ಧಾರವಾಡ: ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಿಸರ್ಗದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಡಾ| ಪ್ರಕಾಶ ಭಟ್ ಹೇಳಿದರು. ನೇಚರ್ ಫಸ್ಟ್ ಇಕೋ ವಿಲೇಜ್ ಹಾಗೂ ನೇಚರ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಹಳ್ಳಿಗೇರಿಯ ಇಕೋ ವಿಲೇಜ್‌ನಲ್ಲಿ ವಿಶ್ವ ನಿಸರ್ಗ ಸಂರಕ್ಷಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲೆಯ ಯುವ ಹಸಿರು ಸಂರಕ್ಷಕರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯ ತೃಣಮೂಲದಲ್ಲಿ ಕೆಲಸ ಮಾಡುವ ಬಹಳಷ್ಟು ವ್ಯಕ್ತಿಗಳು ನಿಸರ್ಗದ ಪ್ರೇಮದಿಂದಾಗಿ ಭಾವನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ಕುಶಲತೆ, ಜ್ಞಾನ ಮತ್ತು ಪರಿಣಿತಿ ಹೊಂದಿರುವ ತಜ್ಞರು ಈ ನಿಸರ್ಗದ ಉಳಿಸುವಿಕೆಯಿಂದ ದೂರವಿದ್ದಾರೆ. ಈ ಎರಡೂ ಕ್ಷೇತ್ರಗಳ ವ್ಯಕ್ತಿಗಳು ಒಂದಾದರೆ ನಿಸರ್ಗ ಸಂರಕ್ಷಣೆಯಲ್ಲಿ ಮಹತ್ತರ ಪರಿಣಾಮ ನಿಶ್ಚಿತ. ನೇಚರ್ ರಿಸರ್ಚ್ ಸೆಂಟರ್ ಹಾಗೂ ಇಕೋ ವಿಲೇಜ್ ಈ ಎರಡು ಕ್ಷೇತ್ರಗಳನ್ನು ಒಂದಾಗಿಸುವ ಒಂದು ವೇದಿಕೆಯಾಗಬೇಕು ಎಂದರು.
ಡಾ| ಸಂಜೀವ ಕುಲಕರ್ಣಿ ಮಾತ ನಾಡಿ, ನಿಸರ್ಗ ಸಂರಕ್ಷಕರ ವಿಂಗಡಣೆ ಮಾಡಿದರೆ ಸಾವಿರ ಮಂದಿ ಸಿಗುತ್ತಾರೆ. ಅವರಲ್ಲಿ ತುಲನೆ ಮಾಡಿದರೆ ಕೇವಲ ಒಬ್ಬ ಮಾತ್ರ ಸಂಪೂರ್ಣ ಜೀವನವನ್ನು ಹಸಿರಿನ ಉಳಿವಿಗೆ ತೊಡಗಿಸಿಕೊಂಡ ನಿಸರ್ಗ ಸಂರಕ್ಷಕ ಸಿಗುತ್ತಾನೆ. ಆದರೆ, ಇದಾವುದರ ಗೊಡವೆ ಗೊತ್ತಿಲ್ಲದ ಸಹಜ ಜೀವನ ಶೈಲಿ ಹೊಂದಿರುವ ಸಾವಿರಾರು ವ್ಯಕ್ತಿಗಳು ನಮ್ಮ ಗ್ರಾಮಗಳಲ್ಲಿದ್ದಾರೆ. ಅಂತವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.
ಟ್ಯಾಲೆಂಟ್ ಟ್ರೀ ಕನ್ಸಲ್ಟಿಂಗ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಜಗದೀಶ ನಾಯಕ ಮಾತನಾಡಿ, ನಮ್ಮ ದೇಶದಲ್ಲಿ ತಂತ್ರಜ್ಞಾನ ಮತ್ತು ನಿಸರ್ಗ ಜ್ಞಾನ ಒಟ್ಟಾಗಿ ನಡೆಯುವ ಅವಶ್ಯಕತೆ ಇದೆ. ಯೂರೋಪ್ ರಾಷ್ಟ್ರಗಳ ಕಟ್ಟುನಿಟ್ಟು ಪರಿಸರ ರಕ್ಷಣಾ ಕ್ರಮಗಳು ಎಲ್ಲರಿಗೂ ಮಾದರಿ ಎಂದರು. ಅಧ್ಯಕ್ಷತೆ ವಹಿಸದ್ದ ನೇಚರ್ ಫಸ್ಟ್ ಇಕೋ ವಿಲೇಜ್‌ನ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ನಿಸರ್ಗ ಸಂರಕ್ಷಣೆ ಪ್ರತಿ ಮನೆ ಮನೆಯ ಮೊದಲ ಪಾಠವಾಗಬೇಕು.
ಆ ಮಾರ್ಗದಲ್ಲಿ ಇಕೋ ವಿಲೇಜ್ ತನ್ನ ಮೂಲ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದರು. ಇಕೋ ವಿಲೇಜ್‌ನ ಪ್ರಧಾನ ಸೇವಕ ಪ್ರಕಾಶ ಗೌಡರ್ ನಿರೂಪಿಸಿದರು. ನೇಚರ್ ರಿಸರ್ಚ್ ಸೆಂಟರ್‌ನ ಖಜಾಂಚಿ ಡಾ| ಧೀರಜ ವಿರನಗೌಡರ ಪರಿಚಯಿಸಿದರು. ಅನಿಲ್ ಅಳ್ಳೊಳಿ ವಂದಿಸಿದರು.
ಯುವ ಪರಿಸರ ಸಂರಕ್ಷಕರಾದ ಅನಿರುದ್ಧ ಕಾಮಕರ್, ಪೂರ್ತಿ ಶರ್ಮಾ, ಒಟಿಲಿ ಆನೆಬೆನ್, ಅಸ್ಲಂಜಹಾನ್ ಅಬ್ಬಿಹಾಳ್, ಕರಣ್ ದೊಡವಾಡ, ಸುನೀಲ್ ಬಾಗೇವಾಡಿ, ಶಿವಾಜಿ ಸೂರ್ಯವಂಶಿ, ಪವನ್ ಮಿಸ್ಕಿನ್, ಯಲ್ಲಪ್ಪಾ ಜೋಡಳ್ಳಿ, ಸಂತೋಷ ಓಸವಾಲ, ಕಿರಣ ಹಿರೇಮಠ, ಸಂತೋಷ ನರಗುಂದ, ಮಂಜುನಾಥ ಹಿರೇಮಠ, ವೀರೇಶ ಕೇಲಗೇರಿ, ಸಿಕಂದರ್ ಮೀರನಾಯಕ್, ಶ್ರೀನಿವಾಸ ಇಂಚೂರ್, ಲಿಂಗರಾಜ ನಿಡುವಣಿ ಅವರನ್ನು ಸನ್ಮಾನಿಸಲಾಯಿತು. ದೊಡ್ಡ ಹುಣಸೆ ಮರವನ್ನು ನೆಡಲಾಯಿತು.