ಕೋವಿಡ್ ಸಾಂಕ್ರಾಮಿಕ ದೇಶವಾಸಿಗಳ ದೈಹಿಕಾರೋಗ್ಯಕ್ಕಷ್ಟೇ ಅಲ್ಲದೇ ದೇಶದ ಆರ್ಥಿಕತೆಗೂ ಬಹು ಆಯಾಮದಲ್ಲಿ ಮಾಡಿದ ದಾಳಿ ಅಷ್ಟಿಷ್ಟಲ್ಲ. ಅದರಲ್ಲೂ ಸಾಂಕ್ರಾಮಿಕ ತಡೆಗಾಗಿ ಲಾಕ್‌ಡೌನ್ ತಂದ ಮೇಲಂತೂ ದೇಶದ ಬಹುತೇಕ ವಲಯಗಳು ದಶಕಗಳಲ್ಲೇ ಕಾಣದಂಥ ಆರ್ಥಿಕ ಮುಗ್ಗಟ್ಟನ್ನು ಎದುರಿಸಿಬಿಟ್ಟವು. ಕಂಪೆನಿಗಳು ಉದ್ಯೋಗ ಕಡಿತ, ಸಂಬಳ ಕಡಿತದಂಥ ಅನಿವಾರ್ಯ ಹಾದಿಯ ಮೊರೆ
ಹೋಗಬೇಕಾಯಿತು. ಜನರ ಖರೀದಿ ಸಾಮರ್ಥ್ಯವೇ ಹಠಾತ್ತನೆ ಕುಗ್ಗಿಹೋಯಿತು.
ಆರ್ಥಿಕತೆ ಇನ್ನೆಂದು ಚೇತರಿಸಿಕೊಳ್ಳುತ್ತದೋ ಎಂಬ ದಿಗಿಲಲ್ಲಿದ್ದವರಿಗೆ ಈಗ ಆಶಾಕಿರಣ ಗೋಚರಿಸಲಾರಂಭಿಸಿದೆ. ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಅನಂತರದಿಂದ ಮಾರುಕಟ್ಟೆ ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವುದು ವೇದ್ಯವಾಗುತ್ತಿದೆ. ಆರ್ಥಿಕ ಪುನಃಶ್ಚೇತನಕ್ಕಾಗಿ ಕೇಂದ್ರ ಸರಕಾರವೂ ಹಲವು ರೀತಿಯ ಕ್ರಮ ಕೈಗೊಂಡಿದೆ. ಪುನಃಶ್ಚೇತನ ಪ್ಯಾಕೇಜ್‌ಗಳನ್ನು ಒದಗಿಸಿದೆ, ಜನರ ಕೈಯಲ್ಲಿ ಹಣ ಹರಿದಾಡಬೇಕು ಎಂಬ ದೃಷ್ಟಿಯಿಂದ ತನ್ನ ವ್ಯಾಪ್ತಿಯ ಸರಕಾರಿ ನೌಕರರಿಗೆ ಘೋಷಿಸಿದ್ದ ಎಲ್‌ಟಿಸಿ ಸೌಲಭ್ಯವನ್ನು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ ಎಲ್ಲ ಉದ್ಯೋಗಿಗಳಿಗೂ ವಿಸ್ತರಿಸಿ, ಎಲ್‌ಟಿಸಿ ಅಡಿಯಲ್ಲಿ ಪ್ರವಾಸಕ್ಕೆ ಹೋಗದಿದ್ದರೂ 3 ತಿಂಗಳ ಭತ್ತೆ ನಗದು ರೂಪದಲ್ಲಿ ಪಡೆಯಲು ಅವಕಾಶ ನೀಡಿದೆ. ಬೀದಿ ಬದಿಯ 3 ಲಕ್ಷ ವ್ಯಾಪಾರಿಗಳಿಗೆ ಸಾಲ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನ ಮಾಡಿದೆ. ಆದರೆ ದೇಶದ ಮಾರುಕಟ್ಟೆಯ ವ್ಯಾಪ್ತಿ ಅತ್ಯಂತ ವಿಸ್ತೃತವಾಗಿದ್ದು, ಸರಕಾರಗಳಿಂದಲೇ ಪೂರ್ಣ ಆರ್ಥಿಕ ಪುನಃಶ್ಚೇತನ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿಯೇ ಖಾಸಗಿ ವಲಯಗಳೂ ಸಹ ತಮ್ಮ ಬಲದ ಮೇಲೆ ಎದ್ದು ನಿಲ್ಲುವಂಥ ಅಗತ್ಯ ಇತ್ತು.
ಗಮನಾರ್ಹ ಸಂಗತಿಯೆಂದರೆ, ಜಾಗತಿಕ ಮಾನವ ಸಂಪನ್ಮೂಲ ಕನ್ಸಲ್ಟೆನ್ಸಿಯೊಂದು ಬುಧವಾರ ಪ್ರಕಟಿಸಿರುವ ವರದಿಯು, 2021ರಲ್ಲಿ ದೇಶದ 87 ಪ್ರತಿಶತ ಉದ್ಯಮಗಳು ತಮ್ಮ ನೌಕರರಿಗೆ ಸಂಬಳ ಹೆಚ್ಚಳಮಾಡಲಿವೆ ಎಂದು ಹೇಳಿರುವುದು. ವೇತನ ಕಡಿತದಿಂದಾಗಿ ತತ್ತರಿಸಿಹೋಗಿರುವ ಖಾಸಗಿ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ ಇದು ಆಶಾದಾಯಕ ಸಂಗತಿಯೇ ಸರಿ.
ಇನ್ನು ಈಗಾಗಲೇ ದೇಶದ ಕೆಲವು ಪ್ರಮುಖ ಕಂಪೆನಿಗಳು ಸೋಂಕು ಹರಡುವುದಕ್ಕೆ ಮೊದಲು ಇದ್ದ ವೇತನವನ್ನು ಪುನಃಸ್ಥಾಪಿಸಲಾರಂಭಿಸಿವೆ. ಮತ್ತಷ್ಟು ಕಂಪೆನಿಗಳು ದೀಪಾವಳಿಗೆ ಬೋನಸ್ ಕೂಡ ನೀಡಲು ನಿರ್ಧರಿಸಿವೆ ಎನ್ನುವುದು ವಿಶೇಷ. ಇದೇ ಹೊತ್ತಿನಲ್ಲಿ ದೇಶದ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಮರುಜೀವ ಬರುತ್ತಿದ್ದು, ಹೊಸ ನಿವೇಶನ, ಫ್ಲ್ಯಾಟ್ ಖರೀದಿ, ವರ್ಗಾವಣೆ ಪ್ರಕ್ರಿಯೆ ಕ್ರಮೇಣ ಸಹಜ ಸ್ಥಿತಿಯತ್ತ ಮರಳುವುದರ ಸೂಚನೆ ಸಿಗುತ್ತಿದೆ.
ಆದರೂ ಸಾಗಬೇಕಾದ ದಾರಿ ಬಹಳ ಇದೆ ಎನ್ನುವುದರಲ್ಲಿ ಸಂಶಯವಿಲ್ಲ. 2020ರ ಆರ್ಥಿಕ ಆಘಾತವು ಬಹು ಆಯಾಮದಿಂದ ಕೂಡಿದ್ದು, ಎಲ್ಲ ವಲಯಗಳೂ ಯಥಾಸ್ಥಿತಿಗೆ ಮರಳುವುದು ಈಗಲೇ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರ್ಥಿಕ ಪುನಃಶ್ಚೇತನಕ್ಕಾಗಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದು, ಪ್ಯಾಕೇಜ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಚಿಸಲಿ.