Advertisement

ಜೆಡಿಎಸ್‌ ಸಭೆಗೆ ಹೊರಟ್ಟಿ, ಕಾಂತರಾಜ್‌ ಗೈರು

11:24 PM Oct 18, 2019 | Lakshmi GovindaRaju |

ಬೆಂಗಳೂರು: ಪದವೀಧರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶುಕ್ರವಾರ ಕರೆದಿದ್ದ ಸಭೆಗೆ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ಕಾಂತರಾಜ್‌, ಸಿ.ಆರ್‌.ಮನೋಹರ್‌ ಗೈರು ಹಾಜರಾಗಿದ್ದರು. ಪಕ್ಷದ ಕಚೇರಿಯಲ್ಲಿ ನಿಗದಿಯಾಗಿದ್ದ ಸಭೆಗೆ ಆಗಮಿಸು ವಂತೆ ಎಲ್ಲರಿಗೂ ದೇವೇಗೌಡರು ಖುದ್ದು ದೂರವಾಣಿ ಮೂಲಕ ಮನವಿ ಮಾಡಿದ್ದರು.

Advertisement

ಹೊರಟ್ಟಿ ಅವರು ಸಭೆಗೆ ಬರಲು ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆಂದು ದೇವೇಗೌಡರು ಹೇಳಿದರು. ಆದರೆ, ಅಸಮಾಧಾನದಿಂದಲೇ ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ. ಮೈಸೂರು ಪ್ರವಾಸದಲ್ಲಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿಯವರ ಅನುಪಸ್ಥಿತಿಯಲ್ಲಿ ದೇವೇಗೌಡರೇ ಹಾಜರಿದ್ದು, ಮುಖಂಡರ ಜತೆ ಚರ್ಚಿಸಿದರು.

ಶಿಕ್ಷಕರ ಕ್ಷೇತ್ರಕ್ಕೆ ರಂಗನಾಥ್‌ ಆಕಾಂಕ್ಷಿ: ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಚ್‌.ಡಿ.ದೇವೇಗೌಡರು, ಎರಡು ಪದವೀಧರ ಕ್ಷೇತ್ರ, ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಚರ್ಚೆ ಆಗಿದೆ. ಪಕ್ಷದ ಶಾಸಕರು, ಪರಿಷತ್‌ ಸದಸ್ಯರ ಜತೆ ಚರ್ಚಿಸಿದ್ದೇನೆ. ಶಿಕ್ಷಕರ ಕ್ಷೇತ್ರಕ್ಕೆ ರಂಗನಾಥ್‌ ಆಕಾಂಕ್ಷಿಯಾಗಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚೌಡರೆಡ್ಡಿ ತೂಪಲ್ಲಿ, ರಮೇಶ್‌ ಬಾಬು, ಶಿವಶಂಕರ್‌ ಆಕಾಂಕ್ಷಿಯಾಗಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಬಗ್ಗೆ ಚರ್ಚೆಯಾಗಿಲ್ಲ. ಇದು ಪ್ರಥಮ ಹಂತದ ಸಭೆಯಷ್ಟೇ. ಅಂತಿಮ ತೀರ್ಮಾನ ಕೈಗೊಂಡಿಲ್ಲ. ವಾರದಲ್ಲಿ ಮತ್ತೂಂದು ಸಭೆ ಕರೆದು ನಿರ್ಧರಿಸುತ್ತೇವೆ ಎಂದು ಹೇಳಿದರು. ಎಚ್‌.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷರಾದ ಎಚ್‌.ಕೆ.ಕುಮಾರಸ್ವಾಮಿ, ಮುಖಂಡರಾದ ಬಂಡೆಪ್ಪ ಕಾಶೆಂಪೂರ್‌, ಕೃಷ್ಣಾರೆಡ್ಡಿ ಅವರು ಪ್ರವಾಸದಲ್ಲಿರುವುದರಿಂದ ಸಭೆಗೆ ಬಂದಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಹೊರಟ್ಟಿಯವರು ಸಭೆಗೆ ಬರಲು ಆಗುವುದಿಲ್ಲ ಎಂದು ನನಗೆ ತಿಳಿಸಿದ್ದರು ಎಂದರು.

