Advertisement

ನಗುವಿನ ಅಲೆಯಲ್ಲಿ ಹಾರರ್‌ ಸದ್ದು

09:02 AM Dec 01, 2019 | Lakshmi GovindaRaj |

“ನಾನು ಹೋಗಲ್ಲ, ಹೋಗೋಕು ಆಗಲ್ಲ. ಹೋಗೋ ಮಾತೇ ಇಲ್ಲ…’ ಆ ಆತ್ಮ ರೋಷದಿಂದ ಅಷ್ಟೇ ಆರ್ಭಟದಿಂದ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಭವ್ಯ ಬಂಗಲೆಯಲ್ಲೊಂದು ಘಟನೆ ನಡೆದಿರುತ್ತೆ. ಆ ಘಟನೆ ಹಿಂದಿನ “ಆತ್ಮ’ಕಥನ ಒಂದಷ್ಟು ಮರುಕ ಹುಟ್ಟಿಸುತ್ತದೆ. ಅಷ್ಟಕ್ಕೂ ಆ ಆತ್ಮ ಯಾವುದು, ಆ ಆತ್ಮಕಥೆ ಏನೆಂಬುದರ ಕುತೂಹಲವಿದ್ದರೆ, “ದಮಯಂತಿ’ಯ ರೋಷಾವೇಷವನ್ನೊಮ್ಮೆ ನೋಡಲಡ್ಡಿಯಿಲ್ಲ. ಇದೊಂದು ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾದರೂ, ಇಲ್ಲಿ ನಗುವಿನ ಅಲೆ ಇದೆ. ಆತ್ಮದ ಛಾಯೆ ಇಲ್ಲಿದ್ದರೂ, ಸಿನಿಮಾದುದ್ದಕ್ಕೂ ನಗುವಿನ ಹೂರಣವೇ ತುಂಬಿದೆ.

Advertisement

ನೋಡುಗರನ್ನು ನಗಿಸುವುದರ ಜೊತೆಗೊಂದು ಆತ್ಮದ ಕಥೆ ಮತ್ತು ವ್ಯಥೆಯನ್ನು ಅಷ್ಟೇ ಜಾಣತನದಿಂದ ಹದಗೊಳಿಸಿ, ಆ ಮೂಲಕ ಸಣ್ಣದ್ದೊಂದು ಸಂದೇಶ ಸಾರುವ ಪ್ರಯತ್ನ ಸಾರ್ಥಕವೆನಿಸಿದೆ. ಮೊದಲೇ ಹೇಳಿದಂತೆ ಇಲ್ಲಿ ಆತ್ಮದ ಕಥೆ ಇದೆ. ಹಾಗಿದ್ದರೂ ಹಾರರ್‌ ಫೀಲ್‌ಗಿಂತ ಹಾಸ್ಯದ ಪಾಲು ತುಸು ಹೆಚ್ಚಾಗಿದೆ. ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಭಯದ ವಾತಾವರಣ ಇದ್ದೇ ಇರುತ್ತೆ. ಇಲ್ಲೂ ಆ ಫೀಲ್‌ ಇದೆಯಾದರೂ, ಆತ್ಮದೊಂದಿಗೆ ಮಾತುಕತೆ ನಡೆಸುವ ಪ್ರತಿಯೊಂದು ಪಾತ್ರಗಳು ಉಣಬಡಿಸುವ ಹಾಸ್ಯದೌತಣ ಒಂದೊಳ್ಳೆಯ ಅನುಭವ ಕಟ್ಟಿಕೊಡುತ್ತದೆ.

ಒಂದೇ ಬಂಗಲೆಯಲ್ಲಿ ನಗು, ಭಯ, ಎಮೋಶನ್ಸ್‌, ಸೆಂಟಿಮೆಂಟ್‌, ಆ್ಯಕ್ಷನ್‌ ಎಲ್ಲವನ್ನೂ ಮಿಶ್ರಣ ಮಾಡಿ, ಸಣ್ಣ ಸಣ್ಣ ಕುತೂಹಲಗಳೊಂದಿಗೆ ಸಾಗುವ ಚಿತ್ರ, ನಿರೀಕ್ಷೆಗಳಿಗೆ ಮೋಸ ಮಾಡಿಲ್ಲ. ಸಿನಿಮಾದಲ್ಲಿ ಒಂದಷ್ಟು ರಿಪೀಟ್‌ ದೃಶ್ಯಗಳಿಗೆ ಕಡಿವಾಣ ಹಾಕಬಹುದಾಗಿತ್ತು. ಕೊಂಚ ಅವಧಿ ಹೆಚ್ಚಾಯ್ತು ಅನ್ನುವುದು ಬಿಟ್ಟರೆ, ಚಿತ್ರದಲ್ಲಿ ಸಿಗುವ ನಗು, ಅಲ್ಲಲ್ಲಿ ಆಗುವ ಭಯ, ಬರುವ ಫ್ಲ್ಯಾಶ್‌ಬ್ಯಾಕ್‌ ಕಥೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ. ಕೆಲವು ಕಡೆ ಹಾಸ್ಯ ಅತಿ ಎನಿಸಿಸುತ್ತದೆ. ಚಿತ್ರದ ಉದ್ದೇಶ ನಗುವೊಂದೇ ಅಲ್ಲ, ಇಲ್ಲೊಂದು ಮೌಲ್ಯವಿದೆ.

ಆ ಮೌಲ್ಯಯುತ ಬದುಕಿನಲ್ಲೊಂದು ಅಸೂಯೆಯ ಛಾಯೆ ಇಣುಕಿದಾಗ ಆಗುವ ದುರ್ಘ‌ಟನೆಗಳ ಹಿಂದಿನ ರಹಸ್ಯವನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಕೆಲವು ದೃಶ್ಯಗಳಿಗೆ ಮುಲಾಜಿಲ್ಲದೆ ಕತ್ತರಿ ಹಾಕಬಹುದು. ಸಿಂಪಲ್‌ ಕಥೆಯನ್ನು ಅಷ್ಟೇ ಬಿಗಿಯಾಗಿ ನಿರೂಪಿಸಿದ್ದರೂ, ಅನಗತ್ಯ ಅಂಶಗಳು ಆಗಾಗ ಕಾಣಿಸಿಕೊಂಡು ನೋಡುಗರ ತಾಳ್ಮೆ ಕೆಡಿಸುತ್ತವೆ. ಇನ್ನೇನು, ಮತ್ತದೇ “ಕಾಮಿಡಿ’ ಪ್ರೋಗ್ರಾಮ್‌ ಅಂದುಕೊಳ್ಳುತ್ತಿದ್ದಂತೆಯೇ, ಅಸಲಿ ಆಟ ಶುರುವಾಗುತ್ತೆ. ಅದೇ ಚಿತ್ರದ ಸಸ್ಪೆನ್ಸ್‌.

ಮೊದಲರ್ಧ ನಗುವಿಗೆ ಸೀಮಿತವಾದರೆ, ದ್ವಿತಿಯಾರ್ಧ ಬೇರೆ ಅನುಭವ ಕಟ್ಟಿಕೊಡುತ್ತದೆ. ಆ ಫೀಲ್‌ ಅನುಭವಿಸುವ ಸಣ್ಣ ಕುತೂಹಲವಿದ್ದರೆ, “ದಮಯಂತಿ’ ದರ್ಶನ ಪಡೆಯಬಹುದು. ಪ್ರಮುಖವಾಗಿ ಒಂದೇ ಫ್ರೆಮ್‌ನಲ್ಲಿ ಹಾಸ್ಯ ನಟರನ್ನು ನೋಡುವ ಅವಕಾಶವಿದೆ. ಅಲ್ಲಿ ಕಾಣುವ ಪ್ರತಿಯೊಬ್ಬರೂ ನಗಿಸಲು ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಎಲ್ಲರ ಹಾವ-ಭಾವ, ಹರಿಬಿಡುವ ಡೈಲಾಗು ಮೂಲಕ ಆಪ್ಪಟ ಮನರಂಜನೆಗೆ ಕಾರಣವಾಗಿದ್ದಾರೆ. ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಪ್ರಧಾನ ಪಾತ್ರ ವಹಿಸುತ್ತದೆ. ಇಡೀ ಚಿತ್ರವನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ತಾಕತ್ತು ಹಿನ್ನೆಲೆ ಸಂಗೀತಕ್ಕಿದೆ.

