Advertisement

ಭಾರತ ಮಾಲೆಯಿಂದ ಉದುರಿದ ಹು-ಧಾ ರಿಂಗ್‌ರಸ್ತೆ ಹೂವು!

12:00 PM Oct 27, 2017 | Team Udayavani |

ಧಾರವಾಡ: ಕೇಂದ್ರ ಸರ್ಕಾರ ದೇಶಾದ್ಯಂತ ಹೈಟೆಕ್‌ ರಸ್ತೆ, ಬೈಪಾಸ್‌ ರಸ್ತೆಗಳು ಮತ್ತು ರಿಂಗ್‌ ರಸ್ತೆಗಳನ್ನು ನಿರ್ಮಿಸಲು ಜಾರಿಗೊಳಿಸುತ್ತಿರುವ ಭಾರತ ಮಾಲಾ ಯೋಜನೆ ಇದೀಗ ಇಡೀ ದೇಶದ ಗಮನ ಸೆಳೆದಿದೆ. ಅಷ್ಟೆ ಅಲ್ಲ ರಾಜ್ಯದಲ್ಲೂ ನೂರಾರು ಕಿಮೀ ರಸ್ತೆ ಆತ್ಯಾಧುನಿಕ ಸ್ಪರ್ಶ ಪಡೆದುಕೊಳ್ಳಲಿದೆ. 

Advertisement

ಆದರೆ ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ನಿರ್ಮಾಣಗೊಳ್ಳಬೇಕಿದ್ದ ರಿಂಗ್‌ ರಸ್ತೆ ಮತ್ತು ಬೈಪಾಸ್‌ ರಸ್ತೆಯನ್ನು ದ್ವಿಪಥದಿಂದ ಷಟ್ಪಥಕ್ಕೆ ಏರಿಸುವ ಯೋಜನೆ ಭಾರತ ಮಾಲಾದಲ್ಲಿ ಸೇರ್ಪಡೆಯೇ ಆಗಿಲ್ಲ.

ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣವಾಗುವಾಗಲೇ ಇಡೀ ದೇಶದಲ್ಲಿ ದ್ವಿಪಥ (ಸಿಂಗಲ್‌)ರಸ್ತೆಯಾಗಿ ಉಳಿದ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಖಾಸಗಿ ಕಂಪನಿಯೊಂದಿಗಿನ ಸಂಘರ್ಷಕ್ಕೆಡೆಯಾಗಿದ್ದರೆ, ಕೇಂದ್ರ, ರಾಜ್ಯ ಸರ್ಕಾರಗಳ ಅಧಿಕಾರಿಗಳು, ರಾಜಕಾರಣಿಗಳ ತಿಕ್ಕಾಟದಿಂದಾಗಿ 587 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ರಿಂಗ್‌ ರಸ್ತೆ ಕೂಡ ಭಾರತ ಮಾಲಾದಲ್ಲಿ ಸೇರ್ಪಡೆಯಾಗದೇ ಹೋಗಿದೆ. 

ಕರ್ನಾಟಕ ರಾಜ್ಯದಲ್ಲಿ ಹಾದು ಹೋಗುವ ಅತಿ ದೊಡ್ಡ ರಾಷ್ಟ್ರೀಯ ಹೆದ್ದಾರಿ 4ರ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ವರ್ತುಲ ರಸ್ತೆ (ರಿಂಗ್‌ ರೋಡ್‌)ನಿರ್ಮಿಸಲು ಭಾರತ ಮಾಲಾದಲ್ಲಿ ಅವಕಾಶ ಲಭಿಸಿದೆ.

ಅದೇ ರೀತಿ ಬಳ್ಳಾರಿ, ರಾಯಚೂರು, ಹೊಸಪೇಟೆ ಮತ್ತು ಬಾಗಲಕೋಟೆಯಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಲು ಕೂಡ ಈ ಯೋಜನೆಯಲ್ಲಿ ಅವಕಾಶ ಸಿಕ್ಕಿದ್ದು, ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಅವಳಿ ನಗರಕ್ಕೂ ನೂರಾರು ಕೋಟಿ ಹಣ ಭಾರತ ಮಾಲಾದಲ್ಲಿ ಲಭಿಸುತ್ತಿತ್ತು ಎನಿಸುತ್ತದೆ.

Advertisement

ಏನಾಯ್ತು ರಿಂಗ್‌ ರಸ್ತೆ?: ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಭಾಗದಲ್ಲಿ ಈಗಾಗಲೇ ಬೈಪಾಸ್‌ ಇದ್ದು ಅವಳಿ ನಗರಕ್ಕೆ ರಿಂಗ್‌ ರಸ್ತೆಯ ಅಗತ್ಯದ ಬಗ್ಗೆ ಕಳೆದ 20 ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಹುಬ್ಬಳ್ಳಿಯ ಗಬ್ಬೂರ ಕ್ರಾಸ್‌ನಿಂದ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದವರೆಗೂ ರಿಂಗ್‌ ರಸ್ತೆ ಅಥವಾ ಪೂರ್ವ ಬೈಪಾಸ್‌ ರಸ್ತೆ ನಿರ್ಮಾಣವಾಗಬೇಕಿದೆ.

ಹು-ಧಾ ರಿಂಗ್‌ ರಸ್ತೆಗೆ 587 ಕೋಟಿ ರೂ. ವೆಚ್ಚದ ಡಿಪಿಆರ್‌ 2015-16ನೇ ಸಾಲಿಗೆ ಸಿದ್ಧಗೊಂಡಿತ್ತು. ಅದನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ  ಇಲಾಖೆಗೆ ಡಿಸೆಂಬರ್‌,2016ರಲ್ಲಿಯೇ ಕಳುಹಿಸಲಾಗಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲಾಖೆ ಕೇಳಿತ್ತು.

ಅದನ್ನು ಮಾಚ್‌, 2017ರಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಕಳುಹಿಸಿ ಕೊಟ್ಟಿತ್ತು. ಈಗಾಗಲೇ ಗಬ್ಬೂರಿನಿಂದ ಕುಸುಗಲ್‌ವರೆಗೂ ನಿರ್ಮಾಣ ಕಾರ್ಯ ಶುರುವಾಗಿದೆ. ಇನ್ನು ಕುಸುಗಲ್‌-ಮುಮ್ಮಿಗಟ್ಟಿ (ರಾಹೆ 4ಕ್ಕೆ ಸೇರ್ಪಡೆ )ವರೆಗೂ 33 ಕಿಮೀ ಉದ್ದದ ರಿಂಗ್‌ ರಸ್ತೆ ನಿರ್ಮಿಸಬೇಕಿದೆ. ಇದರಲ್ಲಿ ಭೂ ಸ್ವಾಧೀನಕ್ಕಾಗಿ 108 ಕೋಟಿ ರೂ. ಅಂದಾಜು ಮಾಡಲಾಗಿತ್ತು.

ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಪ್ರಾಧಿಕಾರ(ಹುಡಾ) ಅದರ ನೀಲನಕ್ಷೆ ಮತ್ತು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದು, ಆ ಬಗ್ಗೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕೂಡ ನಿರ್ಲಕ್ಷé ವಹಿಸಿದೆ. 

ಬೈಪಾಸ್‌ ತಿಕ್ಕಾಟ: ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ 1998ರಲ್ಲಿಯೇ ರಾಜ್ಯ ಸರ್ಕಾರ ಖಾಸಗಿ ಕಂಪನಿ (ನೈಸ್‌ ಕಂಪನಿ)ಯೊಂದಿಗೆ ಮಾಡಿಕೊಂಡ ಒಪ್ಪಂದಂತೆ 25 ವರ್ಷಗಳ ಕಾಲ ರಸ್ತೆಯ ಟೋಲ್‌ ಸಂಗ್ರಹ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದೆ.

ಇದನ್ನು ಮರಳಿ ಸರ್ಕಾರಕ್ಕೆ ಪಡೆಯಲು ಕಳೆದ ವರ್ಷದಿಂದ ಪ್ರಯತ್ನ ನಡೆಸಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅವರು ಸರ್ಕಾರದ ಮಟ್ಟದಲ್ಲಿ ನೈಸ್‌ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದಾಗಿ ಹೇಳುತ್ತಿದ್ದಾರೆ.

ಇನ್ನೊಂದೆಡೆ ರಾಜ್ಯ ಸರ್ಕಾರ ರಸ್ತೆ ನಿರ್ಮಾಣಕ್ಕೆ ಅಗತ್ಯ ವ್ಯವಸ್ಥೆ ಮಾಡಿದರೆ ಇಡೀ ಬೈಪಾಸ್‌ ರಸ್ತೆಯನ್ನು ಆರು ಪಥದ ರಸ್ತೆ ಮಾಡುತ್ತೇವೆ ಎಂದು ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ಅವರು ಹೇಳುತ್ತಲೇ ಇದ್ದಾರೆ. ಇದೀಗ ರಾಜ್ಯ ಮತ್ತು ಕೇಂದ್ರ ನಾಯಕರ ತಿಕ್ಕಾಟದಲ್ಲಿ ರಾಜ್ಯದಲ್ಲಿಯೇ ಎರಡನೇ ದೊಡ್ಡ ನಗರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಬೈಪಾಸ್‌ ರಸ್ತೆಯ ಅಗಲೀಕರಣವೂ ಇಲ್ಲ, ಹೊಸ ವರ್ತುಲ ರಸ್ತೆಯ ಪ್ರಸ್ತಾಪವೂ ಇಲ್ಲವಾಗಿದೆ. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next