Advertisement

ಹುಡ್ಕೋ ಕಾಲೋನಿ ನಿಯಂತ್ರಿತ ಪ್ರದೇಶ

12:26 PM Jun 06, 2020 | Suhan S |

ಗದಗ: ಗದಗ-ಬೆಟಗೇರಿ ನಗರಸಭೆ ವಾರ್ಡ್‌ ನಂ. 35ರ ವ್ಯಾಪ್ತಿಯ ಹುಡ್ಕೋ ಕಾಲೋನಿ 2ನೇ ಕ್ರಾಸ್‌ ನ ಸುತ್ತಮುತ್ತಲಿನ 100 ಮೀಟರ್‌ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊವಿಡ್‌ -19 ಸೋಂಕು ನಿಯಂತ್ರಿತ (ಕಂಟೈನ್ಮೆಂಟ್‌) ಪ್ರದೇಶವೆಂದು ಮತ್ತು ಪ್ರದೇಶದ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್‌ ಝೋನ್‌ ಎಂದು ಘೋಷಿಸಿ, ಉಪ ವಿಭಾಗಾಧಿಕಾರಿಯನ್ನು ಈ ಎರಡೂ ಪ್ರದೇಶಗಳ ಇನ್ಸಿಂಡೆಂಟ್‌ ಕಮಾಂಡರ್‌ ಎಂದು ನೇಮಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

Advertisement

ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಬಫರ್‌ ಝೋನ್‌ನ ಮೊದಲ ಒಂದು ಕಿ.ಮೀ. ವ್ಯಾಪ್ತಿಯ ತೀವ್ರ ಬಫರ್‌ಝೋನ್‌ ಪ್ರದೇಶದ ಪ್ರತಿ ಮನೆ ಮನೆಗಳಲ್ಲೂ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಯಂತ್ರಿತ ವಲಯಗಳ ಎಲ್ಲ ದಿನಸಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಔಷಧ ಸೇರಿದಂತೆ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್‌ ಮಾಡಬೇಕು. ನಿಯಂತ್ರಿತ ವ್ಯಾಪ್ತಿ ಪ್ರದೇಶಗಳಲ್ಲಿ ಧಾರ್ಮಿಕ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವಿಕೆ, ಸಭೆ ಅಥವಾ ಮದುವೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಸಂಬಂಧಿತ ಇಲಾಖೆಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತದೆ. ಈ ಪ್ರದೇಶಗಳ ಜನರಿಗೆ ಅವರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಗೃಹಪ್ರತಿಬಂಧ ಕಡ್ಡಾಯವಾಗಿದ್ದು ಮನೆ ಬಿಟ್ಟು ಹೊರಗೆ ಬರುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶಗಳ ಎಲ್ಲ ಶಾಲಾ, ಕಾಲೇಜು, ಕಚೇರಿಗಳನ್ನು ಮುಚ್ಚಲು, ಜನಗುಂಪು ಸೇರುವಿಕೆ, ಕರ್ತವ್ಯ ನಿರತ ವಾಹನ ಹೊರತುಪಡಿಸಿ ಇತರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿಯಂತ್ರಿತ ವಲಯ ಎಂದು ಘೋಷಣೆ ಮಾಡಿದ 28 ದಿನಗಳ ಒಳಗೆ ಅಲ್ಲಿ ಯಾವುದೇ ಹೊಸ ಕೋವಿಡ್‌-19 ಪ್ರಕರಣ ವರದಿಯಾಗದಿದ್ದಲ್ಲಿ ಸಾಮಾನ್ಯ ವಲಯವನ್ನಾಗಿ ಬದಲಾಯಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿಗಳು ಆದೇಶದಲ್ಲಿ ತಿಳಿಸಿರುತ್ತಾರೆ.

ಕಂಟೈನ್‌ಮೆಂಟ್‌, ಬಫರ್‌ ಝೋನ್‌ ಮತ್ತು ಕ್ಲಸ್ಟರ್‌ಗಳಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ಕಾರ್ಯ ನಿರ್ವಹಿಸುವ ಇನ್ಸಿಡೆಂಟ್‌ ಕಮಾಂಡರ್‌, ಪೊಲೀಸ್‌, ಆರೋಗ್ಯ, ಗದಗ- ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಕರ್ತವ್ಯಗಳನ್ನು ನಿಗದಿಪಡಿಸಿ, ಅವುಗಳನ್ನು ಜವಾಬ್ದಾಯಿಂದ ನಿರ್ವಹಿಸಲು ಸೂಚಿಸಲಾಗಿದೆ. ಉಪನಿರ್ದೇಶಕರು ಆಹಾರ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿಕೋಶ, ನಗರಸಭೆ ಪೌರಾಯುಕ್ತರು ಹಾಗೂ ಗದಗ ತಹಶೀಲ್ದಾರ್‌ ಅವರು ನಿಯಂತ್ರಿತ ಪ್ರದೇಶದ ಜನರಿಗೆ ದಿನಬಳಕೆ ಅವಶ್ಯಕ ವಸ್ತುಗಳ ಪೂರೈಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಧಿಕಾರಿಗಳ ಆದೇಶ ಪತ್ರದಲ್ಲಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next