Advertisement

ಜೊತೆಗೆ ಸಂಭಾಷಣೆ ಕೂಡ ಸಾಥ್‌ ಕೊಟ್ಟಿದೆ. ಒಂದು ಬಂಗಲೆಯಲ್ಲಿ ನಡೆಯುವ ಕಥೆಯಲ್ಲಿ ಒಂಚೂರು ಭಯವಿದೆ, ನಗುವಿಗೆ ಹೆಚ್ಚು ಜಾಗವೂ ಇದೆ. ಒಂದಷ್ಟು ಮರುಕ ಹುಟ್ಟಿಸುವ ಘಟನೆಗಳೂ ಇವೆ. ಸಣ್ಣದಾಗಿ ಕಾಡುವ ನೋವು ಚಿತ್ರದ ಹೈಲೈಟ್‌. ಆ ಪಾಳುಬಿದ್ದ ಮನೆಗೊಂದು ಹಿನ್ನೆಲೆ ಇದೆ. ಅಲ್ಲಿ ಎರಡು ಆತ್ಮಗಳೂ ಇವೆ. ಆದರೆ, ಅಲ್ಲಿಗೆ ರಿಯಾಲಿಟಿ ಶೋಗೆಂದು ಬರುವ ಏಳು ಜನರು, ಇಲ್ಲಿರೋದು ರಿಯಲ್‌ ದೆವ್ವ ಅಲ್ಲ, ರೀಲ್‌ ದೆವ್ವ ಅಂದುಕೊಂಡೇ ಎಂಟ್ರಿಯಾಗಿರುತ್ತಾರೆ. ಆಮೇಲೆ ಅಲ್ಲಿ ನಡೆಯೋ ಘಟನೆಯೇ ಭಯಾನಕ. ಪ್ರತಿಯೊಂದು ಸನ್ನಿವೇಶ ಕೂಡ ಒಂದೊಂದು ತಿರುವು ಪಡೆದುಕೊಳ್ಳುತ್ತಾ ಹೋಗುತ್ತೆ.

ಅಷ್ಟಕ್ಕೂ ಆ ಮನೆಗೆ ಬರುವ ಏಳು ಜನರ್ಯಾರು, ಆ ಆತ್ಮಗಳು ಅಲ್ಲೇಕೆ ಇವೆ, ಕೊನೆಗೆ ಆತ್ಮಗಳಿಗೆ ಮುಕ್ತಿ ಸಿಗುತ್ತೋ, ಇಲ್ಲವೋ ಅನ್ನುವುದೇ ಕಥೆ. ಬಹಳ ದಿನಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿರುವ ರಾಧಿಕಾ ಇಲ್ಲಿ ಎಂದಿಗಿಂತಲೂ ನಟನೆಯಲ್ಲಿ ಗಮನಸೆಳೆಯುತ್ತಾರೆ. “ದಮಯಂತಿ’ಯಾಗಿ ಅಬ್ಬರಿಸಿದ್ದಾರೆ. ಯುವರಾಣಿಯಾಗಿಯೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ತಬಲನಾಣಿ, ಮಿತ್ರ, ಪವನ್‌, ಗಿರಿ, ಸಾಧುಕೋಕಿಲ, ಕೆಂಪೇಗೌಡ ಒಬ್ಬರಿಗಿಂತ ಒಬ್ಬರು ನಗಿಸುವ ಮೂಲಕ ಇಷ್ಟವಾಗುತ್ತಾರೆ. “ಭಜರಂಗಿ’ ಲೋಕಿ ಅವರ ಖಳನ ಖದರ್‌ ಜೋರಾಗಿದೆ. ಗಣೇಶ್‌ ನಾರಾಯಣ್‌ ಹಿನ್ನೆಲೆ ಸಂಗೀತ ಪೂರಕವಾಗಿದೆ. ಪಿ.ಕೆ.ಎಚ್‌.ದಾಸ್‌ ಕ್ಯಾಮೆರಾ ಕೆಲಸ “ದಮಯಂತಿ’ ಅಂದ ಹೆಚ್ಚಿಸಿದೆ.

ಚಿತ್ರ: ದಮಯಂತಿ
ನಿರ್ಮಾಣ: ಶ್ರೀಲಕ್ಷ್ಮೀ ವೃಷಾದ್ರಿ
ನಿರ್ದೇಶನ: ನವರಸನ್‌
ತಾರಾಗಣ: ರಾಧಿಕಾ, “ಭಜರಂಗಿ’ ಲೋಕಿ, ತಬಲನಾಣಿ, ಮಿತ್ರ, ಗಿರಿ, ಪವನ್‌, ಸಾಧುಕೋಕಿಲ, ನವೀನ್‌ಕೃಷ್ಣ, ಕೆಂಪೇಗೌಡ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next