Advertisement

ಯಕ್ಷಲೋಕದ ಚೌಪದದ ಸೊಬಗು ಈಗಲೂ ಉಳಿದಿರುವುದು ಸಂತಸ 

03:34 PM Oct 14, 2018 | |

ಕರಾವಳಿಯ ಶ್ರೇಷ್ಠ ಕಲೆ ಯಕ್ಷಗಾನವನ್ನು ಆಟ, ತಾಳಮದ್ದಳೆ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅದರಲ್ಲಿಯೂ ನವರಾತ್ರಿ ಸಂಭ್ರಮದಲ್ಲಿ  ವಿಶೇಷವಾಗಿ ಹೂವಿನ ಕೋಲು ಎಂಬ ಕಲಾ ಪ್ರಾಕಾರದ ಮೂಲಕ ಮಕ್ಕಳ ಪ್ರತಿಭೆಯನ್ನು ಜನರಿಗೆ ಕಾಣಿಸಲಾಗುತ್ತದೆ. 

Advertisement

ವಿಶಿಷ್ಟವಾದ ಯಕ್ಷಗಾನದಲ್ಲಿ ಅರ್ಥಗಾರಿಕೆಗೆ ಪ್ರಧಾನ ಆದ್ಯತೆ ಇದೆ. ಹೂವಿನಕೋಲಿನಲ್ಲೂ ಹಲವು ವಿಶೇಷಗಳಿವೆ. ಮಕ್ಕಳು ಅರ್ಥಧಾರಿಗಳಾಗಿ ಕಾಣಿಸಿಕೊಂಡು ಪೌರಾಣಿಕ ಪಾತ್ರಗಳಿಗೆ ತಮ್ಮ ಮಾತಿನ ಸಾಮರ್ಥ್ಯದ ಮೂಲಕ ಜೀವ ತುಂಬುತ್ತಾರೆ. 

ಹೂವಿನ ಕೋಲಿನ ಕಲಾ ಪ್ರಕಾರಕ್ಕೆ ಶತಮಾನಗಳಷ್ಟು ಹಳೆಯ ಇತಿಹಾಸ ಇರುವುದು ಹಿರಿಯರಿಂದ ತಿಳಿದು ಬರುತ್ತದೆ. 

 ಸಮವಸ್ತ್ರ  ಧರಿಸಿರುವ ಬಾಲಕರು ತಲೆಗೆ ಬಿಳಿಯ ಟೋಪಿ ಧರಿಸುವುದು ಸಂಪ್ರದಾಯಿಕ ಕ್ರಮ. ಎದುರಲ್ಲಿ ಇಡುವ ಹೂವಿನ ಕೋಲುಗಳು ಆಕರ್ಷಕ. 

Advertisement

ವಿಶೇಷವಾಗಿ ಉಡುಪಿಯಲ್ಲಿ ಹೂವಿನ ಕೋಲಿನ ತಂಡ ಮನೆಗೆ ಬಂದಾಗ ಚೌಪದದವರು ಬಂದರು ಎಂದು ಸ್ವಾಗತಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಗೌರವಯುತವಾಗಿ ಸಂಭಾವನೆ ನೀಡುವ ಕ್ರಮ ಹಿಂದಿನಿಂದಲೂ ನಡೆದು ಬಂದಿದೆ. ಹಲವು ಅಭಿಮಾನಿಗಳ ಮನೆಯಲ್ಲಿ ತಂಡಕ್ಕೆ ಊಟೋಪಚಾರವನ್ನು ನೀಡಿ ಸತ್ಕರಿಸುತ್ತಾರೆ. 

ಹೂವಿನ ಕೋಲುಗಳನ್ನು ಹಿಡಿದುಕೊಂಡ ಬಾಲಕರು 2 ಪಾತ್ರಗಳ ಅರ್ಥಗಳನ್ನು ಹೇಳಿದರೆ, ಭಾಗವತರು ಪದ್ಯಗಳನ್ನು ಹೇಳುತ್ತಾರೆ.  ಮದ್ದಳೆಗಾರರು ಹಿಮ್ಮೇಳದಲ್ಲಿ ಸಾಥ್‌ ನೀಡುತ್ತಾರೆ. ಯಕ್ಷಗಾನದಲ್ಲಿ ಬಳಕೆಯಿರುವ ಚಂಡೆಯನ್ನು ಹಿಂದಿನಿಂದಲೂ ಹೂವಿನಕೋಲಿನಲ್ಲಿ ಬಳಸುವ ಕ್ರಮ ಇಲ್ಲ. ಪೌರಾಣಿಕ ಯಕ್ಷಗಾನ ಪ್ರಸಂಗಳ ಅರ್ಥಗಳನ್ನು  ಮಾತ್ರ ಹೇಳಲಾಗುತ್ತದೆ.

ಹಿಂದೆ ಭಾಗವತರೇ ತಂಡದ ನಾಯಕರಾಗಿರುತ್ತಿದ್ದರು, ವೃತ್ತಿ ಮೇಳಗಳ ಹಲವು ಭಾಗವತರುಗಳು ಹೂವಿನಕೋಲಿನ ತಂಡಗಳನ್ನು ಕಟ್ಟಿ ನವರಾತ್ರಿಯ 9 ದಿನಗಳ ತಿರುಗಾಟವನ್ನು ಮಾಡುತ್ತಿದ್ದರು. ಮನೆ ಮನೆಗೆ ತೆರಳಿ ಪ್ರದರ್ಶನಗಳನ್ನು ನೀಡುತ್ತಿದ್ದರು. 

