Advertisement

ಜಾತಕ ಕತೆಗಳು: ಸುಲಸಾ ಮತ್ತು ಸುತ್ತುಕ

07:10 PM Jan 25, 2020 | Team Udayavani |

ಬನಾರಸ್‌ನಲ್ಲಿ ಬ್ರಹ್ಮದತ್ತನು ರಾಜ್ಯಭಾರ ಮಾಡುತ್ತಿದ್ದಾಗ, ಸುಲಸಾ ಎಂಬ ಸುಂದರವಾದ ವೇಶ್ಯೆಯೊಬ್ಬಳು ಇದ್ದಳು. ಆಕೆಯೊಡನೆ ಒಂದು ದಿನ ಇರಬೇಕಾದರೆ ಸಾವಿರ ವರಹಗಳನ್ನು ಆಕೆಗೆ ನೀಡಬೇಕಾಗಿತ್ತು. ಆದ್ದರಿಂದ ಬಹಳ ವೈಭವದ ಜೀವನವನ್ನು ಅವಳು ನಡೆಸುತ್ತಿದ್ದಳು.

Advertisement

ಹೀಗಿರಲು ಒಂದು ದಿನ ಆ ರಾಜ್ಯಕ್ಕೆ ಸುತ್ತುಕ ಎಂಬ ಕಳ್ಳನೊಬ್ಬ ಬಂದನು. ಬಹಳ ಬಲಿಷ್ಟನಾದ ಅವನು ಕಳ್ಳತನದಲ್ಲಿ ಭಾರಿ ನಿಪುಣನಾಗಿದ್ದ. ಆದರೆ, ಚುರುಕುಮತಿಯ ರಾಜಭಟರು ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಸೆರೆಗೆ ಸಿಕ್ಕ ಸುತ್ತುಕನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಆತನನ್ನು ರಾಜಬೀದಿಯಲ್ಲಿ ಎಲ್ಲರಿಗೂ ಕಾಣಿಸುವ ಹಾಗೆ ಕರೆದೊಯ್ಯುತ್ತಿದ್ದರು. ಆತನನ್ನು ಸೆರೆಹಿಡಿದಿರುವ ವಿಚಾರ ಊರಿನವರಿಗೆಲ್ಲ ಗೊತ್ತಾಗಿ ಅವನನ್ನು ನೋಡಲು ಬೀದಿಯ ಎರಡೂ ಕಡೆಗಳಲ್ಲಿ ಜನರು ನೆರೆದಿದ್ದರು. ಈ ಸುದ್ದಿಯು ಸುಲಸಾಳಿಗೂ ಗೊತ್ತಾಗಿ, ಆಕೆಯು ಕಿಟಕಿಯ ಪರದೆಯನ್ನು ಸರಿಸಿ ಕುತೂಹಲದಿಂದ ಸುತ್ತುಕನನ್ನು ನೋಡಿದಳು. ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ಮುಂದಕ್ಕೆ ಸಾಗುತ್ತಿದ್ದ ಸುತ್ತುಕನನ್ನು ನೋಡಿ ಸುಲಸಾಳಿಗೆ ಕರುಣೆ ಉಕ್ಕಿ ಬಂತು. ಮಾತ್ರವಲ್ಲ, ಆತನ ಬಗ್ಗೆ ಪ್ರೀತಿಯೂ ಹುಟ್ಟಿತು. ಅವಳು ಮನೆಯಿಂದ ಸಖೀಯರೊಡನೆ ಹೊರಬಂದು, ರಾಜಭಟರನ್ನು ಉದ್ದೇಶಿಸಿ ಮಾತನಾಡಿದಳು. “”ಹೇ ಭಟರೇ, ಈ ಕಳ್ಳನನ್ನು ಕರೆದೊಯ್ದು ಏನು ಮಾಡಬೇಕೆಂದಿರುವಿರಿ. ನನಗೋ ಈತನ ಮೇಲೆ ಪ್ರೇಮವುಂಟಾಗಿದೆ. ಈತನಿಗೆ ಜಾಮೀನು ರೂಪದಲ್ಲಿ ನೀಡಬೇಕಾದ ಮೊತ್ತವನ್ನು ನಾನೇ ನೀಡುವೆನು. ಈತನನ್ನು ನೀವು ಬಿಟ್ಟುಬಿಟ್ಟರೆ ನಾನು ಅವನನ್ನು ಮದುವೆಯಾಗಿ ಸಂಸಾರಸ್ಥೆಯಾಗಿ ಜೀವನ ಮಾಡುತ್ತೇನೆ. ಇದರಿಂದ ಇಬ್ಬರಿಗೂ ಒಳಿತಾಗುವುದು ಅಲ್ಲವೇ?” ಎಂದು ಹೇಳಿದಳು.

