ಬಾಗಲಕೋಟೆ: ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ನಾನು ಆಯ್ಕೆಯಾಗಲು ಹಾಲುಮತ ಸಮಾಜದ ಪಾತ್ರವೂ ಇದೆ. ಈ ಸಮಾಜದ ಋಣ ನನ್ನ ಮೇಲಿದೆ. ಹಾಲುಮತ ಸಮಾಜದವರು ಸ್ಥಾಪಿಸಿರುವ ಕಾಳಿದಾಸ ಶಿಕ್ಷಣ ಸಂಸ್ಥೆಗೆ ಪ್ರಸಕ್ತ ವರ್ಷದಿಂದ ಬರುವ ಶಾಸಕರ ಅನುದಾನದಲ್ಲಿ ಮೊದಲ 10 ಲಕ್ಷ ಅನುದಾನ ಈ ಸಂಸ್ಥೆಯ ಅಭಿವೃದ್ಧಿಗೆ ನೀಡಲಾಗುವುದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ಭರವಸೆ ನೀಡಿದರು. ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಕಲಾ, ವಾಣಿಜ್ಯ ಪದವಿ ಕಾಲೇಜುಗಳ ನಾಮಕರಣ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಳಿದಾಸ ಶಿಕ್ಷಣ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನೀಡಿದೆ. ಈ ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕರ ನಿಧಿ ಯಿಂದ 10 ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂಸ್ಥೆಯ ಗೌರವ ಅಧ್ಯಕ್ಷರಾಗಿರುವ ಎಸ್.ಎಸ್. ಪಾಟೀಲರಿಗೆ ಈಗ 83 ವಯಸ್ಸು. ಆದರೂ, ಸಂಸ್ಥೆಗಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಹೊಸ ಹೊಸ ಕಾಲೇಜು ಆರಂಭಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ವ್ಯಾಪಾರದ ಜತೆಗೆ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಕಾರ್ಯ ಎಂದರು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ನಾವು ಒಳ್ಳೆಯ ಕಾರ್ಯ ಮಾಡದಿದ್ದರೂ ಪರವಾಗಿಲ್ಲ. ಆದರೆ, ಕೆಟ್ಟದನ್ನು ಮಾತ್ರ ಮಾಡಬಾರದು. ಅದು ಶೋಭೆ ತರುವಂತಹದ್ದಲ್ಲ. ಕಾಳಿದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಂಕರಗೌಡ ಪಾಟೀಲರು, ಮೂಲತಃ ಗ್ರಾಮೀಣ ಭಾಗದಿಂದ ಬಂದವರು. ವ್ಯಾಪಾರಕ್ಕಾಗಿ ಬಾಗಲಕೋಟೆಗೆ ಬಂದು, ಇಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಅವರು ಹುಟ್ಟು ಹಾಕಿದ ಈ ಸಂಸ್ಥೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲರು ಶ್ರಮದಿಂದ ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಮುಗಳಖೋಡ ಕನಕಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ, ಕಾಳಿದಾಸ ಶಿಕ್ಷಣಯ ಸಂಸ್ಥೆಯ ಗೌರವಾಧ್ಯಕ್ಷ ಎಸ್.ಎಸ್. ಪಾಟೀಲ, ಕಾರ್ಯದರ್ಶಿ ಎಸ್.ಸಿ. ಆಡಿನ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ, ನಗರಸಭೆ ಸದಸ್ಯ ಹನುಮಂತ ರ್ಯಾಕುಂಪಿ, ಮುಖಂಡರಾದ ಹನುಮಂತ ಯಮನಾಳ, ಯಲ್ಲಮ್ಮ ಯಮನಾಳ, ಜಿ. ಭರಮಗೌಡ ಹೊಸಪೇಟ, ಜಿ.ಸರೋಜಮ್ಮ ಹೊಸಪೇಟ, ಎ.ಎಸ್. ಹಾವೋಜಿ, ಬಿ.ಎಸ್. ಚಿಮ್ಮನಕಟ್ಟಿ, ಎಸ್.ವೈ. ನೀಲಾರ, ಪಿ.ಎಸ್. ಭೈರಮಟ್ಟಿ, ವೈ.ಎಚ್. ಇದ್ದಲಗಿ, ಎಸ್.ಎಸ್. ದೊಡಮನಿ, ಎಚ್.ಎಂ.ಯಮನಾಳ ಮುಂತಾದವರು ಇದ್ದರು.