ನಾಯಕತ್ವ ಬದಲಾವಣೆ ಕೇಳಿಲ್ಲ: ಸಭೆಗೆ ಗೈರು ಹಾಜರಾದ ಕುರಿತು “ಉದಯವಾಣಿ’ ಜತೆ ಮಾನಾಡಿದ ಬಸವರಾಜ ಹೊರಟ್ಟಿ, “ನನಗೆ ಕ್ಷೇತ್ರದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ಇತ್ತು. ಹಾಗಾಗಿ ಬಂದಿಲ್ಲ. ಪಕ್ಷದಲ್ಲಿ ಕೆಲವು ಸಮಸ್ಯೆ ಇರು ವುದು ಹೌದು. ನಾವು ಕುಮಾರಸ್ವಾಮಿಯವರ ನಾಯ ಕತ್ವದ ಬದಲಾವಣೆ ಕೇಳಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಎಂದು ಹೇಳಿದ್ದೇವೆ’ ಎಂದು ಹೇಳಿದರು.

Advertisement

ಮಹಾರಾಷ್ಟ್ರಕ್ಕೆ ಎಲ್ಲಿಂದ ನೀರು ಕೊಡ್ತಾರೆ: ಎಚ್‌ಡಿಡಿ ಪ್ರಶ್ನೆ
ಬೆಂಗಳೂರು: ಮಹಾರಾಷ್ಟ್ರಕ್ಕೆ ಯಡಿಯೂರಪ್ಪ ಎಲ್ಲಿಂದ ನೀರು ಕೊಡ್ತಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರಶ್ನಿಸಿ ದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೃಷ್ಣಾದಿಂದ ನಮಗೆ ಹಂಚಿಕೆಯಾಗಿರುವ ನೀರನ್ನು ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ಬಿಟ್ಟುಕೊಡ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಗೆಲ್ಲಲು ಯಡಿಯೂರಪ್ಪ ಅವರು ಈ ರೀತಿ ಹೇಳಿದ್ದಾರೆ. ಮತಕ್ಕಾಗಿ ಈ ರೀತಿ ಹೇಳಿಕೆ ಸಲ್ಲ. ನಮ್ಮ ರಾಜ್ಯದ ಜನರು ಅಧಿಕಾರ ಕೊಟ್ಟಿರೋದು ರಾಜ್ಯದ ಜನರ ಹಿತ ಕಾಯಲು. ಹೀಗಾಗಿ, ಯಡಿಯೂರಪ್ಪ ಜನರ ಹಿತ ಕಾಯುವ ಕೆಲಸ ಮಾಡಲಿ ಎಂದು ಹೇಳಿದರು. ಯಾವುದೇ ಕಾರಣಕ್ಕೂ ರಾಜ್ಯದ ಪಾಲಿನ ನೀರನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಮಹದಾಯಿ ನೀರಿನ ಬಗ್ಗೆ ಗೊಂದಲ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಯಡಿಯೂರಪ್ಪ ಯಾವ ಅರ್ಥದಲ್ಲಿ ನೀರು ಕೊಡುವುದಾಗಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ನಮ್ಮ ಶಾಸಕರು, ವಿಧಾನಪರಿಷತ್‌ ಸದಸ್ಯರು ಕುಮಾರಸ್ವಾಮಿಯವರ ನಾಯಕತ್ವ ಪ್ರಶ್ನಿಸಿಲ್ಲ. ಹದಿನಾಲ್ಕು ತಿಂಗಳು ಸರ್ಕಾರ ಇದ್ದಾಗ ಕೆಲವು ಸದಸ್ಯರ ಸಮಸ್ಯೆ ಸರಿಪಡಿಸೋಕೆ ಆಗಿಲ್ಲ. ಅದರ ಬಗ್ಗೆ ಅಸಮಾಧಾನ ಇರೋರ ಜತೆ ಮಾತನಾಡಿದ್ದೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ನಾನು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರುವುದಿಲ್ಲ. ನಾನು, ಕೆ.ಸಿ.ರಾಮಮೂರ್ತಿ ಸಂಬಂಧಿಕರು. ಅವರು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದಾಕ್ಷಣ ನಾನು ನೀಡುತ್ತೇನೆಂದು ವದಂತಿ ಹಬ್ಬಿಸಲಾಗಿದೆ.
-ಕುಪೇಂದ್ರರೆಡ್ಡಿ, ಜೆಡಿಎಸ್‌ ರಾಜ್ಯಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next