ರಾಜಭಟರು ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು. ವೇಶ್ಯೆಯೊಬ್ಬಳು ಸಂಸಾರಸ್ಥೆಯಾಗುವುದಾದರೆ, ಕಳ್ಳನೊಬ್ಬ ತನ್ನ ಕೆಟ್ಟ ಕೆಲಸವನ್ನು ಬಿಟ್ಟುಬಿಡುವುದಾದರೆ ಈತನನ್ನು ಸೆರೆಯಿಂದ ಬಿಟ್ಟುಬಿಡುವುದು ಒಳ್ಳೆಯದು ಎಂದು ಭಾವಿಸಿದರು.

ಸುಲಸಾಳು ಹಣವನ್ನು ಪಾವತಿಸಿ ಸುತ್ತುಕನನ್ನು ಬಿಡಿಸಿಕೊಂಡಳು. ಅಲ್ಲದೇ ಆತನನ್ನು ಮದುವೆಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಳು. ಹೀಗೆ ನಾಲ್ಕಾರು ತಿಂಗಳು ಕಳೆದ ಬಳಿಕ, ಸುತ್ತುಕನಿಗೆ ಈ ಸಂಸಾರ ಜೀವನ ಬಹಳ ಬೇಸರ ಮೂಡಿಸಿತು. ಎಲ್ಲೆಂದರಲ್ಲಿ ಸುತ್ತಾಡುತ್ತ, ಕಂಡದ್ದನ್ನು ಕಳ್ಳತನ ಮಾಡುತ್ತಾ ಜೀವನ ಮಾಡುತ್ತಿದ್ದ ಆತನಿಗೆ ಹೀಗೆ ಮನೆಯೊಳಗೆ ಇದ್ದುಕೊಂಡು ಸಂಸಾರ ನಡೆಸುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆತನೊಂದು ಉಪಾಯ ಮಾಡುತ್ತಾನೆ. ಈ ಹೆಂಡತಿಯ ಬಳಿ ಇರುವ ಅಪಾರ ಬಂಗಾರವನ್ನು ಅಪಹರಿಸಿ ಎಲ್ಲಾದರೂ ಓಡಿಹೋಗಬೇಕು ಎಂದು ಚಿಂತಿಸುತ್ತಾನೆ. ಹೀಗೆ ಚಿಂತಿಸಿದ ಬಳಿಕ ಅವನಿಗೆ ಒಂದು ಉಪಾಯ ಹೊಳೆಯಿತು. “”ನಾನು ಕಳ್ಳನಾಗಿದ್ದಾಗ ಬೆಟ್ಟದ ಮೇಲಿನ ದೇವರಿಗೆ ಹರಕೆ ಹೊತ್ತಿದ್ದೇನೆ. ನೀನು ಸರ್ವಾಲಂಕಾರ ಮಾಡಿಕೊಂಡು ನನ್ನೊಡನೆ ಬಾ. ಅಲ್ಲಿ ಪೂಜೆ ಸಲ್ಲಿಸಿ ಬರೋಣ” ಎಂದು ಅವನು ಹೆಂಡತಿಯ ಬಳಿ ಹೇಳುತ್ತಾನೆ. ಗಂಡನ ದೈವಭಕ್ತಿಯಿಂದ ಪುಳಕಿತಳಾದ ಸುಲಸಾ, ಎಲ್ಲಾ ಚಿನ್ನದ ಆಭರಣ ಹಾಕಿಕೊಂಡು ಅವನೊಡನೆ ಬೆಟ್ಟವೇರಿದಳು. ಬೆಟ್ಟದ ಮೇಲೆ ತಲುಪಿದ ಕೂಡಲೇ ಸುತ್ತುಕ ತನ್ನ ಪಿತೂರಿಯ ಬಗ್ಗೆ ಹೇಳಿದನು. “”ನಿನ್ನನ್ನು ಕೊಂದು, ಆಭರಣ ದೋಚಿ ಓಡಿ ಹೋಗುವುದೇ ನನ್ನ ಗುರಿ. ಮೊದಲು ನಿನ್ನ ಈ ಎಲ್ಲ ಆಭರಣ ಕಳಚಿ ಒಂದು ಬಟ್ಟೆಯಲ್ಲಿ ಕಟ್ಟಿಡು” ಎಂದು ದಬಾಯಿಸಿದ. ಸುಲಸಾಳಿಗೆ ಬಹಳ ಹೆದರಿಕೆ ಆಯಿತು. ಅವಳು ಪರಿಪರಿಯಾಗಿ ಸುತ್ತುಕನನ್ನು ಬೇಡಿಕೊಂಡು ತನ್ನನ್ನು ಕೊಲ್ಲಬೇಡ ಎಂದು ಮನವಿ ಮಾಡಿದಳು. ಆದರೆ, ಸುತ್ತುಕನ ಮನಸ್ಸು ಕರಗಲಿಲ್ಲ. ಕೊನೆಯದಾಗಿ, ಸುಲಸಾ ಹೇಳಿದಳು. “”ನೀನು ಕೊಲ್ಲುವುದಾದರೆ ಸರಿ. ಅದಕ್ಕೆ ಮುನ್ನ ನಿನಗೆ ನಾಲ್ಕೂ ದಿಕ್ಕಿನಿಂದ ನಮಸ್ಕಾರ ಮಾಡಲು ಅವಕಾಶ ಮಾಡಿಕೊಡು”.

