Advertisement

1990ರಲ್ಲಿ ನಡೆದಿದ್ದೇನು? ರಾಮಮಂದಿರ ನಿರ್ಮಾಣ-ಪ್ರಾಣ ತೆತ್ತ “ 16 ಕರಸೇವಕರಿಗೆ” ದೊರೆತ ಗೌರವ

01:14 PM Sep 29, 2020 | Nagendra Trasi |

ಮಣಿಪಾಲ: ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ಭೂಮಿ ಪೂಜೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಮೂರು ದಶಕಗಳ ಹಿಂದೆ ನಡೆದಿದ್ದ ರಾಮಜನ್ಮಭೂಮಿ ಹೋರಾಟದಲ್ಲಿ ಹಲವಾರು ಮಂದಿ ಪ್ರಾಣ ತ್ಯಜಿಸಿದ್ದರು. ಇದರಿಂದಾಗಿ ರಾಮಮಂದಿರ ನಿರ್ಮಾಣ ಜೀವತೆತ್ತವರಿಗೆ ಸಲ್ಲಿಸುವ ಗೌರವವಾಗಲಿದೆ ಎಂದು ಕರಸೇವಕರ ಕುಟುಂಬಸ್ಥರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

1990ರ ಅಕ್ಟೋಬರ್ 30 ಹಾಗೂ ನವೆಂಬರ್ 2ರಂದು ಅಯೋಧ್ಯೆಯಲ್ಲಿ ಪೊಲೀಸರ ಗುಂಡಿನ ದಾಳಿಗೆ 16 ಮಂದಿ ಕರಸೇವಕರು ಸಾವನ್ನಪ್ಪಿದ್ದರು. ಇದರಿಂದಾಗಿ ರಾಮಮಂದಿರ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ಘಟನೆ ನಡೆದು ಮೂರು ದಶಕಗಳೇ ಸಂದಿದ್ದು, ಮೃತ ಕರಸೇವಕರ ಕುಟುಂಬ ಸದಸ್ಯರ ಜತೆ ದ ಕ್ವಿಂಟ್ ನಡೆಸಿರುವ ಮಾತುಕತೆ ಇಲ್ಲಿದೆ…

ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದ ಕರಸೇವಕ ಕುಟುಂಬದ ಸದಸ್ಯರಿಗೆ ಆದಷ್ಟು ಶೀಘ್ರವಾಗಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಮೃತ ಕರಸೇವಕರ ಕನಸು ಕೂಡಾ ಅದೇ ಆಗಿತ್ತು. ಈ ನಿಟ್ಟಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆಯ ಸಾರಾಂಶ ಹೀಗಿದೆ…

“ಹೌದು ನನಗೆ ಗೊತ್ತಿದೆ ರಾಮಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಹೋರಾಡಿದ್ದಾರೆ. ನಾನು ನನ್ನ ಸಹೋದರ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ನನ್ನ ತಾಯಿ ಎಷ್ಟು ಶ್ರಮಪಟ್ಟಿದ್ದಾರೆ ಎಂಬುದು ನನಗೆ ಮಾತ್ರ ಗೊತ್ತು. ನಮಗೆ ಯಾವುದೇ ನೆರವು ಸಿಕ್ಕಿಲ್ಲ. ಹೇಗೋ ನಾವು ನಮ್ಮ ಬದುಕಿನ ದಾರಿ ಕಂಡುಕೊಂಡಿದ್ದೇವೆ”.

ಸೀಮಾ ಗುಪ್ತಾ, ಮೃತ ಕರಸೇವಕ ವಾಸುದೇವ ಗುಪ್ತಾ ಪುತ್ರಿ

Advertisement

ರಾಮಮಂದಿರ ವಿಚಾರದಲ್ಲಿ ಯಾವಾಗಲೂ ಪ್ರಮುಖ ಪಾತ್ರವಹಿಸುತ್ತಿದ್ದದ್ದು ಕರಸೇವಕರು. ಈ ಹಿನ್ನೆಲೆಯಲ್ಲಿ ಮೃತ ಕರಸೇವಕರ ಕುಟುಂಬಸ್ಥರ ಆಶಯ ಕೂಡಾ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಕಾಣಬೇಕು ಎಂಬುದಾಗಿದೆ.

