ಕೋಲ್ಕತಾ: “ಮುಂದಿನ ವಿಮಾನದಲ್ಲೇ ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಕ್ಕೆ ಕಳಹಿಸಿ…’ -ಹೀಗೊಂದು ಸಲಹೆ ಮಾಡಿದ್ದಾರೆ, ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ.
“ಆಸ್ಟ್ರೇಲಿಯದಲ್ಲಿ ನಡೆಯುವ ಅತೀ ಮಹತ್ವದ ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಗೆ ಪೇಸ್ ಬೌಲರ್ ಮೊಹಮ್ಮದ್ ಶಮಿ ಅವರ ಅಗತ್ಯ ಬಹಳಷ್ಟಿದೆ. ಅವರು ಈಗಾಗಲೇ ರಣಜಿ ಪಂದ್ಯದಲ್ಲಿ ಫಿಟ್ನೆಸ್ ಹಾಗೂ ಬೌಲಿಂಗ್ ಫಾರ್ಮ್ ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಕ್ಕೆ ಹೋಗಿ ಭಾರತ ತಂಡವನ್ನು ಕೂಡಿಕೊಳ್ಳಲೇಬೇಕು’ ಎಂದು ಸೌರವ್ ಗಂಗೂಲಿ ತಾಕೀತು ಮಾಡಿದರು.
“ಶಮಿ ಆಸ್ಟ್ರೇಲಿಯಕ್ಕೆ ಹೋಗಲೇಬೇಕು. ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವ ಅಗತ್ಯವಿಲ್ಲ. ಮುಂದಿನ ವಿಮಾನದಲ್ಲೇ ಆಸ್ಟ್ರೇಲಿಯಕ್ಕೆ ತೆರಳಿ ನೆಟ್ಸ್ನಲ್ಲಿ ಬೌಲಿಂಗ್ ನಡೆಸಲಿ. ಪರ್ತ್ ಟೆಸ್ಟ್ನಲ್ಲಿ ಆಡದೇ ಹೋದರೂ ಬೌಲಿಂಗ್ ನಡೆಸಿ ಸರಣಿಗೆ ಅಣಿಯಾಗಲಿ’ ಎಂದು ಸೌರವ್ ಗಂಗೂಲಿ “ರೇವ್ನ್ಪೋರ್ಟ್ಸ್’ ಯೂ ಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
“ಭಾರತದ ವೇಗದ ಬೌಲಿಂಗ್ ವಿಭಾಗ ಶಮಿ ಇಲ್ಲದೆ ದುರ್ಬಲವಾಗಿ ಗೋಚರಿಸುತ್ತಿದೆ. ಆದರೆ ವೇಗಿಗಳು ಗಾಯಾಳಾಗುವುದು ಸಹಜ. ಶಮಿ ಈಗ ಚೇತರಿಸಿಕೊಂಡಿದ್ದಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರು ಆಸ್ಟ್ರೇಲಿಯಕ್ಕೆ ವಿಮಾನ ಏರಬೇಕು’ ಎಂದರು.
ಮೊಹಮ್ಮದ್ ಶಮಿ ಆಸ್ಟ್ರೇಲಿಯದಲ್ಲಿ ಅಮೋಘ ಟೆಸ್ಟ್ ದಾಖಲೆ ಹೊಂದಿದ್ದಾರೆ. ಆಡಿದ 8 ಟೆಸ್ಟ್ಗಳಲ್ಲಿ 31 ವಿಕೆಟ್ ಉರುಳಿಸಿದ ಸಾಧನೆ ಅವರದಾಗಿದೆ. 56 ರನ್ನಿಗೆ 6 ವಿಕೆಟ್ ಉರುಳಿಸಿದ್ದು ಅತ್ಯುತ್ತಮ ಬೌಲಿಂಗ್ ಆಗಿದೆ.
ಸರಾಸರಿ 32.16. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಗಾಗಿ ಸೋಮವಾರ ಬಂಗಾಲ ತಂಡ ಪ್ರಕಟಗೊಳ್ಳಲಿದೆ. ಶಮಿ ಆಯ್ಕೆಯಾದರೆ ಈ ದೇಶಿ ಸರಣಿಯಲ್ಲಿ ಆಡಲಿದ್ದಾರೆ. ಇಲ್ಲವಾದರೆ ಟೀಮ್ ಇಂಡಿಯಾಕ್ಕೆ ಸೇರ್ಪಡೆಗೊಳ್ಳಬಹುದೆಂದು ನಿರೀಕ್ಷಿಸಬಹುದು.