Advertisement
ಈ ಹಿಂದೆ ಮಾವು ಅಭಿವೃದ್ಧಿ ನಿಗಮವೂ ಆನ್‌ಲೈನ್ ಹಾಗೂ ಅಂಚೆ ಮೂಲಕ ತಾಜಾ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ, ಮಾವು ಬೆಳೆಗಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ, ಗ್ರಾಹಕ-ರೈತರ ನಡುವೆ ನೇರ ಮಾರುಕಟ್ಟೆಯನ್ನೂ ಸೃಷ್ಟಿ ಮಾಡಿಕೊಟ್ಟಿತ್ತು. ಆ ರೀತಿಯಲ್ಲಿಯೇ ಆಲೋಚನೆ ಮಾಡಿರುವ ಹಾಪ್‌ಕಾಮ್ಸ್, ಈಗ ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಚಿಂತನೆ ನಡೆಸಿದೆ. ಈ ಸಂಬಂಧ ಖಾಸಗಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಇರಾದೆಯಲ್ಲಿದೆ.
Related Articles
Advertisement
ತಿಂಗಳಿಗೆ 4-5 ಲಕ್ಷ ರೂ. ವಹಿವಾಟು: ಮಾರಾಟ ವಿಸ್ತರಣೆಗೆ ಮಹತ್ವ ನೀಡಿರುವ ಹಾಪ್‌ಕಾಮ್ಸ್, ಇದೀಗ ಬೆಂಗಳೂರಿನ ದೊಡ್ಡ, ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ತನ್ನ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದೆ. ತಿಂಗಳಿಗೆ ಸುಮಾರು 4 ರಿಂದ 5 ಲಕ್ಷ ರೂ.ವ್ಯಾಪಾರ ವಹಿವಾಟು ನಡೆಸುತ್ತಿದೆ. ಕಮ್ಮನಹಳ್ಳಿ ವ್ಯಾಪ್ತಿಯ ನಂದಿ ಸೆಕ್ಟರ್, ಶಿವಾಜಿನಗರದ ಎಂಬೆಸಿಸ್ ಅಪಾರ್ಟ್‌ಮೆಂಟ್, ಜಯನಗರದ ಮಂತ್ರಿ ಗಾರ್ಡನ್, ಕೊಡಿಗೇಹಳ್ಳಿಯ ಶ್ರೀರಾಮ್, ಪ್ರಸ್ಟೀಜ್, ಶೋಭಾ ಸೇರಿದಂತೆ ಹಲವು ಅಪಾರ್ಟ್‌ಮೆಂಟ್‌ಗಳಿಗೆ ಹಾಪ್‌ಕಾಮ್ಸ್ ವಾಹನಗಳು ತೆರಳಲಿವೆ.
ಎರಡು ದಿನಕ್ಕೆ ಒಂದು ಬಾರಿ ಹಾಪ್‌ಕಾಮ್ಸ್ ವಾಹನಗಳು ತೆರಳಲಿದ್ದು, ದಿನಕ್ಕೆ 10 ಸಾವಿರ ರೂ.ದಿಂದ 15 ಸಾವಿರ ರೂ.ವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತದ ಅಧಿಕಾರಿಗಳು ಅಪಾರ್ಟ್‌ಮೆಂಟ್ ಕೇಂದ್ರೀಕರಿಸಿ ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆಯುವ ಆಲೋಚನೆ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ನಂತರ ವಾಹನಗಳ ಮೂಲಕ ಹಣ್ಣು-ತರಕಾರಿಗಳ ಮಾರಾಟಕ್ಕೆ ಹಾಪ್‌ಕಾಮ್ಸ್ ಮುಂದಾಗಿತ್ತು.
ಹಾಪ್‌ಕಾಮ್ಸ್ ತನ್ನ ಮಾರುಕಟ್ಟೆ ವಿಸ್ತರಣೆಯತ್ತ ಚಿಂತನೆ ಹರಿಸಿದೆ. ಆ ನಿಟ್ಟಿನಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ ಆನ್‌ಲೈನ್ ಮಾರುಕಟ್ಟೆ ಕೂಡ ಸೇರಿದೆ. ಆನ್‌ಲೈನ್ ಮಾರುಕಟ್ಟೆ ಲಾಭ-ನಷ್ಟ ನೋಡಿಕೊಂಡು ಮುಂದುವರಿಯಲಾಗುವುದು. -ಡಾ. ಬಿ.ಎನ್.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್ * ದೇವೇಶ ಸೂರಗುಪ್ಪ