ಮಾತನಾಡಿ, “ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು ಮಾಡಿದ ಚಿತ್ರ. ಒಂದು ಕುಟುಂಬದಲ್ಲಿ ಅಕ್ಕ ತಂಗಿಯ ಮೇಲೆ ನಡೆಯುವ ಕಥೆಯಿದು. “ಓ’ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಜೊತೆ ಗೆ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ. ಈಗಾಗಲೇ ಚಿತ್ರದ ಮೊದಲ ಪ್ರತಿ ಬಂದಿದ್ದು, ನ.11ಕ್ಕೆ ಬಿಡುಗಡೆಯಾಗುತ್ತಿದೆ’ ಎಂದು ವಿವರಿಸಿದರು.
ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ “ಚಿಕ್ಕವನಿದ್ದಾಗಲೇ ನನಗೆ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ನಮ್ಮ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆ ಎಂದೂ ಪುನೀತ್ ಅವರು ಹೇಳಿದ್ದರು.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಚಿತ್ರವನ್ನು ಜನರಿಗೆ ಹೇಗೆಲ್ಲಾ ತಲುಪಿಸಬೇಕೆಂದು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ:BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್
ನಾಯಕಿ ಮಿಲನಾ ನಾಗರಾಜ್ ಮಾತನಾಡಿ, “ಲಾಕ್ ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತಾ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಬೇರೆ ಥರದ ಶಾಟ್ ಇಡಬೇಕು’ ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.
ಅಮೃತಾ ಅಯ್ಯಂಗಾರ್ ಮಾತನಾಡಿ, “ಚಿತ್ರದಲ್ಲಿ ಹಾರರ್ ಎಫೆಕ್ಟ್… ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು ಎಲ್ಲ ಥರದ ಎಮೋಷನ್ಸ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ. ಕೆಲವು ಸೀನ್‌ಗಳಲ್ಲಿ ನಟಿಸುವಾಗ ತುಂಬಾ ಭಯವಾಗಿತ್ತು’ ಎಂದರು.