ಭೋಪಾಲ್: ಜಗತ್ತಿನಾದ್ಯಂತ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಂಡು, ಯಾವುದಕ್ಕೆ ಏನು ಹೆಸರಿಡಬೇಕೆಂದು ತಜ್ಞರೆಲ್ಲಾ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಹದ ಪ್ರತಿ ಅಂಗ, ಅಣು, ಕಣ, ರೇಣುವಿಗೂ ಒಂದೊಂದು ಕಾಯಿಲೆಗಳಿದ್ದು, ಯಾವ ಕಾಯಿಲೆಗೆ ಯಾವ ಚಿಕಿತ್ಸೆ ಸೂಕ್ತ ಎಂಬ ಸಂಶೋಧನೆಯಲ್ಲಿ ವೈದ್ಯ ಕ್ಷೇತ್ರ ತಲ್ಲೀನವಾಗಿದೆ. ಆದರೆ ಈ ನಡುವೆಯೇ ಮಧ್ಯಪ್ರದೇಶ ಸರ್ಕಾರ, ಮನುಕುಲಕ್ಕಂಟುವ ಜಾಡ್ಯಗಳಿಗೆ ಸುಲಭಾತಿ ಸುಲಭ ಪರಿಹಾರ ಕಂಡುಕೊಂಡಿದೆ! ಅಂಥದೊಂಂದು ಸುಲಭ ಪರಿಹಾರವೇ ಜ್ಯೋತಿಷ್ಯ ಚಿಕಿತ್ಸೆ!
‘ಗೋಕುಲಾಷ್ಟಮಿಗೂ ಇಮಾಮ್ ಸಾಬ್‌ಗೂ ಎಲ್ಲಿಂದೆಲ್ಲಿ ಸಂಬಂಧ’ ಅನ್ನೋ ಹಾಗೆ; ‘ಅನಾರೋಗ್ಯಕ್ಕೂ ಜ್ಯೋತಿಷ್ಯಕ್ಕೂ ಎಲ್ಲಿಯ ನಂಟು’ ಅಂತ ಕೇಳಬಹುದು. ಆದರೆ ಮನುಷ್ಯನ ಕಾಡುವ ಕಾಯಿಲೆಗಳಿಗೆ ಜ್ಯೋತಿಷ್ಯ ಪರಿಹಾರವಾಗಬಲ್ಲದು ಎಂಬ ದೃಢ ವಿಶ್ವಾಸ ಹೊಂದಿರುವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ, ರೋಗಿಗಳಿಗೆ ಜ್ಯೋತಿಷಿಗಳಿಂದ ಚಿಕಿತ್ಸೆ ಕೊಡಿಸಲು ನಿರ್ಧರಿಸಿದೆ!
ವೈದ್ಯ ಕ್ಷೇತ್ರ ತಂತ್ರಜ್ಞಾನವನ್ನೇ ಹೊದ್ದು ಕೂತಿರುವ ಈ ‘ಸ್ಮಾರ್ಟ್’ಯುಗದೊಳಗೆ ‘ಜ್ಯೋತಿಷ್ಯ ಚಿಕಿತ್ಸೆ’ ನುಸುಳಿರುವುದು ‘ಸುಳ್ಳು ಸುದ್ದಿ’ ಅನಿಸಬಹುದಾದರೂ, ಕಟು ಸತ್ಯ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಮಧ್ಯಪ್ರದೇಶ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ಪ್ರತ್ಯೇಕ ‘ಜ್ಯೋತಿಷ್ಯ ಒಪಿಡಿ’ (ಹೊರ ರೋಗಿಗಳ ವಿಭಾಗ) ಆರಂಭಿಸುತ್ತಿದೆ. ವೈಜ್ಞಾನಿಕ ಸತ್ಯಗಳನ್ನೇ ನುಡಿಯುವ ಜ್ಯೋತಿಷಿಗಳು ಒಪಿಡಿಯಲ್ಲಿ ಇರಲಿದ್ದು, ಇವರನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ‘ಮಹರ್ಷಿ ಪತಂಜಲಿ ಸಂಸ್ಕೃತಿ ಸಂಸ್ಥಾನ’ದ (ಎಂಪಿಎಸ್‌ಎಸ್) ಮೂಲಕ ನೇಮಿಸಲಾಗುತ್ತದೆ. ‘ಇಲ್ಲೂ ಕಿರಿಯ ಸಹಾಯಕ ಜ್ಯೋತಿಷಿಗಳು, ಹಿರಿಯ, ಅನುಭವಿ ಜ್ಯೋತಿಷಿಗಳ ಕೈಕೆಳಗೆ ಸೇವೆ ಸಲ್ಲಿಸುತ್ತಾರೆ,’ ಎಂದು ಎಂಪಿಎಸ್ ಎಸ್ ನಿರ್ದೇಶಕ ಪಿ.ಆರ್.ತಿವಾರಿ ತಿಳಿಸುತ್ತಾರೆ.
