ಹುಬ್ಬಳ್ಳಿ: ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿ 2006 ಏ. 1ರಿಂದ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ರದ್ದುಪಡಿಸಿ ಎಲ್ಲರಿಗೂ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರಿ ನೌಕರರು ಹಲವಾರು ಹೋರಾಟಗಳನ್ನು ಕೈಗೊಂಡಿದ್ದರು.ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ತಾವು ಹೋರಾಟಗಾರರನ್ನು ಭೇಟಿಯಾಗಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಭಾರತದ ಸಂವಿಧಾನ ಪರಿಚ್ಛೇದ 131ರನ್ವಯ ಪಿಂಚಣಿ ಸರ್ಕಾರಿ ನೌಕರರ ಮೂಲಭೂತ ಹಕ್ಕಾಗಿದೆ.
ನೌಕರರ ಹೋರಾಟಕ್ಕೆ ಮಣಿದ ಸರ್ಕಾರ ಸರ್ಕಾರಿ ಆದೇಶದಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿಯನ್ನು ಹಿಂದಿನ ಸರ್ಕಾರ ರಚಿಸಿತ್ತು. ಈ ಸಮಿತಿ ಕಳೆದ ವರ್ಷ ಸಭೆ ನಡೆಸಿದ್ದನ್ನು ಬಿಟ್ಟರೆ ಮತ್ತಾವ ಪ್ರಗತಿ ಸಾಧಿಸಿಲ್ಲ ಎಂಬುವುದು ನೋವಿನ ಸಂಗತಿಯಾಗಿದೆ. ರಾಜ್ಯದಲ್ಲಿ ಒಟ್ಟು 7,41,048 ಸರ್ಕಾರಿ ನೌಕರರಿದ್ದು ಅವರಲ್ಲಿ 5,12,521 ಜನ ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದು 2,28,527 ನೌಕರರು ನೂತನ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಾ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿಲ್ಲ. ಅದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯವೆಂದು ಹೇಳಿದೆ. ಸಂವಿಧಾನದ ಆಶಯದಂತೆ ಹೊರಡಿಸಿರುವ ಸರ್ಕಾರಿ ಆದೇಶದನ್ವಯ ಅಧಿ ಕಾರಿಗಳ ಸಮಿತಿಯಿಂದಮೂರು ತಿಂಗಳೊಳಗಾಗಿ ವರದಿ ಪಡೆದು ಕೂಡಲೇ 2.28 ಲಕ್ಷ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಮಾ ಪರಿಹಾರ ಯೋಜನೆ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಈ ಹಿಂದೆ ಪತ್ರದ ಮೂಲಕ ಹಾಗೂ ಖುದ್ದಾಗಿ ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ನೌಕರರಿಗೆ ವಿಮೆ ಹಾಗೂ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಇದೀಗ ಆದೇಶ ಮಾಡಿದ್ದು, ಕೃತಜ್ಞತೆ ಸಲ್ಲಿಸುತ್ತೇನೆ.
–ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