ಬೆಂಗಳೂರು:ಸಿರಿಧಾನ್ಯ ಹಾಗೂ ಸಾವಯವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಹಾಪ್‌ಕಾಪ್ಸ್ ಹಾಗೂ ನಂದಿನಿ ಹಾಲಿನ ಮಳಿಗೆಗಳ ಬಳಿ ಸಿರಿಧಾನ್ಯ ಮಾರಾಟ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಹಾಗೂ ಸಿರಿಧಾನ್ಯ ಬೆಳೆಯುವ ರೈತರ ಸಂಘಗಳನ್ನು ಮಾಡಿ ನೇರವಾಗಿ ಗ್ರಾಹಕರಿಗೆ ತಲುಪಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಸಿರಿಧಾನ್ಯ ಆಹಾರಕ್ಕೆ ಸಾಕಷ್ಟು ಬೇಡಿಕೆ ಇದೆ. ಆದರೆ, ರೈತರಿಗೆ ಸೂಕ್ತ ಬೆಲೆ ಸಿಗದೇ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದಾರೆ. ಅದನ್ನು ತಪ್ಪಿಸಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸಿರಿಧಾನ್ಯಗಳ ಸಂಸ್ಕರಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಆಲೋಚಿಸಲಾಗಿದೆ. ಸಿರಿಧಾನ್ಯಕ್ಕೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಎಪಿಎಂಸಿಗಳಲ್ಲಿಯೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್ ಟ್ರೇಡಿಂಗ್ ಹೆಚ್ಚಿಸಲು ಹೈದರಾಬಾದ್ ಮೂಲದ ನಾಗಾರ್ಜುನ ಕಂಪನಿಗೆ 100 ಎಪಿಎಂಸಿಗಳನ್ನು ಸಂಪೂರ್ಣ ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಲು ನೀಡಲು ಆಲೋಚಿಸಲಾಗಿದೆ. ಪಂಚಾಯತಿ ಮಟ್ಟದಲ್ಲಿಯೇ ಮಾರುಕಟ್ಟೆಗಳನ್ನು ಸ್ಥಾಪಿಸಿ, ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇನ್ನು ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶಾತಿ ಹಾಗೂ ನೇಮಕದಲ್ಲಿ ಏಕ ರೂಪತೆ ತರಲು ಪ್ರಯತ್ನ ನಡೆಸಲಾಗಿದೆ. ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ತಡೆ ಹಿಡಿಯಲಾಗಿದ್ದು, ಈ ವರ್ಷ ಚಾಮರಾಜನಗರದಲ್ಲಿ ಹೊಸ ಕೃಷಿ ಕಾಲೇಜು ಆರಂಭಿಸಲಾಗಿದೆ ಎಂದು ಹೇಳಿದರು.