ಜ್ಯೋತಿಷ್ಯವೂ ವಿಜ್ಞಾನ: ‘ಕಾಯಿಲೆಗೆ ಜ್ಯೋತಿಷ್ಯ ಪರಿಹಾರ ಬಯಸುವ ರೋಗಿಗಳು ಒಪಿಡಿಯಲ್ಲಿ 5 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಕಾಯಿಲೆ ಹಾಗೂ ಪ್ರಸ್ತುತ ಸಮಯಕ್ಕೆ ಅನುಗುಣವಾಗಿ ರೋಗಿಗೆ ಕೆಲ ಪ್ರಶ್ನೆ ಕೇಳುವ ‘ಜ್ಯೋತಿಷಿ ವೈದ್ಯರು’, ಗ್ರಹಗಳ ಸಂಯೋಜನೆ ಅಧ್ಯಯನ ಮಾಡಿ ರೋಗಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡುತ್ತಾರೆ. ಜ್ಯೋತಿಷ್ಯ ಕೇವಲ ಊಹೆಯಲ್ಲ, ಅದೊಂದು ಲೆಕ್ಕಾಚಾರದ ವಿಜ್ಞಾನ ಎಂಬುದನ್ನು ಈ ಮೂಲಕ ಸಾಬೀತುಪಡಿಸಲಾಗುತ್ತದೆ,’ ಎನ್ನುತ್ತಾರೆ ತಿವಾರಿ.
ಡಿಪ್ಲೊಮಾ ಕೋರ್ಸ್: ಜ್ಯೋತಿಷ್ಯ, ವಾಸ್ತುಶಾಸ್ತ್ರ ಹಾಗೂ ಪೌರೋಹಿತ್ಯಕ್ಕೆ ಸಂಬಂಧಿಸಿದ ತಲಾ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಎಂಪಿ ಎಸ್‌ಎಸ್, ವಾರದ ಹಿಂದಷ್ಟೇ ಆರಂಭಿಸಿದ್ದು, ಆಯಾ ಕ್ಷೇತ್ರಗಳ ಅನುಭವಿ ಪರಿಣಿತರು ಯುವ ಪೀಳಿಗೆಗೆ ಇಲ್ಲಿ ತರಬೇತಿ ನೀಡಲಿದ್ದಾರೆ. ಇಲ್ಲಿ ತೇರ್ಗಡೆಯಾದವರು, ಒಪಿಡಿಯಲ್ಲಿ ಕಿರಿಯ ಜ್ಯೋತಿಷಿ ವೈದ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಸೋಲಿಗೆ ವಾಸ್ತು ಕಾರಣವಂತೆ !
ಮಧ್ಯಪ್ರದೇಶದಲ್ಲಿ ಕಳೆದ 14 ವರ್ಷಗಳಿಂದ ನಡೆಯುತ್ತಿರುವ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸುತ್ತಿದೆ. ಎಷ್ಟೇ ಸರ್ಕಸ್ ಮಾಡಿದರೂ ಪಕ್ಷ ಅಧಿಕಾರಕ್ಕೆ ಬರುವುದಿರಲಿ, ಬಹುಮತದ ಸನಿಹವೂ ಸುಳಿಯಲಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ಪಕ್ಷದ ಕಚೇರಿಯಲ್ಲಿನ ವಾಸ್ತು ದೋಷ!
2003ರಲ್ಲಿ ನಿರ್ಮಾಣವಾದ ಕಾಂಗ್ರೆಸ್‌ನ ರಾಜ್ಯ ಕೇಂದ್ರ ಕಚೇರಿ ‘ಇಂದಿರಾ ಭವನ’ವನ್ನು ಇಡಿಯಾಗಿ ಗಮನಿಸಿದ ವಾಸ್ತುಶಾಸ್ತ್ರಜ್ಞರೊಬ್ಬರು, ‘ಕಟ್ಟಡದ 3ನೇ ಮಹಡಿಯಲ್ಲಿನ ಎಲ್ಲ ಶೌಚಾಲಯಗಳು ಪೂರ್ವಕ್ಕೆ ಅಭಿಮುಖವಾಗಿವೆ. ಇದು ವಾಸ್ತುದೋಷವಾಗಿದ್ದು, ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಇದುವೇ ಕಾರಣ,’ ಎಂದಿದ್ದಾರೆ. ವಾಸ್ತು ತಜ್ಞರ ಮಾತಿನಿಂದ ತೃಪ್ತರಾದ ಪಕ್ಷದ ವಕ್ತಾರ ಕೆ.ಕೆ.ಮಿಶ್ರಾ, ಪಕ್ಷದ ಸೋಲಿಗೆ ಅಸಲಿ ಕಾರಣ ಹುಡುಕುವ ಬದಲು ‘ಟಾಯ್ಲೆಟ್ ವಾಸ್ತು’ವನ್ನು ದೂಷಿಸುತ್ತಿದ್ದಾರೆ.