Advertisement

ದಿವ್ಯಾಂಗ ಮಕ್ಕಳ ಹೃದಯ ಮಿಡಿತದ ಸೇವೆಗೆ ಗೌರವ

12:55 PM Dec 07, 2017 | |

ಬಜಪೆ : ದೇಶದಲ್ಲಿ ಮೊದಲ ಬಾರಿ ಸಮನ್ವಯ ಶಿಕ್ಷಣವನ್ನು ದಿವ್ಯಾಂಗ ಮಕ್ಕಳ ಜತೆ ಸಾಮಾನ್ಯ ಮಕ್ಕಳಿಗೂ ಒದಗಿಸುವ ಮೂಲಕ ಯಶಸ್ವಿಯಾದ ವಾಮಂಜೂರಿನ ಎಸ್‌ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Advertisement

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಡಿ. 3ರಂದು ದಿಲ್ಲಿಯಲ್ಲಿ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಅಂಗವಿಕಲ ದಿನಾಚರಣೆಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಂಸ್ಥೆಯ ಕಾರ್ಯದರ್ಶಿ ಪ್ರೊ| ಎ. ರಾಜೇಂದ್ರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ 1981ರಿಂದ ಶ್ರವಣದೋಷ, ದೈಹಿಕ ನ್ಯೂನತೆ, ಆಟಿಸಂ, ಕಲಿಕಾ ನ್ಯೂನತೆ, ಬುದ್ಧಿಮಾಂದ್ಯತೆ, ದೃಷಿದೋಷವಿರುವ ದಿವ್ಯಾಂಗ ಮಕ್ಕಳಿಗೆ ಸಮನ್ವಯದಿಂದ ಶಿಕ್ಷಣ ನೀಡುತ್ತಿರುವುದು ಗಮನಾರ್ಹ. ಸಾಮಾನ್ಯ ಮಕ್ಕಳ ಜತೆ ಇವರಿಗೆ ಇಲ್ಲಿ ದೊರಕುವ ಹೃದಯ ಮಿಡಿತದ ಶಿಕ್ಷಣವಿದು. ವಾಮಂಜೂರಿನ ಎಸ್‌ ಡಿಎಂ ಮಂಗಳಜ್ಯೋತಿ ಸಮಗ್ರ ಶಿಕ್ಷಣ ಶಾಲೆ 1000ಕ್ಕಿಂತ ಅಧಿಕ ದಿವ್ಯಾಂಗ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದೆ. ಆಧುನಿಕ ವಾಕ್‌ಶ್ರವಣ ವಿಭಾಗ, ಫಿಸಿಯೋಥೆರಪಿ, ಆಟಿಸಂ ವಿಭಾಗ, ಸಂಪನ್ಮೂಲ ಶಿಕ್ಷಣ ವ್ಯವಸ್ಥೆ, ಉನ್ನತ ಶಿಕ್ಷಣಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ), ವೃತ್ತಿ ತರಬೇತಿ ಕೇಂದ್ರಗಳು ಇಲ್ಲಿ ಸೇವೆ ನೀಡುತ್ತಿವೆ. 2011ರಲ್ಲಿ ಈ ಸಂಸ್ಥೆಯ ಸೇವೆಯನ್ನು ಪರಿಗಣಿಸಿ ಅಂಗವಿಕಲ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಸರಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನೂ ಹಲವಾರು ಪ್ರಶಸ್ತಿಗಳನ್ನು ಈ ಸಂಸ್ಥೆ ಗಳಿಸಿದೆ.

ಶಿಕ್ಷಕ-ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಮೂವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇಬ್ಬರು ದಿವ್ಯಾಂಗ ಶಿಕ್ಷಕಿಯರಾದ ಸಂಗೀತ ಶಿಕ್ಷಕಿ ಕಸ್ತೂರಿ, ಕರಕುಶಲ ತರಬೇತಿ ಶಿಕ್ಷಕಿ ಹರಿಣಾಕ್ಷಿ, ಮುಖ್ಯಶಿಕ್ಷಕ ಅಶೋಕ್‌ ಕುಮಾರ್‌ ಪ್ರಶಸ್ತಿ ಗಳಿಸಿದ್ದಾರೆ. ಡಿ. 6ರಂದು ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಈ ಪ್ರಶಸ್ತಿ ಸಮಾರಂಭವಿದೆ. ಸಂಸ್ಥೆಯ ಅಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಗಣೇಶ್‌ ಭಟ್‌ ವಿ. ತಿಳಿಸಿದ್ದಾರೆ.