ಸುಲಸಾಳ ಭಕ್ತಿಯನ್ನು ಕಂಡು ಸುತ್ತುಕನಿಗೆ ನಗುಬಂತು. ಅವಳ ಕೋರಿಕೆಗೆ ಒಪ್ಪಿಗೆ ನೀಡಿದ. ಸುಲಸಾಳು ಮೊದಲು ಮುಂಭಾಗದಲ್ಲಿ ಮತ್ತೆ ಎಡ ಮತ್ತು ಬಲಭಾಗದಲ್ಲಿ ನಮಸ್ಕಾರ ಮಾಡಿದಳು. ಬಳಿಕ ಅವನ ಹಿಂಭಾಗಕ್ಕೆ ಬಂದು ನಮಸ್ಕಾರ ಮಾಡಲೆಂದು ಬಗ್ಗಿದಳು. ಆದರೆ, ನಮಸ್ಕಾರ ಮಾಡುವ ಬದಲು ಅವನ ಕತ್ತನ್ನು ಹಿಡಿದು ಬಲವಾಗಿ ನೂಕಿ ಬಿಟ್ಟಳು. ಸುತ್ತುಕನು ಪ್ರಪಾತಕ್ಕೆ ಬಿದ್ದುಬಿಟ್ಟ. ಹೀಗೆ ಕಳ್ಳನಿಗೆ ಒಳ್ಳೆಯ ಬಾಳುವೆ ಮಾಡುವ ಅವಕಾಶ ಕೊಟ್ಟು, ಬಳಿಕ ಅವನು ಸರಿ ದಾರಿಗೆ ಬಾರದೇ ಇದ್ದಾಗ, ಅವನನ್ನು ಕೊಂದ ಸುಲಸಾಳ ಬಗ್ಗೆ ಊರಿನ ಜನರಿಗೆ ಗೌರವ ಮೂಡಿತು.

Advertisement

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next