“ರಾಜಕೀಯ ಹೊರತುಪಡಿಸಿ ನಮಗೆ ಮುಖ್ಯವಾಗಿ ರಾಮಮಂದಿರ ನಿರ್ಮಾಣವಾಗಬೇಕು. ನಾವು ಇದಕ್ಕಾಗಿ ನಾವೂ ತುಂಬಾ ಕಷ್ಟಪಟ್ಟಿದ್ದೇವೆ. ನಮಗೆ ರಾಮಮಂದಿರ ನಿರ್ಮಾಣವಾದರೆ ನನ್ನ ತಂದೆಯ ತ್ಯಾಗದ ಫಲ ನಿಷ್ಪ್ರಯೋಜಕವಾಗುವುದಿಲ್ಲ”

ಸುಭಾಶ್ ಪಾಂಡೆ, ಮೃತ ಕರ್ ಸೇವಕ ರಮೇಶ್ ಪಾಂಡೆ ಪುತ್ರ

ಕೋಲ್ಕತಾದ ಇಬ್ಬರು ಸಹೋದರರು 1990ರಲ್ಲಿ ಅಯೋಧ್ಯೆ ಹೋರಾಟದಲ್ಲಿ ಭಾಗವಹಿಸಲು ಮನೆ ಬಿಟ್ಟು ತೆರಳಿದ್ದರು. ಇವರಲ್ಲೊಬ್ಬರು ರಾಮ್ ಕೊಠಾರಿ (23ವರ್ಷ) ಮತ್ತು ಶಾರದ್ ಕೊಠಾರಿ (21ವರ್ಷ). ಬಾಬ್ರಿ ಮಸೀದಿ ಮೇಲೆ ಹತ್ತಿ ಮೊತ್ತ ಮೊದಲು ಕೇಸರಿ ಬಾವುಟ ಹಾರಿಸಿದ್ದವರು ಕೊಠಾರಿ ಸಹೋದರರು.

1990 ನವೆಂಬರ್ 2ರಂದು ಕರಸೇವಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಕೊಠಾರಿ ಸಹೋದರರು ಸಾವನ್ನಪ್ಪಿದ್ದರು.

“ನಾನು ಅಲ್ಲಿ ಯಾವಾಗ ತಲುಪುತ್ತೇನೆಯೋ ಎಂಬ ಕಾತುರ ಇತ್ತು…ಅದು ನನ್ನ ಮಕ್ಕಳನ್ನು ನೋಡುವ ಹಂಬಲ. ನಾನು ಅವರನ್ನು ಆಲಿಂಗಿಸಿಕೊಳ್ಳಲು ಬಯಸಿದ್ದೆ. ಆದರೆ ಕರಸೇವಕರು ಅಂದು ನನಗೆ ಹೇಳಿದ್ದರು..ಅವರ ಶವ ನೋಡಲು ನಿಮಗೆ ಸಾಧ್ಯವಿಲ್ಲ, ಯಾಕೆಂದರೆ ಅವರ ತಲೆಗೆ ಗುಂಡು ತಗುಲಿ ದೊಡ್ಡ ಗಾಯವಾಗಿತ್ತು ಎಂದು ತಿಳಿಸಿದ್ದರು.”

ದೌಲಾಲ್ ಕೊಠಾರಿ, ಮೃತ ಕರಸೇವಕರಾದ ರಾಮ್ ಮತ್ತು ಶಾರದ್ ಕೊಠಾರಿ ಅಜ್ಜ

1990ರ ನವೆಂಬರ್ ನಲ್ಲಿ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದರು. ಅಂದು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದರು. ಅವರ ಪ್ರಯತ್ನ ತಡೆಯಲು ಉತ್ತರಪ್ರದೇಶ ಪೊಲೀಸರು ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 16 ಮಂದಿ ಪ್ರಾಣ ತ್ಯಜಿಸಿದ್ದರು.

ಈ ಘಟನೆಯೇ ಮುಂದೆ ರಾಮಮಂದಿರ ಹೋರಾಟದ ಕಿಚ್ಚಿಗೆ ನಾಂದಿ ಹಾಡಿತ್ತು. ನಂತರ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಲಾಗಿತ್ತು. ಇದರಿಂದ ಇಡೀ ದೇಶಾದ್ಯಂತ ಗಲಭೆ ಹೊತ್ತಿಕೊಂಡಿದ್ದು, ಸುಮಾರು 2000 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next