ಮೂಡಿಗೆರೆ: ಇಲ್ಲಿನ ಕಳಸದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಘಟಕವು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕ ವಲಯಕ್ಕೆ ಔದಾರ್ಯ ತೋರಿಸಿ ಕಾರ್ಯ ನಿರ್ವಹಣೆ ಮಾಡಿದ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗೌರವಿಸಿ ಸನ್ಮಾನಿಸಲಾಯಿತು. ಕೋವಿಡ್ ವೈರಸ್ ಸೋಂಕು ಭೀತಿಯಲ್ಲಿ ಜನರು ಇರುವಾಗ ಭೀತಿಯ ನಡುವೆ ತಮ್ಮ ಜೀವನವನ್ನು ಲೆಕ್ಕಿಸದೆ ಹಗಲಿರುಳು ಶ್ರಮವಹಿಸಿ ಕೆಲಸ ಮಾಡುತ್ತಿರುವ ಈ ಎರಡು ಇಲಾಖೆಗಳ ಸಿಬ್ಬಂದಿ ಅಭಿನಂದನೆಗೆ ಅರ್ಹ. ಲಾಕ್‌ಡೌನ್ ಅವ ಧಿಯಲ್ಲಿ ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿದ್ದರೆ, ಇಲಾಖೆಗಳ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಜನತೆಯಲ್ಲಿ ಜಾಗೃತಿ ಮೂಡಿಸಿ ದೇಶದ ರಕ್ಷಣೆಗೆ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. ಸರ್ಕಲ್ ಇನ್ಸ್‌ಪೆಕ್ಟರ್ ವಿಜಯಕುಮಾರ್, ಸಬ್ ಇನ್ಸ್‌ಪೆಕ್ಟರ್ ಮಂಜಯ್ಯ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಪ್ರಮುಖರಿಗೆ ಸನ್ಮಾನಿಸಲಾಯಿತು. ಸಮಿತಿಯ ಪದಾಧಿಕಾರಿಗಳಾದ ಜನಾರ್ದನ, ಸುಮಂತ್, ಚಂದ್ರು, ಸುದರ್ಶನ್, ರಘುಪತಿ, ಜಾನಕಿ, ಚಂದ್ರು, ಅನಿಲ್ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು.