Advertisement

ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ

11:28 PM May 06, 2019 | Team Udayavani |

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 12,500 ಅತಿಥಿ ಉಪನ್ಯಾಸಕರ ಗೌರವಧನ ಮಾಸಿಕ 5,000 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಜತೆಗೆ, ಪ್ರಸ್ತುತ ನೇಮಕ ಮಾಡಿಕೊಳ್ಳಲು ಉದ್ದೇಶಿರುವ ಸುಮಾರು 5,100 ಉಪನ್ಯಾಸಕ ಹುದ್ದೆಗಳ‌ ನೇರ ನೇಮಕಾತಿಯಲ್ಲಿ ಶೇ. 50 ಹುದ್ದೆಗಳನ್ನು ಅರ್ಹತೆ ಮಾನದಂಡದಲ್ಲಿ ಈ ಅತಿಥಿ ಉಪನ್ಯಾಸಕರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಪ್ರಸ್ತುತ ಅತಿಥಿ ಉಪನ್ಯಾಸಕರಿಗೆ ಮಾಸಿಕ 11,500 ರೂ. ಗೌರವಧನ , ಎನ್‌ಇಟಿ ಪಾಸಾದವರಿಗೆ 13,500 ರೂ. ನೀಡಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಿಂದ ಗೌರವಧನ 5,000 ರೂ. ಹೆಚ್ಚಳ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿದೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಇಲಾಖೆಯ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿ ಉಪನ್ಯಾಸಕರ ಹುದ್ದೆ ಸೇರಿ ಖಾಲಿ ಇರುವ ಹುದ್ದೆಗಳ ಭರ್ತಿ ಸಂಬಂಧ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಖಾಲಿ ಇರುವ 1,600 ಉಪನ್ಯಾಸಕ ಹುದ್ದೆಗಳ ಜತೆಗೆ, ಹೊಸದಾಗಿ 3,500 ಉಪನ್ಯಾಸಕ ಹುದ್ದೆ ಸೃಷ್ಟಿಸಿ 5,100 ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ನೇಮಕದಲ್ಲಿ ಮೆರಿಟ್‌ ಆಧರಿಸಿ ಅತಿಥಿ ಉಪನ್ಯಾಸಕರಿಗೆ ಶೇ.50 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ 396 ಪ್ರಾಂಶುಪಾಲರ ಹುದ್ದೆಗಳನ್ನೂ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಜತೆಗೆ, ಅನುದಾನಿತ ಖಾಸಗಿ ಕಾಲೇಜುಗಳಲ್ಲಿನ ಒಟ್ಟು 312 ಪ್ರಾಂಶುಪಾಲ ಹುದ್ದೆಗಳನ್ನು ಸೃಷ್ಟಿಸಿ ಭರ್ತಿ ಮಾಡುವ ಪ್ರಸ್ತಾವನೆಗೆ ಹಣಕಾಸು ಇಲಾಖೆ ಸಮ್ಮತಿ ನೀಡಿದೆ ಎಂದು ಹೇಳಲಾಗಿದೆ.

ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ: ಮೈಸೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕನಿಷ್ಠ 10 ವರ್ಷ ಹಂಗಾಮಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನು ಕಾಯಂಗೊಳಿಸಬೇಕೆಂಬ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಯುಜಿಸಿ ಮಾರ್ಗಸೂಚಿಯಂತೆ ಹಂಗಾಮಿ ಮತ್ತು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಮೈಸೂರು ವಿ.ವಿ.ಯಲ್ಲಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ 79 ಮಂದಿಯನ್ನು ಕಾಯಂಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next