Advertisement

Desi Swara: ಹೊನ್ನುಡಿ- ಅಗತ್ಯ ಸಮಯದಲ್ಲಿ ಅಲ್ಪವೂ ಅಮೂಲ್ಯ

01:45 PM Aug 17, 2024 | Team Udayavani |

ಅದೊಂದು ದಿನ ರಾತ್ರಿ ಬಹಳ ಜೋರಾಗಿ ಮಳೆ ಬೀಳುತ್ತಿದ್ದಾಗ, ಬಾಗಿಲು ತಟ್ಟಿದ ಶಬ್ದವಾಯಿತು. “ಯಾರೋ ದಾರಿ ತಪ್ಪಿ ಬಂದಿರಬೇಕು. ಬಾಗಿಲು ತೆಗಿ’ ಎಂದು ಪುಟ್ಟ ಗುಡಿಸಲಿನ ಬಾಗಿಲ ಬಳಿಯಲ್ಲಿ ಮಲಗಿದ್ದ ತನ್ನ ಪತ್ನಿಗೆ ಗಂಡ ಹೇಳಿದಾಗ, ಸಿಡುಕಿದ ಪತ್ನಿ “ಇರುವ ಸ್ಥಳ ನಮಗೇ ಇಕ್ಕಟ್ಟಾಗಿದೆ. ಈಗ ಇನ್ನೊಬ್ಬರಿಗೆ ಎಲ್ಲಿದೆ? ಸುಮ್ಮನೆ ಮಲಗಿ’ ಎಂದಳು.

Advertisement

“ಸ್ಥಳಾವಕಾಶ ಇಲ್ಲವೆಂದು ಹೇಳುವುದಕ್ಕೆ ಇದೇನು ರಾಜನ ಅರಮನೆಯೇ? ಇದು ಬಡವನ ಗುಡಿಸಲು. ಇಬ್ಬರು ಮಲಗುವ ಜಾಗದಲ್ಲಿ ಮೂವರು ಕುಳಿತುಕೊಳ್ಳಬಹುದು ಬಾಗಿಲು ತೆಗಿ ಎಂದಾಗ ಪತ್ನಿ ಬಾಗಿಲು ತೆಗೆದಳು. ಒಳಗೆ ಬಂದ ವ್ಯಕ್ತಿ ಕೃತಜ್ಞತೆಯನ್ನು ಸಲ್ಲಿಸಿದ. ಮೂವರು ಕುಳಿತುಕೊಂಡು ಮಾತನಾಡುತ್ತ ರಾತ್ರಿ ಕಳೆಯುತ್ತಿದ್ದರು. ಅಷ್ಟರಲ್ಲಿ ಮತ್ತೆ ಇನ್ಯಾರೋ ಬಾಗಿಲು ಬಡಿದ ಶಬ್ಧವಾಯಿತು. ಗಂಡ ಬಾಗಿಲ ಬಳಿ ಕುಳಿತಿದ್ದ ಅತಿಥಿಗೆ ಬಾಗಿಲು ತೆಗೆಯುವಂತೆ ಹೇಳಿದ. ಇನ್ನೊಬ್ಬರಿಗೆ ಎಲ್ಲಿದೆ ಸ್ಥಳ? ನಿಜಕ್ಕೂ ನೀವು ವಿಚಿತ್ರ ಮನುಷ್ಯನಿರಬೇಕು. ಅದಕ್ಕೆ ಹೀಗೆ ಹೇಳುತ್ತಿರುವಿರಿ ಎಂದ.

ನನ್ನ ಪತ್ನಿಯೂ ಹೀಗೆಯೇ ವಾದಿಸುತ್ತಾಳೆ. ನಾನು ಅವಳ ಮಾತನ್ನು ಕೇಳಿದ್ದಿದ್ದರೆ ನೀವು ಹೊರಗೆಯೇ ಇರಬೇಕಾಗುತ್ತಿತ್ತು. ಮಲಗಿದ್ದ ನಾವು ನಿಮಗೋಸ್ಕರ ಕುಳಿತುಕೊಂಡಿದ್ದೇವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಮೂವರು ಆರಾಮಾಗಿ ಕುಳಿತುಕೊಳ್ಳುವ ಜಾಗದಲ್ಲಿ ನಾಲ್ವರು ಇಕ್ಕಟ್ಟಾಗಿ ಕುಳಿತುಕೊಳ್ಳಬಹುದು ಬಾಗಿಲು ತೆಗಿಯಿರಿ ಎಂದ.

ಇನ್ನು ಇವನೊಂದಿಗೆ ವಾದಿಸಿ ಪ್ರಯೋಜನವಿಲ್ಲವೆಂದುಕೊಂಡ ಅವನು ಬಾಗಿಲು ತೆಗೆದ. ಒಳಗೆ ಬಂದ ವ್ಯಕ್ತಿ ನಿಮ್ಮಿಂದ ಬಹಳ ಉಪಕಾರವಾಯಿತು ಎಂದ. ಇನ್ನೂ ಬೆಳಗಾಗಲು ಬಹಳ ಹೊತ್ತಿದೆ. ಅಲ್ಲಿಯವರೆಗೆ ಎಲ್ಲರೂ ಒತ್ತೂತ್ತಾಗಿ ಕುಳಿತು ರಾತ್ರಿ ಕಳೆಯೋಣ ಎಂಬ ಗಂಡನ ಮಾತಿನಂತೆ ಎಲ್ಲರೂ ಇಕ್ಕಟ್ಟಾದ ಸ್ಥಳದಲ್ಲಿ ಒತ್ತೂತ್ತಾಗಿ ಕುಳಿತರು. ಸ್ವಲ್ಪ ಸಮಯದ ಅನಂತರ ಮತ್ತೆ ಬಾಗಿಲನ್ನು ಒದೆಯುವ ಶಬ್ಧ ಕೇಳಿಸಿತು. ಮನೆಯೊಡೆಯ ಎಲ್ಲಿ ಬಾಗಿಲು ತೆಗೆಯಲು ಹೇಳುತ್ತಾನೋ ಎಂದು ಅವರೆಲ್ಲ ಭಯಪಟ್ಟರು. ಅದನ್ನು ಕಂಡ ಅವನು ನೀವೇನೂ ಭಯಪಡುವ ಆವಶ್ಯಕತೆಯಿಲ್ಲ. ಏಕೆಂದರೆ ಬಾಗಿಲನ್ನು ಒದ್ದಿದ್ದು ಪ್ರತಿದಿನ ನಾನು ಕಡಿದ ಕಟ್ಟಿಗೆಯ ಹೊರೆಯನ್ನು ಹೊರುವ ನನ್ನ ಕತ್ತೆ. ಮಳೆಯಲ್ಲಿ ಬಹಳ ನೆನೆದಿರಬೇಕು. ಅದಕ್ಕೇ ಒಳಬರಲು ಬಾಗಿಲನ್ನು ಒದ್ದಿದೆ. ಬಾಗಿಲು ತೆಗೆಯಿರಿ ಎಂದ.

Advertisement

ಅವನ ಮಾತನ್ನು ವಿರೋಧಿಸಿದ ಅತಿಥಿಗಳು, ನಮಗೇ ಕುಳಿತುಕೊಳ್ಳಲು ಜಾಗವಿಲ್ಲ ಇನ್ನು ಕತ್ತೆಯನ್ನೂ ಒಳಗೆ ಬರಮಾಡಿಕೊಳ್ಳಬೇಕಂತೆ. ಇನ್ನು ಇಲ್ಲಿರುವುದಕ್ಕಿಂತ ಕಾಡಿನಲ್ಲಿ ಕಳೆದುಕೊಳ್ಳುವುದೇ ವಾಸಿ ಎನ್ನುತ್ತ ಹೊರಡಲು ಸಿದ್ಧರಾದರು. ಆಗ ಅವನು “ದಯವಿಟ್ಟು ಹೋಗಬೇಡಿ. ಕತ್ತೆ ಒಳಗೆ ಬಂದರೂ ಸ್ಥಳಾವಕಾಶ ಮಾಡಿಕೊಡಬಹುದು ಮೊದಲು ಬಾಗಿಲು ತೆಗೆಯಿರಿ’ ಎಂದ. ಅದು ಹೇಗೆ ಸ್ಥಳಾವಕಾಶ ಮಾಡಿಕೊಡುತ್ತಾನೋ ನೋಡಿಯೇ ಬಿಡೋಣ ಎಂದುಕೊಂಡ ಅತಿಥಿಗಳು ಬಾಗಿಲು ತೆಗೆದರು.

ಮಳೆಯಲ್ಲಿ ಪೂರ್ತಿ ಒದ್ದೆಯಾಗಿದ್ದ ಕತ್ತೆಯನ್ನು ಕೋಣೆಯ ನಡುವೆ ನಿಲ್ಲಿಸಿ, ಉಳಿದವರು ಸುತ್ತಲೂ ನಿಂತುಕೊಳ್ಳುವಂತೆ ಮನೆಯೊಡೆಯ ಹೇಳಿದ. ರಾತ್ರಿ ಕಳೆದು ಬೆಳಗಾಯಿತು. ತಮ್ಮ ತಮ್ಮ ಸ್ಥಳಗಳಿಗೆ ಹೊರಡುವ ಮುನ್ನ ಅವರೆಲ್ಲರೂ “ಅಯ್ಯಾ, ರಾತ್ರಿ ನಾವು ನಿಮ್ಮೊಂದಿಗೆ ವರ್ತಿಸಿದ ರೀತಿಗೆ ಕ್ಷಮೆಯಿರಲಿ. ಸಹಾಯ ಮಾಡಲು ಸಿರಿತನ ಇಲ್ಲದಿದ್ದರೇನಂತೆ ಕಷ್ಟಕ್ಕೆ ಮಿಡಿಯುವ ಹೃದಯವಿದ್ದರೆ ಸಾಕು. ಅಗತ್ಯವಾದ ವೇಳೆಯಲ್ಲಿ ಕೊಟ್ಟಿದ್ದು ಅಲ್ಪವಾದರೂ ಅಮೂಲ್ಯ ಎಂಬ ಜೀವನ ಪಾಠವನ್ನು ನಿಮ್ಮಿಂದ ಕಲಿತೆವು. ಅದಕ್ಕಾಗಿ ನಾವು ನಿನಗೆ ಚಿರಋಣಿಗಳಾಗಿದ್ದೇವೆ’ ಎಂದು ಹೇಳಿ ಅಲ್ಲಿಂದ ಹೊರಟರು.

Advertisement

Udayavani is now on Telegram. Click here to join our channel and stay updated with the latest news.