ಹುಬ್ಬಳ್ಳಿ: ರಾಜ್ಯದಲ್ಲಿ ಸಿದ್ದರಾಮಯ್ಯ ಕೇಂದ್ರೀಕೃತ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಹೊರಟ್ಟಿ ಹೇಳಿಕೆ ಇದಕ್ಕೆ ಇಂಬು ಕೊಡುವಂತಿದೆ. ಇದರಿಂದ ಮೈತ್ರಿ ಸರ್ಕಾರದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಹೇಳಿಕೆ ನೀಡಿದರೆ ವಿಧಾನಸಭೆ ವಿಸರ್ಜನೆಯಾಗುವುದಿಲ್ಲ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೆ ಏನಾಗುತ್ತದೆ?. ಒಂದು ವೇಳೆ ಕಾಂಗ್ರೆಸ್‌ನವರು ಬೆಂಬಲ ವಾಪಸ್ ಪಡೆದರೆ ಆಗುವ ಸಾಂವಿಧಾನಿಕ ಬಿಕ್ಕಟ್ಟನ್ನು ನೋಡಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳುತ್ತಾರೆ.
ಯಾರೋ ಹೇಳಿಕೆ ನೀಡಿದಾಕ್ಷಣ ಚುನಾವಣೆ ಅಥವಾ ವಿಧಾನಸಭೆ ವಿಸರ್ಜನೆಯಾಗುವುದಿಲ್ಲ. ಮುಂದಿನ ರಾಜಕೀಯ ಬದಲಾವಣೆಯನ್ನು ನೋಡಿಕೊಂಡು ಬಿಜೆಪಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ರಚನೆಗೆ ಅವಕಾಶ ಇಲ್ಲ ಎಂದಾಗ ಮಧ್ಯಂತರ ಚುನಾವಣೆ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ ಎಂದರು.
ಮೇ 23ರ ನಂತರ ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರನ್ನು ಎಲ್ಲರೂ ಸೇರಿ ಕೆಳಗಿಳಿಸುವ ಕೆಲಸ ಮಾಡುತ್ತಿದ್ದಾರೆ. ಹೊರಟ್ಟಿ ಹೇಳಿದಂತೆ ಮೇ 23ರ ನಂತರ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್‌ನವರೇ ಬೀಳಿಸಬೇಕು. ಇಲ್ಲ, ಕಾಂಗ್ರೆಸ್ ಸಹವಾಸ ಬೇಡವೆಂದು ಕುಮಾರಸ್ವಾಮಿ ರಾಜೀನಾಮೆ ನೀಡಬೇಕು.
ಒಟ್ಟಾರೆ ಮೈತ್ರಿ ಸರ್ಕಾರ ಬೀಳುವುದು ಖಚಿತ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ, ಲೋಕಸಭೆ ಚುನಾವಣೆವರೆಗಿನ ಮದುವೆಯಾಗಿತ್ತು. ಅವರು ನಿರೀಕ್ಷಿಸಿದಂತೆ ಫಲಿತಾಂಶ ಬರುವುದಿಲ್ಲ. ಸ್ವತ: ಕುಮಾರಸ್ವಾಮಿ ಅವರ ತಂದೆ ಹಾಗೂ ಮಗ ಸೋಲುವುದು ಖಚಿತ.
ಹೀಗಾಗಿ, ಲೋಕಸಭೆ ಚುನಾವಣೆ ನಂತರ ಯಾವಾಗ ಬೇಕಾದರೂ ಡೈವೋರ್ಸ್ ಆಗಬಹುದು. ಆದರೆ, ಬಿಜೆಪಿ ಸರ್ಕಾರ ರಚನೆ ಮಾಡುವ ಕುರಿತು ಜೆಡಿಎಸ್ ನೆರವು ಪಡೆಯುವುದಿಲ್ಲ. ಅವರಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂದು ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾವು ಯಾವ ಕಾರಣಕ್ಕೂ ಅವರ ಬಳಿ ಹೋಗುವುದಿಲ್ಲ ಎಂದರು.