47 ಸಂಸ್ಥೆಗಳಿಗೆ ಪ್ರಶಸ್ತಿ
ದಿಲ್ಲಿಯಲ್ಲಿ ನಡೆದ ಅಂಗವಿಕಲ ದಿನಾಚರಣೆ ಸಮಾರಂಭದಲ್ಲಿ ಅಂಗವಿಕಲರ ಅಭ್ಯುದಯಕ್ಕೆ ಶ್ರಮಿಸಿದ ದೇಶದ 47 ವ್ಯಕ್ತಿಗಳಿಗೆ ಹಾಗೂ 5 ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಮಂಗಳೂರು ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಿಕ್ಷಣ ಶಾಲೆ ಹಾಗೂ ಬೆಂಗಳೂರಿನ ಸಮರ್ಥನಮ್‌ ಟ್ರಸ್ಟ್‌ ಗೆ ಈ ಪ್ರಶಸ್ತಿ ದೊರಕಿದೆ. ನವಿ ಮುಂಬಯಿಯ ಇಟಿಸಿ ಎಜುಕೇಶನ್‌ ಟ್ರೆçನಿಂಗ್‌ ಸೆಂಟರ್‌, ಸಿಕ್ಕಿಂನ ವಿಕಲಾಂಗ್‌ ಸಹಾಯಕ್‌ ಸಮಿತಿ, ಹಿಮಾಚಲ ಪ್ರದೇಶದ ಚಿನ್ಮಯ ರೂರಲ್‌ ಡೆಮಲಪ್‌ಮಂಟ್‌ ಸಂಸ್ಥೆಗೂ ಈ ಪ್ರಶಸ್ತಿ ನೀಡಲಾಗಿದೆ. ಬಾಯಿಯಿಂದಲೇ ಚಿತ್ರಕಲೆ ಬಿಡಿಸುವ ಮಹಿಳೆ, ಅಂತಾರಾಷ್ಟ್ರೀಯ ಸಂಸ್ಥೆಯ ಅರ್ಥಿಕ ಸಲಹೆಗಾರರು ಇದ್ದರು. ದೃಷ್ಟಿ ದೋಷವಿದ್ದ ಕೇರಳದ ಟಿಫಾನಿ ಮಾರಿಯಾಬ್ರಾರ್‌ ಆವರು ದೃಷ್ಟಿ ದೋಷದ ಉಪಕರಣ ತಯಾರಿ, ಏಶ್ಯಾ ಕಪ್‌ ಅಂಧರ ಕ್ರಿಕೆಟ್‌ನಲ್ಲಿ 2ಬಾರಿ ಪ್ರಶಸ್ತಿ ಗೆದ್ದುಕೊಟ್ಟ ಕರ್ನಾಟಕದ ಶೇಖರ್‌ ನಾಯಕ್‌ ಅವರು ಪ್ರಶಸ್ತಿ ಪಡೆದವರಲ್ಲಿದ್ದರು.

Advertisement

ಸೇವೆಗೆ ಸಂದ ಗೌರವ
ಇದು ಸೇವೆಗೆ ಸಂದ ಗೌರವ. ಇಲ್ಲಿನ ಶಿಕ್ಷಕ -ಶಿಕ್ಷಕೇತರ ಸಿಬಂದಿಗೆ ಇನ್ನೂ ಹೆಚ್ಚು ಸೇವೆ ಮಾಡಲು ಹುಮ್ಮಸ್ಸು ನೀಡಿದೆ. ಸಂಸ್ಥೆಯ ಅಧ್ಯಕ್ಷ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಇದಕ್ಕೆ ಸ್ಫೂರ್ತಿ. ಅವರ 50ನೇ ಪಟ್ಟಾಭಿಷೇಕ ಸಂದರ್ಭದಲ್ಲಿ ಈ ಪ್ರಶಸ್ತಿ ಬಂದಿದ್ದು ಹೆಚ್ಚು ಮಹತ್ವ ಪಡೆದಿದೆ ಎಂದು ಆಡಳಿತಾಧಿಕಾರಿ ಗಣೇಶ್‌ ಭಟ್‌ ವಿ. ಹೇಳಿದ್ದಾರೆ.

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next