Advertisement

ದೌಲತ್‌ ಮಹಲ್‌ನಲ್ಲಿ ಹಾರರ್‌ ಮಂತ್ರಂ

10:07 AM Nov 19, 2017 | |

ಅದು ರಾಯಚೂರಿನಲ್ಲಿರುವ ಸುಮಾರು 300 ವರ್ಷಗಳ ಹಳೆಯ ಮಹಲ್‌. 50 ಬಾಗಿಲು, 150 ಕಿಟಕಿಗಳಿರುವ ಮಹಲ್‌ ಅದು. ಆ ಮಹಲ್‌ಗೆ ಇಟ್ಟಿರುವ ಹೆಸರು ದೌಲತ್‌ ಮಹಲ್‌. ಕಾಜನ್‌ ಗೌಡ್ರು ಆ ಮಹಲ್‌ನ ಯಜಮಾನ. ಆ ಮಹಲ್‌ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಬರಬಹುದು. ವಿಷಯ ಇರೋದೇ ಆ ದೌಲತ್‌ ಮಹಲ್‌ನಲ್ಲಿ. ಆ ಮಹಲ್‌ ಈಗ ಸುದ್ದಿಯಾಗೋಕೆ ಕಾರಣ, “ಮಂತ್ರಂ’ ಚಿತ್ರ.

Advertisement

ಹೊಸಬರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಆ ದೌಲತ್‌ ಮಹಲ್‌ ಮುಖ್ಯ ಆಕರ್ಷಣೆ. ಹೇಳಿ ಕೇಳಿ “ಮಂತ್ರಂ’ ಹಾರರ್‌ ಚಿತ್ರ. ಈ ಚಿತ್ರದ ಮೂಲಕ ಸಜ್ಜನ್‌ ನಿರ್ದೇಶಕರಾದರೆ, ಅಮರ್‌ ಚೌಧರಿ ನಿರ್ಮಾಪಕರು. ಇಬ್ಬರಿಗೂ ಇದು ಮೊದಲ ಪ್ರಯತ್ನ. ಚಿತ್ರದ ಕಥೆಗೊಂದು ಹಳೇ ಬಂಗಲೆ ಬೇಕಿತ್ತು. ಆ ತಂಡದ ಕಣ್ಣಿಗೆ ಬಿದ್ದಿದ್ದು ಇದೇ ದೌಲತ್‌ ಮಹಲ್‌. ಸಾಮಾನ್ಯವಾಗಿ ಹಾರರ್‌ ಚಿತ್ರ ಮಾಡುವಾಗ, ಒಂದಷ್ಟು ಕೆಟ್ಟ ಮತ್ತು ಭಯಾನಕ ಘಟನೆಗಳು ನಡೆಯೋದು ಸಹಜ.

ಅಂತಹ ಘಟನೆಗಳು “ಮಂತ್ರಂ’ ಚಿತ್ರೀಕರಣದಲ್ಲೂ ನಡೆದಿವೆ. ಹಳೆಯದಾದ ಆ ಮಹಲ್‌ನಲ್ಲಿ ಸುಮಾರು ನೂರು ವರ್ಷಗಳಿಂದ ಯಾರೂ ವಾಸ ಮಾಡಿಲ್ಲವಂತೆ. ಹಾಗಾಗಿ ಆ ಮಹಲ್‌ ಪಾಳು ಬಿದ್ದಿದೆ. ಆ ಮಹಲ್‌ನಲ್ಲಿ ಸುಮಾರು ಹದಿನಾಲ್ಕು ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿತ್ತು. ಮೊದಲ ಹಂತವಾಗಿ ಏಳು ದಿನಗಳ ಚಿತ್ರೀಕರಣದ ಯೋಜನೆ ಹಾಕಿಕೊಂಡಿದ್ದರು.

ಮೊದಲ ದಿನ ಮೂರು ದೃಶ್ಯ ಮುಗಿಸುವ ಗುರಿ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ಸಾಧ್ಯವಾಗಿದ್ದು, ಕೇವಲ ಅರ್ಧ ಸೀನ್‌ ಮಾತ್ರ. ಕಾರಣ, ಹಲವು ತೊಂದರೆಗಳು. ಕೆಲವರಿಗೆ ಇದ್ದಕ್ಕಿದ್ದಂತೆ ಜ್ವರ ಬಂದರೆ, ಇನ್ನೂ ಕೆಲವರು ಭಯಗೊಂಡು ತಲೆ ತಿರುಗಿ ಬಿದ್ದರಂತೆ. ಶೂಟ್‌ ಮಾಡಿದ ಯಾವುದೇ ದೃಶ್ಯ ಕಂಪ್ಲೀಟ್‌ ಆಗದಿರುವುದರಿಂದ ಎಲ್ಲರಿಗೂ ಭಯ ಕಾಡೋಕೆ ಶುರುವಾಯಿತಂತೆ. ಅದಕ್ಕೂ ಮುನ್ನ, ರಸ್ತೆ ಅಪಘಾತಗಳೂ ನಡೆದು, ಹಲವರು ಗಾಯಗೊಂಡಿದ್ದರಂತೆ.

ಕೊನೆಗೆ ಆ ಮಹಲ್‌ನಲ್ಲೇ ಏನೋ ಸಮಸ್ಯೆ ಇದೆ ಅಂದುಕೊಂಡು, ನಿರ್ಮಾಪಕ ಮತ್ತು ನಿರ್ದೇಶಕರು ಒಬ್ಬ ಗುರೂಜಿಯನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಅವರಿಗೆ ಸಿಕ್ಕ ಉತ್ತರ, ಆ ಮಹಲ್‌ ವರ್ಷಗಳಿಂದ ಖಾಲಿ ಇರುವುದರಿಂದ ಅಲ್ಲಿ ಪಾಸಿಟಿವ್‌ ಎನರ್ಜಿ ಮಾಯವಾಗಿ, ನೆಗೆಟಿವ್‌ ಎನರ್ಜಿ ತುಂಬಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. 25 ವರ್ಷ ಒಂದು ಮನೆ ಖಾಲಿ ಇದ್ದರೆ, ಅಲ್ಲಿ ಅಂತಹ ನೆಗೆಟಿವ್‌ ಎನರ್ಜಿ ಸಹಜ.

Advertisement

ಆದ್ದರಿಂದ ಒಂದು ಪೂಜೆ ಮಾಡಿಸಿಕೊಂಡು ಚಿತ್ರೀಕರಣ ಶುರುಮಾಡಿ ಅಂದರಂತೆ ಆ ಗುರೂಜಿ. ಕೊನೆಗೆ ಚಿತ್ರತಂಡ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗಿ ಬಂದು, ಚಿತ್ರೀಕರಣ ನಡೆಸಿದೆ. ಆದರೂ, ಅಲ್ಲಿ ಅಂದುಕೊಂಡಂತೆ ಚಿತ್ರೀಕರಿಸಲು ಸಾಧ್ಯವಾಗದೆ, ಉಳಿದ ದೃಶ್ಯವನ್ನು ಭೂತಬಂಗಲೆಯಲ್ಲಿ ಮಾಡಿದ್ದಾರೆ. ಆ ಮನೆ ಒಳಗೆ ಹೋದಾಗ, ಹಾವು, ಚೇಳು, ಬಾವಲಿಗಳದ್ದೇ ದರ್ಶನ. ದಂಗಾದ ಚಿತ್ರತಂಡ, ಎಲ್ಲವನ್ನೂ ಸ್ವತ್ಛಗೊಳಿಸಿ, ಕ್ಯಾಮೆರಾ ಆನ್‌ ಮಾಡಿದರೆ, ಒಂದೊಂದು ತೊಂದರೆ ಅನುಭವಿಸಿದೆ.

ಒಟ್ಟಾರೆ, ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಚಿತ್ರತಂಡ. ಡಿಸೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ನಾಯಕ  ಶಮಂತ್‌ ಶೆಟ್ಟಿಗೆ ಪಲ್ಲವಿ ರಾಜ್‌ ನಾಯಕಿ. ಉಳಿದಂತೆ ರಾಕ್‌ಲೈನ್‌ ಸುಧಾಕರ್‌, ಗೌರೀಶ್‌ ಅಕ್ಕಿ, ಶಶಿದೇಶಪಾಂಡೆ, ಆಯುಷ್‌, ಅನಿಲ್‌ ಇತರರು ಇದ್ದಾರೆ. ಅಂದಹಾಗೆ, ಇದೊಂದು ಹಾರರ್‌ ಚಿತ್ರವಾದರೂ, ಇಲ್ಲಿ ರಿವೇಂಜ್‌ ಸ್ಟೋರಿ ಇಲ್ಲ. ಬದಲಾಗಿ ಸಾಮಾಜಿಕ ಸಮಸ್ಯೆ ಕುರಿತು ಸಾಗಲಿದೆಯಂತೆ. ಅದಕ್ಕೊಂದು ಪರಿಹಾರವೂ ಇಲ್ಲಿದೆಯಂತೆ. ರಷೀದ್‌ ಸಂಗೀತವಿದೆ. ರವಿಬಸ್ರೂರ್‌ ಹಿನ್ನೆಲೆ ಸಂಗೀತವಿದೆ. ರಾಜ್‌ಶೇಖರ್‌ ಛಾಯಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next