ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಚುನಾವಣಾ ಆಯೋಗ “ಅನರ್ಹ ಶಾಸಕರು ಸ್ಪರ್ಧಿಸಲು ತಮ್ಮ ಆಕ್ಷೇಪವಿಲ್ಲ’ ಎಂದು ಹೇಳಿರುವುದು, ಅನರ್ಹ ಶಾಸಕರಿಗೆ ಅಲ್ಪ ಮಟ್ಟಿನ ಸಮಾಧಾನ ಮೂಡಿಸುವಂತೆ ಮಾಡಿದೆ. ಹೀಗಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಅನರ್ಹತೆ ಪ್ರಕರಣ ವಿಚಾರಣೆಗೆ ಬರುವ ಮೊದಲೇ ಚುನಾವಣಾ ಆಯೋಗ ಮಹಾ ರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಚುನಾವಣೆಯ ಜತೆಗೆ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಘೋಷಣೆ ಮಾಡಿದ್ದರಿಂದ ಅನರ್ಹ ಶಾಸಕರು ಚುನಾವಣೆ ಸ್ಪರ್ಧೆಗೆ ಅವಕಾಶ ದೊರೆಯುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದರು.
ಈ ಹಿನ್ನೆಲೆಯಲ್ಲಿಯೇ ಚುನಾವಣೆ ಘೋಷಣೆ ಯಾದ ತಕ್ಷಣವೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ದೊರೆಯು ಋವಂತೆ ಮಾಡಬೇಕೆಂದು ಒತ್ತಡ ಹೇರಿದ್ದರು, ಅದೇ ಕಾರಣಕ್ಕೆ ಯಡಿಯೂರಪ್ಪ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತನಾ ಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗ ತಮ್ಮ ಸ್ಪರ್ಧೆಗೆ ಆಕ್ಷೇಪವಿಲ್ಲ ಎಂದಿರುವುದು ಅನರ್ಹರಿಗೆ ತಾವೇ ಸ್ಪರ್ಧಿಸಲು ಅವಕಾಶ ದೊರೆಯುವ ಆಸೆ ಮೂಡಿಸಿದೆ.
ಪ್ರಮುಖವಾಗಿ ತಮ್ಮ ಪ್ರಕರಣ ಇತ್ಯರ್ಥವಾಗುವವರೆಗೂ ಉಪ ಚುನಾವಣೆಯನ್ನು ಮುಂದೂಡುವಂತೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದು, ಈ ವಿಷಯದಲ್ಲಿ ದೇಶದ ಚುನಾವಣಾ ಇತಿಹಾಸವನ್ನು ಗಮನಿಸಿದರೆ, ಸುಪ್ರೀಂ ಕೋರ್ಟ್‌ನಿಂದ ತೀರ್ಪು ತಮ್ಮ ಪರ ಬರುವ ವಿಶ್ವಾಸ ಕಡಿಮೆ ಎನ್ನುವ ಭಾವನೆಯನ್ನು ಅನರ್ಹರು ಹೊಂದಿದ್ದಾರೆ. ಆದರೆ, ಚುನಾವಣಾ ಆಯೋಗದ ಹೇಳಿಕೆ ಹಾಗೂ ಈ ಹಿಂದೆ ತಮಿಳುನಾಡಿನಲ್ಲಿಯೂ ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿರುವ ಉದಾಹರಣೆ ಇರುವುದರಿಂದ ಅನರ್ಹರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಮೂಲಗಳ ಪ್ರಕಾರ ಅನರ್ಹರು ತಮ್ಮ ಪ್ರಕರಣಕ್ಕೆ ಸೆ.30 ರೊಳಗೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಆದೇಶ ನೀಡದೆ ಮುಂದೂಡಿದರೆ, ಸೆ.30ರೊಳಗೆ ನಾಮಪತ್ರ ಸಲ್ಲಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಅದರ ಜೊತೆಗೆ ತಾವು ಸೂಚಿಸುವ ಪರ್ಯಾಯ ಅಭ್ಯರ್ಥಿಗಳಿಂದಲೂ ನಾಮಪತ್ರ ಸಲ್ಲಿಸುವ ಬಗ್ಗೆ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಬಿಜೆಪಿ ನಾಯಕರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಆಗುವ ಬೆಳವಣಿಗೆಯ ನಂತರ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ಮೊದಲ ದಿನ 14 ನಾಮಪತ್ರ
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರ (ಸೆ.23) ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ 14 ನಾಮಪತ್ರಗಳು ಸಲ್ಲಿಕೆಯಾಗಿವೆ. ಅಥಣಿಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರಲ್ಲಿ ನಾಲ್ವರು, ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ 5 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ರಾಣಿಬೆನ್ನೂರು, ಕೆ.ಆರ್. ಪುರದಿಂದ ತಲಾ ಒಬ್ಬರು ಪಕ್ಷೇತರರು, ಹುಣಸೂರಿನಿಂದ ಇಬ್ಬರು ಪಕ್ಷೇತರರು, ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಪಕ್ಷದಿಂದ ಒಬ್ಬರು ನಾಮಪತ್ರ ಸಲ್ಲಿಸಿ ದ್ದಾರೆ. ಗೋಕಾಕ್, ಯಲ್ಲಾಪುರ, ಹಿರೇಕೆರೂರು, ವಿಜಯ ನಗರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸ ಕೋಟೆ ಹಾಗೂ ಕೆ.ಆರ್. ಪೇಟೆ ಕ್ಷೇತ್ರದಿಂದ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
* ಶಂಕರ ಪಾಗೋಜಿ