Advertisement

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಚಿಂತನ-ಮಂಥನ ಅಗತ್ಯ

07:11 PM Apr 11, 2021 | Team Udayavani |

ರಾಣಿಬೆನ್ನೂರ : ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳನ್ನು ಅರಿತುಕೊಂಡು ಯೋಜನೆ ಜಾರಿ ಮಾಡುವ ಬಗ್ಗೆ ಚಿಂತನ-ಮಂಥನ ನಡೆಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರ ಹೊರವಲಯದ ಆರ್‌ಟಿಇಎಸ್‌ ಮಹಾವಿದ್ಯಾಲಯದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ-2020′ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ನೀತಿಯ ವರದಿಗಳು ಸಂಪೂರ್ಣವಾಗಿ ಜಾರಿಯಾಗಿವೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ವರದಿಗಳು ಕೇವಲ ಕಾಗದದ ಮೇಲೆ ಉಳಿದುಕೊಂಡಿವೆ ಎಂದರು. ಸರಕಾರಗಳು ಬದಲಾದಂತೆ ಅವುಗಳ ಶಿಕ್ಷಣ ನೀತಿಗಳು ಬದಲಾದವೇ ಹೊರತು ಯೋಜನೆಗಳು ಸಂಪೂರ್ಣವಾಗಿ ಜಾರಿಯಾಗಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚಿಂತನೆ ನಡೆಸಬೇಕು. ಈ ಹಿಂದೆ ಗೋವಿಂದಪ್ಪ ವರದಿ, ರಾಜಾರಾಮಣ್ಣ ವರದಿ ಸೇರಿದಂತೆ ಅನೇಕ ವರದಿಗಳು ಬಂದಿವೆ. ಆದರೆ ಯಾವುದೇ ವರದಿ ಶೇ.100 ರಷ್ಟು ಸಂಪೂರ್ಣ ಜಾರಿಯಾಗಿಲ್ಲ ಎಂದು ಹೇಳಿದರು.

1957ರಿಂದ ಸುಮಾರು 30 ವರ್ಷಗಳ ಕಾಲ ಉತ್ತಮ ಶಿಕ್ಷಣ ವ್ಯವಸ್ಥೆಯಿತ್ತು. ಅಂದಿನ ಶಿಕ್ಷಣದಲ್ಲಿ ಸಂಗೀತ, ಕಲೆ, ಹೊಲಿಗೆ ತರಬೇತಿ ಸೇರಿದಂತೆ ಅನೇಕ ವಿಷಯಗಳನ್ನು ಮಕ್ಕಳು ಕಲಿಸುತ್ತಿದ್ದರು. ಇದರಿಂದ ನೌಕರಿ ಮೇಲೆ ಅವಲಂಬಿತವಾಗಿರದೇ ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದರು. ಆದರೆ, ಇಂದಿನ ಶಿಕ್ಷಣ ಹಾಗಲ್ಲ. ಕೇವಲ ನೌಕರಿ ಶಿಕ್ಷಣವಾಗಿ ಮಾರ್ಪಟ್ಟಿದೆ. ಇಂದು ಎಲ್ಲರಿಗೂ ನೌಕರಿ ನೀಡಲು ಸಾಧ್ಯವಾಗುತ್ತಿಲ್ಲ. ಇಂದು ಅನೇಕ ಎಂಜನಿಯರಿಂಗ್‌ ಕಾಲೇಜ್‌ಗಳಲ್ಲಿ ಸೀಟ್‌ಗಳು ಖಾಲಿ ಉಳಿದುಕೊಂಡಿವೆ ಎಂದರು. ಈ ಹಿಂದಿನ ಶಿಕ್ಷಣ ಪದ್ಧತಿಯಲ್ಲಿನ ಶೇ.45 ರಷ್ಟು ಅಂಶಗಳನ್ನು ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಈ ಶಿಕ್ಷಣ ನೀತಿಯಲ್ಲಿ ವಿಪುಲ ಅವಕಾಶಗಳಿವೆ ಎಂಬಂತೆ ಬಿಂಬಿಸಲಾಗುತ್ತಿದ್ದು, ಅದರಲ್ಲಿ ಅಂತಹ ಅಂಶಗಳು ಕಂಡುಬರುತ್ತಿಲ್ಲ. ತಾವು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ಶಿಕ್ಷಕರ ಸದನ ಎಂದು ಶಿಕ್ಷಕರಿಗಾಗಿ ಯೋಜನೆ ಜಾರಿ ಮಾಡಿದ್ದೇವೆ. ಆದರೆ, ಈ ಯೋಜನೆ ಸಫಲವಾಗಲಿಲ್ಲ ಎಂದು ಹೊರಟ್ಟಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಿಡಿಪಿಐ ಅಂದಾನೆಪ್ಪ ವಡಿಗೇರ, ಕ್ಷೇತ್ರ ಶಿಕ್ಷಣಾಧಿ ಕಾರಿ ಗುರುಪ್ರಸಾದ, ಡಯಟ್‌ ಪ್ರಾಚಾರ್ಯ ಬಸವರಾಜಪ್ಪ, ಆರ್‌ಟಿಇಎಸ್‌ ಕಾಲೇಜಿನ ಅಧ್ಯಕ್ಷ ಸುಭಾಸ ಸಾವುಕಾರ, ಎನ್‌.ಬಿ. ಅಂಬಿಗೇರ, ಎನ್‌.ಶ್ರೀಧರ, ರವಿ ಹುಚಗೊಂಡರ, ಎಸ್‌.ವಿ. ಸೀಮಿಕೇರಿ, ಎಚ್‌.ಪಿ.ಬಣಕಾರ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next