ಭಾಗವತರು ಪ್ರದರ್ಶನಕ್ಕೆ ಬೇಕಾಗಿ ಅರ್ಥವನ್ನು ಬರೆದು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಆ ಅರ್ಥವನ್ನು ಬಾಯಿಪಾಠಮಾಡಿಕೊಂಡ ಮಕ್ಕಳು ಪ್ರದರ್ಶನದ ವೇಳೆ ನಿರರ್ಗಳವಾಗಿ ಪ್ರಸ್ತುತ ಪಡಿಸುತ್ತಿದ್ದರು. 

ಬಾಲಕರು ಪ್ರದರ್ಶನದ ಮುನ್ನ ಸುಶ್ರಾವ್ಯವಾಗಿ ಹಾಡುವ ಹಾಡು ಹೂವಿನ ಕೋಲಿನ ತಂಡದ ವಿಶೇಷ 

ಹಾಡು ಇಂತಿದೆ 
ಗುರುದೈವ ಗಣಪತಿಗೆ ಶರಣು ಶರಣೆಂದು
ಕರಗಳೆರಡನು ಮುಗಿದು ಶಿರವೆರಗಿ ನಿಂದು
ಆಶ್ವಯುಜ ಶುದ್ಧ  ಮಹಾ ನವಮಿ ಬರಲೆಂದು 
ಶಾಶ್ವತದ ಹರಸಿದೆವು ಬಾಲಕರು ಬಂದು 
ಈಶ ನಿಮಗತ್ಯಧಿಕ ಸುಖವ ಕೊಡಲೆಂದು 
ಲೇಸಾಗಿ ಹರಸಿದೆವು ಬಾಲಕರು ಬಂದು 
ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು 
ತಿಳಿಕೊಳಗಳುಕ್ಕಿ ತುರುಗಳು ಕರೆಯಲೆಂದು 
ನಳಿನ ಮುಖೀಯರು ಸುಪುತ್ರರು ಬಂದು 
ಇಳೆಯೊಳಗೆ ಹರಸಿದೆವು ಬಾಲಕರು ಬಂದು

ಹಲವು ಕಲಾವಿದರನ್ನು ರಂಗಕ್ಕೆ ನೀಡಿತ್ತು
ಹೂವಿನ ಕೋಲಿಗೆ ಬಾಲಕರಾಗಿ ದಿಗ್ಗಜ ಕಲಾವಿದರಾದ ಹಲವು ಮಂದಿ ಕಲಾವಿದರಿದ್ದಾರೆ. ಆರ್ಥಿಕ ಬಡತನವಿದ್ದ ಹಿಂದಿನ ಕಾಲದಲ್ಲಿ ಕೇವಲ ಊಟಕ್ಕಾಗಿ ಮಾತ್ರ ಹೂವಿನ ಕೋಲಿಗೆ ಅರ್ಥ ಹೇಳಲೆಂದು ಮಕ್ಕಳನ್ನು  ಕಳುಹಿಸುವ ಪೋಷಕರಿದ್ದರು. ಹೂವಿನ ಕೋಲು ಮುಗಿದ ಬಳಿಕ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಬಯಲಾಟ ಮೇಳಗಳಿಗೆ ಸೇರಿ ದಿಗ್ಗಜ ಕಲಾವಿದರಾದ ಹಲವು ಮಂದಿ ಬಡಗುತಿಟ್ಟಿನಲ್ಲಿದ್ದಾರೆ. ಹಲವರು ಬಾಲಕರಾಗಿ ಅರ್ಥ ಹೇಳಿದವರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. 

ಈಗ ಲಿಂಗಬೇಧವಿಲ್ಲ
ಹಿಂದೆ ಹೂವಿನ ಕೋಲಿಗೆ ಅರ್ಥ ಹೇಳಲು ಬಾಲಕರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿತ್ತು.ಸಾಮಾನ್ಯವಾಗಿ ತಂಡದಲ್ಲಿ ಇಬ್ಬರು ಬಾಲಕರು ಮಾತ್ರ ಇರುತ್ತಿದ್ದರು. ಈಗ ಬಾಲಕಿಯರೂ ಹೂವಿನ ಕೋಲಿಗೆ ಅರ್ಥ ಹೇಳುವುದಕ್ಕೆ ಅವಕಾಶವಿದೆ. 

ಕಳೆದ ಕೆಲ ವರ್ಷಗಳಿಂದ ಹಂಗಾರಕಟ್ಟೆ ಕಲಾಕೇಂದ್ರದಲ್ಲಿ ಹೂವಿನ ಕೋಲನ್ನು  ಉಳಿಸುವ ಸಲುವಾಗಿ ಸ್ಪರ್ಧೆಗಳನ್ನೂ ಆಯೋಜಿಸಿ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ. 

ಒಟ್ಟಿನಲ್ಲಿ ಕಲಾ ಲೋಕವನ್ನು ಬೆಳಗಿದ, ಕಲಾವಿದನ್ನು  ಲೋಕಕ್ಕೆ  ನೀಡಿದ ಹೂವಿನ ಕೋಲಿನ ಪ್ರಾಕಾರ ಪ್ರತೀ ವರ್ಷವೂ ನವರಾತ್ರಿ ವೇಳೆಗೆ ಕಾಣಲು ಸಿಗಲಿ ಎನ್ನುವುದು ಕಲಾಭಿಮಾನಿಗಳ ಆಶಯ.

ಬರಹ : ವಿಷ್ಣುದಾಸ್‌ ಪಾಟೀಲ್‌ 

ಫೋಟೋಗಳು : ಪ್ರಶಾಂತ್‌ ಮಲ್ಯಾಡಿ 

Advertisement

Udayavani is now on Telegram. Click here to join our channel and stay updated with the latest news.

Next